Advertisement

ಕೇರಳದಲ್ಲೂ  ರಸ್ತೆಗಿಳಿಯಲಿವೆ ಇಲೆಕ್ಟ್ರಿಕ್‌ ರಿಕ್ಷಾ, ಬಸ್‌

12:13 PM Jan 04, 2018 | Team Udayavani |

ಕಾಸರಗೋಡು: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ದಲ್ಲೂ “ಇಲೆಕ್ಟ್ರಿಕ್‌ ಆಟೋ ರಿಕ್ಷಾ, ಬಸ್‌’ ಗಳು ರಸ್ತೆಗಿಳಿಯಲಿವೆೆ. ಕರ್ನಾಟಕದಲ್ಲಿ ಮಾರ್ಚ್‌ ಮೊದಲ ವಾರದ ವೇಳೆಗೆ ಇಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಆರಂಭಿ ಸಲಿದೆ. ಈಗಾಗಲೇ ಕರ್ನಾಟಕ ಸರಕಾರ ಇಲೆಕ್ಟ್ರಿಕ್‌ ಬಸ್‌ಗಳಿಗಾಗಿ ಜಾಗತಿಕ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೀಗಿರುವಂತೆ ಕೇರಳದಲ್ಲೂ  ಇಲೆಕ್ಟ್ರಿಕ್‌ ಆಟೋ ರಿಕ್ಷಾ ಮತ್ತು ಬಸ್‌ಗಳನ್ನು ರಸ್ತೆಗಿಳಿಸುವ ಕುರಿತಾಗಿ ಸರಕಾರ ಪ್ರಾಥಮಿಕ ರೂಪುರೇಷೆ ಸಿದ್ಧಪಡಿಸಿದೆ.

Advertisement

ಪ್ರಾರಂಭಿಕ ಹಂತದಲ್ಲಿ ಆಟೋ ರಿಕ್ಷಾ ಮತ್ತು ಬಸ್‌ಗಳಲ್ಲಿ ಈ ಪ್ರಯೋಗ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇತರ ವಾಹನಗಳಲ್ಲೂ ಇಲೆಕ್ಟ್ರಿಕ್‌ ವ್ಯವಸ್ಥೆಗೊಳಿಸಲಾಗುವುದು. ಅಂಗೀಕಾರ ಲಭಿಸಿದರೆ ಮುಂದಿನ ನಾಲ್ಕು ತಿಂಗಳಲ್ಲಿ ಕೇರಳದಲ್ಲಿ ಇಲೆಕ್ಟ್ರಿಕ್‌ ಆಟೋ, ಬಸ್‌ ಸಂಚಾರ ಆರಂಭಗೊಳ್ಳಲಿದೆ. ಕೇವಲ ನಾಲ್ಕೇ ತಿಂಗಳಲ್ಲಿ ಆಟೋ ರಿಕ್ಷಾಗಳನ್ನು ಇಲೆಕ್ಟ್ರಿಕ್‌ ಆಟೋಗಳಾಗಿ ಬದಲಾಯಿಸಲು ಸಾಧ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಭವಿಷ್ಯದಲ್ಲಿ ಇ-ಆಟೋಗಳಿಗೆ ಮಾತ್ರವೇ ಪರ್ಮಿಟ್‌ ನೀಡಿ ಪೆಟ್ರೋಲ್‌-ಡೀಸಲ್‌ ಆಟೋಗಳಿಗೆ ನಿಧಾನವಾಗಿ ನಿಯಂತ್ರಣ ಏರ್ಪಡಿಸಲಾಗುವುದು. ಇ-ವಾಹನ ಗಳಿಗೆ ಸಬ್ಸಿಡಿ ಯಶಸ್ವಿಯಾಗದು ಎಂಬ ಕಾರಣಕ್ಕೆ ಸಬ್ಸಿಡಿಗೆ ಬದಲಾಗಿ ತೆರಿಗೆ ಕಡಿತ ಮೊದಲಾದ ಸೌಲಭ್ಯಗಳನ್ನು ಒದಗಿಸಲು ಮುಂದಿನ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ.

