Advertisement

ಆಗ ನೀನೆಲ್ಲಿಯಾಕೆ ಅಂದಾವ್ರು, ಈಗ ನೀನೇ ಯಲ್ಲಮ್ಮ ಅನ್ನಾತಾರು

06:05 AM Jan 27, 2018 | Team Udayavani |

ಧಾರವಾಡ: ಅದು ಕೊಕೊಟನೂರಿನ ಯಲ್ಲಮ್ಮನ ಜಾತ್ರೆ. ಮುತ್ತು ಕಟ್ಟಿಕೊಂಡು ದೇವದಾಸಿಯಾಗುವುದಕ್ಕೆ ಹೊರಟಿದ್ದ ಹದಿಹರೆಯದ ರುಕ್ಮವ್ವಳನ್ನು (ಹೆಸರು ಬದಲಿಸಲಾಗಿದೆ) ತಡೆದಾಗ ಹತ್ತಿಪ್ಪತ್ತು ದೇವದಾಸಿಯರು ನನ್ನ ಮೇಲೆ ಹಲ್ಲೆ ಮಾಡಿದರು. ಏಟು ತಿಂದ ನಂತರ ನಾನು ಅವರಿಗೆ ಮರಳಿ ಹೊಡೆಯಲಿಲ್ಲ;ಅವರಿಗೆ ಈ ಅನಿಷ್ಟದ ಬಗ್ಗೆ ತಿಳಿವಳಿಕೆ ಹೇಳಿದೆ…

Advertisement

ಈ ಮಾತನ್ನು ಹೇಳುವಾಗ ಪದ್ಮಶ್ರೀ ಸೀತವ್ವ ಜೋಡಟ್ಟಿ ಧ್ವನಿ ನಡುಗುತ್ತಿತ್ತು. ಅವರ ಮಾತಿನಲ್ಲಿ ದುಃಖ ತೇಲಿ ಬಂತು. ಒಂದಿಷ್ಟು ಮೌನದ ಮತ್ತೆ ಗಟ್ಟಿ ಧ್ವನಿಯಲ್ಲಿ ಮಾತು ಆರಂಭಿಸಿದ ಸೀತವ್ವ, ಆದ್ರ ಇವತ್ತ ಅದ ಊರಿನ ಮಂದಿ ನಾನ ಹೋದರ ಎದ್ದು ನಿಂತು ಗೌರವ ಕೊಟ್ಟು, ಕೈ ತುತ್ತು ತಿನಿಸಿ ಪ್ರೀತಿ ತೋರಿಸ್ತಾರ. ನನಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ? ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ದೂರವಾಣಿ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡ ಸೀತವ್ವ,ಏಳು ವರ್ಷದವಳಿದ್ದಾಗಲೇ ಒಬ್ಬ ದೇವದಾಸಿಯಾಗಿದ್ದ ನಾನು ನನ್ನ ಇಡೀ ಜೀವನವನ್ನೇ ಆ
ಅನಿಷ್ಟ ಪದ್ಧತಿಗೆ ಬಲಿಕೊಡಬೇಕಾಯಿತು. ಯಾರೂ ಪಡಲಾರದ ಕಷ್ಟಗಳನ್ನು ಅನುಭವಿಸಿದೆ.ನನ್ನ ಕಷ್ಟಗಳು ಇನ್ನೊಂದು ಹೆಣ್ಣಿಗೆ ಆಗಬಾರದು ಎಂದು ಸಂಘ ಕಟ್ಟಿಕೊಂಡು ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಆರಂಭಿಸಿದೆ. ಈ ಪದ್ಮಶ್ರೀ ಪ್ರಶಸ್ತಿ ಅಂದು ನಾನು ಗಟ್ಟಿ ಮನಸ್ಸು ಮಾಡಿ ಹೋರಾಟಕ್ಕೆ ಇಳಿದಿದ್ದರ ಪ್ರತಿಫಲವೇ ಆಗಿದೆ ಎಂದು ತಮ್ಮ ಯಶೋಗಾಥೆ ಬಿಚ್ಚಿಟ್ಟರು.

