ಇಸ್ಲಾಮಾಬಾದ್: ಕಿರುತೆರೆಯೋ ಬೆಳ್ಳಿತೆರೆಯೋ ಒಂದು ಬಾರಿ ಅವಕಾಶ ಸಿಕ್ಕರೆ ಸಾಕು, ಲೈಫ್ ಸೆಟ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ನಿಜ ಜೀವನ ಹಾಗಿಲ್ಲ.
ಹಲವು ಧಾರಾವಾಹಿಗಳಲ್ಲಿ ಮಿಂಚಿ ಪ್ರಸಿದ್ಧವಾಗಿದ್ದರೂ, ನಟನೆಗೆ ಸೂಕ್ತ ಅವಕಾಶ ಸಿಗದೇ ಪಾಕಿಸ್ಥಾನದ ನಟನೊಬ್ಬನ ಜೀವನ ಇದೀಗ ದೈನೇಸಿ ಸ್ಥಿತಿಗೆ ತಲುಪಿದೆ. ಪರಿಣಾಮ ಪ್ರಸಿದ್ಧ ನಟ ಕೊನೆಗೆ ಪೈಂಟರ್ ಆಗಿದ್ದಾನೆ!
ಅಷ್ಟೇ ಅಲ್ಲ, ಕೇವಲ ಒಂದು ಹೊತ್ತು ಊಟ, ರಸ್ತೆ ಬದಿ ನಿದ್ದೆಗೆ ಜೀವನ ತಲುಪಿದೆ. “ಲಾಹೋರ್‌ನಲ್ಲಿ ಉಳಿದುಕೊಳ್ಳಲು ನನ್ನ ಬಳಿ ಹಣವಿಲ್ಲ. ಅದಕ್ಕಾಗಿ ನಾನು ಒಂದೇ ಹೊತ್ತು ಊಟ ಮಾಡುತ್ತೇನೆ, ರಸ್ತೆ ಬದಿ ಮಲಗುತ್ತೇನೆ’ ಎನ್ನುತ್ತಾರೆ ನಟ ಶಾಹಿದ್ ನಸೀಬ್.
ಪಾಕ್‌ನ ಪ್ರಸಿದ್ಧ ಧಾರಾವಾಹಿಗಳಾದ “ದುಲ್ಲಾರಿ’, “ಜಬ್ ಉಸ್ಸೇ ಮುಜ್‌ಸೇ ಮೊಹಬ್ಬತ್ ಹುಯೀ’ ಇತ್ಯಾದಿಗಳಲ್ಲಿ ನಟಿಸಿದವರು. ಆದರೆ ಅವರಿಗೀಗ ಹೆಚ್ಚು ಅವಕಾಶಗಳೇ ಬರುತ್ತಿಲ್ಲ. ಬಂದರೂ ಅದು ತಿಂಗಳಿಗೆ 20 ಸಾವಿರ ರೂ. (ಪಾಕ್ ಕರೆನ್ಸಿ)ಗೆ ಇಳಿದಿದೆ. ಪರಿಣಾಮ ನಸೀಬ್ ಅವರು ಸಂಗೀತ ಉದ್ಯಮದತ್ತ ಕಣ್ಣು ಹಾಯಿಸಿದ್ದಾರೆ. ತಮ್ಮದೇ ಆದ ಆಲ್ಬಂ ಹೊರತರಲು ಕನಿಷ್ಠ 1 ಲಕ್ಷ ರೂ. ಬೇಕು. ಇದಕ್ಕೆ ತಾವು ಲಾಹೋರ್‌ನ ಪ್ರಸಿದ್ಧ ಸಂಗೀತಗಾರರ, ಸಂಯೋಜಕರನ್ನು ಭೇಟಿಯಾಗಿ ನೆರವು ಕೇಳುತ್ತಿರುವುದಾಗಿ ಹೇಳಿದ್ದಾರೆ. “ಸದ್ಯದ ಪರಿಸ್ಥಿತಿಯಲ್ಲಿ ತಮಗೆ ವಾಪಸ್ ಊರಿಗೆ ಹೋಗಲು ಸಾಧ್ಯವಿಲ್ಲ. ನಟನಾಗಿ ವಿಫಲವಾದ ಬಗ್ಗೆ ಅವರು ತಮಾಷೆ ಮಾಡುತ್ತಾರೆ. ಆದ್ದರಿಂದ ಲಾಹೋರ್‌ನಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂದು ನಸೀಬ್ ಹೇಳುತ್ತಾರೆ.