ಯೋಜನೆಯ ಪ್ರಚಾರಾರ್ಥವಾಗಿ ಪ್ರಥಮ ನಾಲ್ಕು ವರ್ಷದ ವರೆಗೆ ವಿದ್ಯುತ್‌ ದರದಲ್ಲಿ ಹೆಚ್ಚಳಗೊಳಿಸುವುದಿಲ್ಲ. ಇ-ವಾಹನ ನಿರ್ಮಿಸುವ ಕಂಪೆನಿಗಳಾದ ಬಿವೈಡಿ, ಮಹೀಂದ್ರ, ಗೊಗೊರೋ ಮೊದಲಾದ ಕಂಪೆನಿಗಳೊಂದಿಗೆ ಸರಕಾರ ಪ್ರಾಥಮಿಕ ಚರ್ಚೆ ಆರಂಭಿಸಿದೆ. 

ಬಸ್‌ಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮದ್ರಾಸ್‌ ಐಐಟಿ ಮತ್ತು ಕೇಂದ್ರ ಇಂಧನ ಸಚಿವರ ಸಲಹೆಗಾರರಾದ ಅಶೋಕ್‌ ಜುನ್‌ಜುನ್‌ ವಾಲ ನೇತೃತ್ವದಲ್ಲಿ ದೆಹಲಿಯಲ್ಲಿ ಈಗಾಗಲೇ ಚರ್ಚಿಸಿದೆ. ಮುಂದಿನ ಒಂದು ತಿಂಗಳೊಳಗೆ ಈ ಸಂಬಂಧವಾದ ಕರಡು ಸರಕಾರಕ್ಕೆ ಸಮರ್ಪಿಸಲಾಗುವುದು.

ಪ್ರಮುಖ ನಿರ್ದೇಶಗಳು 
ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಮತ್ತು ಕೆಎಸ್‌ಇಬಿಯ ಸಹಕಾರದೊಂದಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಬ್ಯಾಟರಿ ಬದಲಾಯಿಸುವ ಸ್ಟೇಶನ್‌ಗಳ ಸ್ಥಾಪನೆ

Advertisement

ಆಟೋ ರಿಕ್ಷಾಗಳಿಗೆ ಅಧಿಕ ಹಣ ಖರ್ಚಿಲ್ಲದೆ ಇ-ಆಟೋಗಳಾಗಿ ಬದಲಾಯಿಸಲು ತೆರಿಗೆಯಲ್ಲಿ ರಿಯಾಯಿತಿ ಶಿಫಾರಸು

ಅಧಿಕ ಹಣ ವೆಚ್ಚಮಾಡದಂತೆ ವಾಹನ ಉತ್ಪಾದನೆಗಳ ಬಗ್ಗೆ ಆರಂಭಿಕ ಹಂತದಲ್ಲಿ ಯಾವುದೇ ಕರಾರು ಬೇಡ

ದಿನ ದಿನಗಳಲ್ಲಿ ವಾಹನಗಳನ್ನು ಇಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿ ಇ-ವೆಹಿಕಲ್‌ ಜೋನ್‌ ರೂಪೀಕರಿಸಲಾಗುವುದು

ಇ-ವಾಹನಗಳಿಗೆ ನಿಗದಿಪಡಿಸಿದ ವಿದ್ಯುತ್‌ ದರ (ಒಂದು ಯೂನಿಟ್‌ಗೆ) 
ರಾತ್ರಿ 11ರಿಂದ ಬೆಳಗ್ಗೆ  ಐದು ಗಂಟೆಯ ವರೆಗೆ 5 ರೂ.
ಸಂಜೆ  5ರಿಂದ 6ರ ವರೆಗೆ 5.50 ರೂ.
ಸಂಜೆ 6 ರಿಂದ ರಾತ್ರಿ 11 ರ ವರೆಗೆ 6 ರೂ.

Advertisement

Udayavani is now on Telegram. Click here to join our channel and stay updated with the latest news.

Next