ಆಗ ಮುಂಜಾನೆಯ ಮುಂಜಾವು. ಏಳು ಬೆಳಗಾಯಿತು, ನಿನ್ನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡು, ನಿನ್ನನ್ನು ನೀನು ತೊಡಗಿಸಿಕೋ’ ಎಂದು ಎಬ್ಬಿಸಿ ಹುರಿದುಂಬಿಸಲು ಅಲರಾಮ್‌ಗಳು ಬೇಕಾಗಿರಲಿಲ್ಲ. ಮಲೆನಾಡಿನ ತೊಟ್ಟಿಲಲ್ಲಿ ಆಡಿ ಬೆಳೆದ ನನಗೆ ಇದೇನು ಹೊಸತಲ್ಲ. ಹಕ್ಕಿಗಳ ಇಂಚರ “ಚಿಂವ್ ಚಿಂವ್’ ಎಂದು ಮನಸ್ಸನ್ನು ಮೊದಲೇ ಎಚ್ಚರಿಸುತ್ತಿದ್ದವು. ಆಗ ತನ್ನಷ್ಟಕ್ಕೆ ತಾನೇ ಏಳುತ್ತಿದ್ದೆ. ಹಸಿರ ಸುಂದರ ಪ್ರಕೃತಿಯ ಮಧ್ಯೆ ಬೆಳಗ್ಗಿನ ಕಾಫಿಯನ್ನು ಸವಿಯುತ್ತಿದ್ದರೆ ಅದೊಂದು ಸ್ವರ್ಗ! ನಮ್ಮ ತೀರ್ಥಹಳ್ಳಿಯ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರ “ಮಲೆಗಳಲ್ಲಿ ಮದುಮಗಳು’ ಎಂಬ ಅದ್ಭುತ ಕೃತಿಯನ್ನು ಓದಿದರೆ ನಿಮಗೆ ಖಂಡಿತ ಸ್ವರ್ಗವೆಂದರೆ ಮಲೆನಾಡಪ್ಪ ಎನ್ನುವ ಭಾವ, ಕಲ್ಪನೆ ಮೂಡದೆ ಇರಲಾರದು. ಎಲ್ಲೆಲ್ಲೂ ಹಚ್ಚಹಸಿರ ಹೊದಿಕೆಯನ್ನು ಹೊದ್ದಿರುವ ಪ್ರಕೃತಿಯನ್ನು ಕಂಡಾಗ ಎಂಥವರಿಗಾದರೂ ಮನದಲ್ಲೊಂದು ನವಚೈತನ್ಯ ಮೊಳೆಯುತ್ತದೆ.
ನನ್ನ ಬಾಲ್ಯದ ಪ್ರಕೃತಿಗೂ ಇಂದಿನ ಪ್ರಕೃತಿಗೂ ಅದೆಷ್ಟು ವ್ಯತ್ಯಾಸ! ಬಾಲ್ಯದಲ್ಲಿರುವಾಗ ಮಳೆಗಾಲದಲ್ಲಿ ಕಾಲಕ್ಕೆ ತಕ್ಕ ಮಳೆ, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು, ಪ್ರಕೃತಿಯೂ ಕೂಡ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಿದ್ದಳು. ಶಾಲೆಗೆ ಹೋಗುತ್ತಿದ್ದಾಗ ನನಗೆ ಬಗೆಬಗೆಯ ಬಣ್ಣ ಬಣ್ಣದ ಚಿಟ್ಟೆಗಳು ಕಾಣಸಿಗುತ್ತಿದ್ದವು. ಮಕ್ಕಳಾದ ನಮಗೆ ಅವುಗಳನ್ನು ನೋಡಿ ಅವುಗಳಂತೆ ಹಾರಾಡಬೇಕು ಎನ್ನುವಷ್ಟು ಖುಷಿಯಾಗುತ್ತಿತ್ತು. ಅಲ್ಲಲ್ಲಿ ಹರಿಯುತ್ತಿದ್ದ ಪುಟ್ಟ ಪುಟ್ಟ ತೊರೆಗಳಲ್ಲಿ ಆಡುವುದೆಂದರೆ ಮಜವೋ ಮಜಾ! ನಮ್ಮ ಶಾಲೆಯ ಸುತ್ತ ಹಣ್ಣಿನ ಮರಗಳಿದ್ದವು. ಶಿಕ್ಷಕರೂ ನಮ್ಮೊಂದಿಗೆ ಮಕ್ಕಳಾಗಿ ಹಣ್ಣನ್ನು ಕಿತ್ತು ತಿನ್ನುತ್ತಿದ್ದರು. ಅಲ್ಲಿರುತ್ತಿದ್ದ ನಲಿವೇ ಪಾಠವಾಗಿತ್ತು ನಮಗೆ.
ಈಗ ಮಲೆನಾಡಿಗೇ ಕುತ್ತು ಬಂದಿದೆ. ಪ್ರಕೃತಿ ಮುನಿಸಿಕೊಂಡಿದ್ದಾಳೆ. ಕಾಲ ಕಾಲಕ್ಕೆ ಮಳೆಯೂ ಇಲ್ಲ ಬೆಳೆಯೂ ಇಲ್ಲ. ಯಾರಿಗೂ ಬೆಳಿಗ್ಗೆ ಏಳುವ ಉತ್ಸಾಹವೇ ಇಲ್ಲ. ಎಲ್ಲೋ ಒಂದೆರಡು ಮರಗಳು ನಮಗೆ ಉಸಿರು ನೀಡುತ್ತಿವೆ. ಹಕ್ಕಿಗಳ ಚಿಲಿಪಿಲಿ ಕೇಳಲು, ಹಕ್ಕಿಗಳೇ ಎಲ್ಲೋ ಅಡಗಿ ಮರೆಯಾಗಿವೆ. ಬದುಕಲ್ಲಿ ರಂಗು ಬೀರುವ ರಂಗು ರಂಗಿನ ಚಿಟ್ಟೆಗಳೆಲ್ಲೋ ದೂರ ಹಾರಿಹೋಗಿವೆ.
ಹೀಗಿರುವಾಗ ಮಲೆನಾಡ ಪ್ರಕೃತಿ ಎಲ್ಲಿ? ಹೇಗೆ? ಸೌಂದರ್ಯವಂತೆಯಾಗುತ್ತಾಳೆ! ಅವಳ ಪ್ರೇಮಿಗಳಾದ ನಾವೇಕೆ ಸುಮ್ಮನೆ ಕೂರಬೇಕು? ಅವಳ ಸೌಂದರ್ಯ, ಚೆಲುವನ್ನು ಮರುಕಳಿಸುವ ಹೊಣೆ ನಮ್ಮ ಮೇಲಿದೆ. ಆಕೆಯನ್ನು ರಕ್ಷಿಸುವುದಾದರೆ ಮಾತ್ರ ನಿಜವಾದ “ಪ್ರಕೃತಿ ಪ್ರೇಮಿ ನಾನು’ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳ್ಳೋಣ.
ಸ್ವಾತಿ ಎಸ್.ಎಸ್.
ಪ್ರಥಮ ಬಿ.ಎಸ್ಸಿ., ಎಸ್.ಡಿ.ಎಂ. ಕಾಲೇಜು, ಉಜಿರೆ