ಯಲ್ಲಮ್ಮಳನ್ನೇ ಸವಾಲಾಗಿ ಸ್ವೀಕರಿಸಿದೆ: ದೇವಿ ಸ್ವರೂಪವಾಗಿರುವ ತಾಯಿ ಯಲ್ಲಮ್ಮನ ಹೆಸರಿನಲ್ಲಿ ಇಲ್ಲಿನ ಪಾಳೆಗಾರಿಕೆ ವ್ಯವಸ್ಥೆ ದೇವದಾಸಿ ಪದ್ಧತಿಯನ್ನು ರೂಪಿಸಿತ್ತು. ಆದರೆ ದೇವದಾಸಿಯಾಗಿದ್ದ ನನಗೆ ಅದರಲ್ಲಿನ ಹುನ್ನಾರಗಳು ಚೆನ್ನಾಗಿ ತಿಳಿದವು. ಹೀಗಾಗಿ ಈ ಅನಿಷ್ಟ ಪದ್ಧತಿ ತೊಲಗಿಸುವ ಕೆಲಸ ಆರಂಭಿಸಿದೆ. ದೇವದಾಸಿ 
ಯಾಗುವ ಹದಿಹರೆಯದ ಹುಡುಗಿಯರನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ ದೇವದಾಸಿ ಪದ್ಧತಿಯ ಅನಿಷ್ಟಗಳನ್ನು ಮನವರಿಕೆ ಮಾಡಿಕೊಟ್ಟೆ.

ಆಗ ಎಷ್ಟೋ ಹುಡುಗಿಯರು ತಮ್ಮ ಕುಟುಂಬದವರ ಕಣ್ಣು ತಪ್ಪಿಸಿ ಅಲ್ಲಿಂದ ಕಾಲು ಕಿತ್ತರು.ನಂತರ ಎಷ್ಟೋ ಹುಡುಗಿಯರು ದೇವದಾಸಿಯಾದ ಮೇಲೆ ನನ್ನನ್ನು ಹುಡುಕಿಕೊಂಡು ಬಂದು ಈ ಪದ್ಧತಿಯಿಂದ ಹೊರಗೆ ಬಂದರು.ಆಗ ಕೆಲವರು ನೀನು ಎಲ್ಲಿಯವಳೇ? ದೇವರ ಪದ್ಧತಿ ವಿರುದ್ಧ ಮಾತನಾಡುತ್ತಿ, ಯಲ್ಲಮ್ಮನ್ನೇ ಎದುರು ಹಾಕಿಕೊಳ್ಳುತ್ತಿಯಾ ಎಂದು ನನ್ನನ್ನು ಹೆದರಿಸಿ ಏಟು ಕೊಟ್ಟರು. ಆದರೆ ಅಂಜದೆ ಈ ಕೆಲಸ ಮಾಡಿ ಸೈ ಎನಿಸಿಕೊಂಡೆ. ಆಗ ಯಲ್ಲಮ್ಮನ ಗುಡ್ಡಕ್ಕೆ ಹೋದರೆ ನನ್ನನ್ನು ನೋಡಿ ಶಾಪ ಹಾಕಿ ಹಲ್ಲೆ ನಡೆಸುತ್ತಿದ್ದವರೇ ಈಗ ಊಟ, ವಸತಿ ವ್ಯವಸ್ಥೆ ಮಾಡಿ ಸಹಕಾರ ನೀಡುತ್ತಿದ್ದಾರೆ. ಇದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಸೀತವ್ವ ಜೋಡಟ್ಟಿ.

ಬಹಳ ಗಟ್ಟಿಗಿತ್ತೆವ್ವ.. 43 ವರ್ಷದ ಸೀತವ್ವ ಜೋಡಟ್ಟಿ ಮೂಲತಃ ಚಿಕ್ಕೋಡಿ ತಾಲೂಕಿನ ಕಬ್ಬೂರಿನವರು. 30 ವರ್ಷಗಳಿಂದ ಬೆಳಗಾವಿ ಜಿಲ್ಲಾದ್ಯಂತ ದೇವದಾಸಿ ಪದ್ಧತಿ ವಿರುದ್ಧ ಹೋರಾಡಿ ಹದಿಹರೆಯದ ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರಿಗೆ ಸುಂದರ ಬದುಕು ರೂಪಿಸಿಕೊಟ್ಟರು. 2012ರಿಂದ ಘಟಪ್ರಭಾದ ಮಾಸ್‌ ಸಂಸ್ಥೆಯ ಸಿಇಒ ಆಗಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ 23 ಕಾಯಂ ಮತ್ತು 55 ಅರೆಕಾಲಿಕ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಕೆಕ್ಕರಿಸಿಕೊಂಡು ನೋಡುವವರಿಗೆ ಅಂಜದೆ, ಕುತಂತ್ರಿ ಗಳಿಗೆ ಮಣಿಯದೆ, ದಿಟ್ಟತನದಿಂದ ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಮಾಡುತ್ತ ಬಂದಿದ್ದೇನೆ.
–  ಸೀತವ್ವ ಜೋಡಟ್ಟಿ, ಸಾಮಾಜಿಕ ಕಾರ್ಯಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next