Advertisement
ನಗರದ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಜನ ಸಮಾನ್ಯರನ್ನು ಬೆಚ್ಚಿ ಬೀಳಿಸುವಂತಿದೆ. ಇದೀಗ ಮಳೆಗಾಲ ಕಡಿಮೆಯಾಗಿ ಬಿಸಿಲಿನ ವಾತಾವರಣ ಆರಂಭವಾಗಿದ್ದರೂ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ನಗರಸಭೆ ಕ್ರಮವಹಿಸಿದಂತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿನ ಅಪಾಯಕಾರಿ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುವುದು ಮಾತ್ರವಲ್ಲದೇ ಟ್ರಾಫಿಕ್ ಸಮಸ್ಯೆಯನ್ನು ಸೃಷ್ಟಿಸುತ್ತಿವೆ.
Related Articles
Advertisement
ಕಲ್ಸಂಕ ಪರಿಸರದಲ್ಲಿ ರಸ್ತೆ ಬದಿಯ ಎರಡು ಕಡೆಗಳಲ್ಲಿ ಇಂಟರ್‌ಲಾಕ್ ಜಾಗದಲ್ಲಿ ಮಣ್ಣು ಕುಸಿದು ಬೃಹತ್ ಗುಂಡಿ ಸೃಷ್ಟಿಯಾಗುತ್ತಿದೆ. ಈಗಾಗಲೆ ಪೈಪ್‌ಲೈನ್ ಸಹಿತ ಮೊದಲಾದ ಕಾಮಗಾರಿ ಕಾರಣದಿಂದ ಈ ಪರಿಸರದಲ್ಲಿ ಇಂಟರ್‌ಲಾಕ್ ತೆಗೆದು ಕಾಮಗಾರಿ ನಡೆಸಲಾಗಿತ್ತು.
ಆ ಪ್ರದೇಶ ಕುಸಿತವಾಗುತ್ತಿದ್ದು, ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ. ಕಲ್ಸಂಕ ಯಾವಾಗಲು ಹೆಚ್ಚು ವಾಹನ ಸಂಚಾರದ ವೃತ್ತವಾಗಿದೆ. ಶ್ರೀ ಕೃಷ್ಣ ಮಠಕ್ಕೆ ಬರುವ ಭಕ್ತರ ವಾಹನಗಳು ಇದೇ ಮಾರ್ಗದಲ್ಲಿ ಓಡಾಟ ನಡೆಸುತ್ತವೆ. ಇಲ್ಲಿ ಕೊಂಚ ಎಚ್ಚರ ತಪ್ಪಿ ಬದಿಯಲ್ಲಿ ಸಂಚರಿಸಿದರೂ ನಿಯಂತ್ರಣ ತಪ್ಪಿ ಬೀಳುವ ಅಪಾಯವಿದೆ. ಈ ಬಗ್ಗೆ ನಗರಸಭೆ ಅಥವಾ ಸೂಕ್ತ ಕ್ರಮವಹಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪರ್ಯಾಯ ಸಮಯದಲ್ಲಿ ನಿರ್ಮಿಸಲಾಗಿದ್ದ ಬ್ರಹ್ಮಗಿರಿಯಿಂದ ಅಜ್ಜರಕಾಡು ರಸ್ತೆ ಮೇಲಿನ ತೇಪೆ ಮತ್ತೆ ಕಿತ್ತುಹೋಗಿ ಗುಂಡಿ ಬಿದ್ದಿವೆ. ಇಲ್ಲಿ ವಾಹನ ಸವಾರಿ ನಿತ್ಯ ಕಿರಿಕಿರಿ ಎಂದೆನಿಸಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿರುವುದರಿಂದ ಅಪಾಯಕಾರಿ ಗುಂಡಿಗಳನ್ನು ಗುರುತಿಸಿ ಶೀಘ್ರ ದುರಸ್ತಿ ಪಡಿಸುವಂತೆ ನಗರಸಭೆಯನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆ ಕಡಿಮೆಯಾಗಿರುವುದರಿಂದ ನಗರದಲ್ಲಿ ಹದಗೆಟ್ಟ ರಸ್ತೆ ಮತ್ತು ಗುಂಡಿಗಳ ದುರಸ್ತಿಗೆ ಕ್ರಮವಹಿಸಲಾಗುವುದು. ನಗರದ ಹೆದ್ದಾರಿ ರಸ್ತೆ ಬದಿ ಇಂಟರ್‌ಲಾಕ್ ಅಳವಡಿಸಿದ ಕಡೆಗಳಲ್ಲಿಯೂ ಕೆಲವು ಅವ್ಯವಸ್ಥೆ ಇದ್ದು, ಸರಿಪಡಿಸಲು ಹೆದ್ದಾರಿ ಎಂಜಿನಿಯರ್‌ಗೆ ಸೂಚನೆ ನೀಡಲಾಗುವುದು. ವಾರಾಹಿ ಪೈಪ್‌ಲೈನ್ ಅನಂತರ ಕೆಲವು ರಸ್ತೆ ದುರಸ್ತಿ ಗೆ ಬಾಕಿ ಇದ್ದು, ಇದನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ತಿಳಿಸಲಾಗುವುದು. ಶಿರಿಬೀಡು ಯುಜಿಡಿ ಮ್ಯಾನ್‌ಹೋಲ್ ಕುಸಿದು ಹೋಗಿದ್ದು, ದುರಸ್ತಿ ಕಾರ್ಯ ಅಗತ್ಯವಾಗಿತ್ತು. ಶೀಘ್ರವಾಗಿ ಕಾಮಗಾರಿ ಮುಗಿಸಿ, ವ್ಯವಸ್ಥಿತ ರಸ್ತೆ ನಿರ್ಮಿಸಲಾಗುವುದು. – ಪ್ರಭಾಕರ್ ಪೂಜಾರಿ, ಅಧ್ಯಕ್ಷರು, ಉಡುಪಿ ನಗರಸಭೆ.
ಸರ್ವಿಸ್ ಬಸ್ ನಿಲ್ದಾಣದಿಂದ ಶಿರಿಬೀಡು ವೃತ್ತ ಸಂಪರ್ಕಿಸುವ ರಸ್ತೆಯಲ್ಲಿ ಒಳಚರಂಡಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಪರಿಣಾಮ ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರ್ಯಾಯ ಮಾರ್ಗದಲ್ಲಿನ ಸಂಚಾರದಲ್ಲಿ ವಾಹನಗಳ ಒತ್ತಡ ಅಧಿಕಗೊಂಡು ಆಗಾಗ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಸದ್ಯಕ್ಕೆ ಮೂರರಿಂದ ನಾಲ್ಕು ಮಂದಿ ಪೊಲೀಸ್ ಸಿಬಂದಿ ಸುಗಮ ಸಂಚಾರಕ್ಕೆ ನಿಯೋಜಿಸಲ್ಪಟ್ಟಿದ್ದು, ವಾಹನ ದಟ್ಟಣೆ ಅಧಿಕವಿದ್ದಾಗ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶೀಘ್ರ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಕ್ರಮವಹಿಸಲು ಸ್ಥಳೀಯರು ಸೂಚಿಸಿದ್ದಾರೆ.