ಮೆಕ್ಸಿಕೊ ಸಿಟಿ : ಆರಂಭದ ಕೆಲವು ದಿನ ಲ್ಯಾಟಿನ್ ಅಮೆರಿಕ ಇತರ ದೇಶಗಳಲ್ಲಿ ಕೋವಿಡ್ ವೈರಸ್ ಹರಡುವುದನ್ನು ಕುತೂಹಲದಿಂದ ವೀಕ್ಷಿಸುತ್ತಿತ್ತು. ಈಗ ಉಳಿದ ದೇಶಗಳ ಲ್ಯಾಟಿನ್ ಅಮೆರಿಕದ ಪರಿಸ್ಥಿತಿಯನ್ನು ಆತಂಕದಿಂದ ನೋಡುತ್ತಿವೆ. ಇಲ್ಲಿ ಕೋವಿಡ್ ವೈರಸ್ ರೋಗ ಹರಡುತ್ತಿರುವ ವೇಗ ಮತ್ತು ಅದು ಉಂಟು ಮಾಡಿರುವ ಅನಾಹುತ ಊಹೆಗೆ ನಿಲುಕದ್ದು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲ್ಯಾಟಿನ್ ಅಮೆರಿಕದಲ್ಲಿ ಇನ್ನೂ ಕೆಲವು ತಿಂಗಳಾದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದು ಅಸಾಧ್ಯ ಎನ್ನುತ್ತಾರೆ ತಜ್ಞರು.
ಹೊಸ ಕೇಂದ್ರಬಿಂದು
ಕೋವಿಡ್ ವೈರಸ್ ಕೇಂದ್ರಬಿಂದು ಈಗ ಅಮೆರಿಕದಿಂದ ಲ್ಯಾಟಿನ್ ಅಮೆರಿಕಕ್ಕೆ ಸ್ಥಳಾಂತರಗೊಂಡಿದೆ. ಚೀನದಿಂದ ಅಮೆರಿಕ, ಅಮೆರಿಕದಿಂದ ಲ್ಯಾಟಿನ್ ಅಮೆರಿಕಕ್ಕೆ ಕೋವಿಡ್ ಕೇಂದ್ರಬಿಂದು ಬದಲಾಗುತ್ತಾ ಹೋಗಿರುವುದು ಅಧ್ಯಯನಯೋಗ್ಯವಾದ ವಿಷಯ ಎನ್ನುತ್ತಾರೆ ಪಾನ್ ಅಮೆರಿಕನ್ ಹೆಲ್ತ್ ಓರ್ಗನೈಸೇಶನ್‌ನ ನಿರ್ದೇಶಕ ಡಾ| ಮಾರ್ಕೊಸ್ ಎಸ್ಪಿನಾಲ್.
ಪ್ರಸ್ತುತ ಲ್ಯಾಟಿನ್ ಅಮೆರಿಕದ 33 ದೇಶಗಳಲ್ಲಿ 9,20,000 ದೃಢಪಟ್ಟಿರುವ ಕೋವಿಡ್ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆ 50,000 ದಾಟಿದೆ. ಆತಂಕದ ಸಂಗತಿಯೆಂದರೆ ಸೋಂಕು ಮತ್ತು ಸಾವಿನ ಸಂಖ್ಯೆ ಏರುತ್ತಿರುವ ವೇಗ. ಜಗತ್ತಿನಲ್ಲಿ ಅಂಕೆಯಿಲ್ಲದೆ ಕೋವಿಡ್ ಹೆಚ್ಚುತ್ತಿರುವ ಪ್ರದೇಶವಾಗಿ ಲ್ಯಾಟಿನ್ ಅಮೆರಿಕ ಈಗ ಗುರುತಿಸಿಕೊಂಡಿದೆ. ಹಾಗೇ ನೋಡಿದರೆ ಇದು ಆಶ್ಚರ್ಯ ಹುಟ್ಟಿಸುವ ಮಾತಲ್ಲ. ಹೀಗಾಗಬಹುದು ಎಂಬ ಕಲ್ಪನೆ ನಮಗಿತ್ತು ಎನ್ನುತ್ತಾರೆ ಡ್ರಕ್ಸೆಲ್ ವಿವಿಯ ಸರ್ವಜನಿಕ ಆರೋಗ್ಯ ವಿಭಾಗದ ಡಾ| ಅನ ಡಯಜ್ ರೌಕ್ಸ್. ಬಹುತೇಕ ತಜ್ಞರೆಲ್ಲ ಲ್ಯಾಟಿನ್ ಅಮೆರಿಕದ ಸರಕಾರಗಳು ತೋರಿಸಿದ ಬೇಜವಾಬ್ದಾರಿತನವೇ ಇಂದಿನ ಸ್ಥಿತಿಗೆ ಕಾರಣ ಎಂಬ ಅಭಿಪ್ರಾಯಹೊಂದಿದ್ದಾರೆ.
ಫೆಬ್ರವರಿಯಲ್ಲಿ ಮೊದಲ ಸಾವು
ಲ್ಯಾಟಿನ್ ಅಮೆರಿಕದಲ್ಲಿ ಕೋವಿಡ್‌ನ ಮೊದಲ ಸಾವು ಸಂಭವಿಸಿದ್ದು ಫೆಬ್ರವರಿಯಲ್ಲಿ. ಇಟಲಿ ಪ್ರವಾಸ ಮಾಡಿದ್ದ 61 ವರ್ಷದ ಮಹಿಳೆ ಬ್ರಜಿಲ್‌ನ ಸಾವೊಪೌಲೊದಲ್ಲಿ ಸಾವನ್ನಪ್ಪಿದ್ದರು. ಅನಂತರ ಕೆಲವು ವಾರ ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ಕಂಡು ಬಂದಿತ್ತು. ಅರ್ಜೆಂಟೀನಾದಲ್ಲಿ ಮೊದಲ ಸಾವು ದಾಖಲಾದದ್ದು ಮಾ.7ರಂದು. ಆಗಲೇ ಕೆಲವರು ಮಹಾದುರಂತವೊಂದು ಸಂಭವಿಸುವ ಭವಿಷ್ಯ ನುಡಿದಿದ್ದರು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬ್ರಜಿಲ್‌ನ ಆರೋಗ್ಯ ತಜ್ಞ ಮಿಗ್ಯುಲ್ ಲಾಗೊ ಲ್ಯಾಟಿನ್ ಅಮೆರಿಕ ಕೋವಿಡ್ ಎದುರಿಸಲು ಸಿದ್ಧವಾಗಿಲ್ಲ. ಯುರೋಪ್‌ಗಿಂತಲೂ ಇಲ್ಲಿನ ಸ್ಥಿತಿ ಭೀಕರವಾಗಲಿದೆ ಎಂದು ಎಚ್ಚರಿಸುವ ಲೇಖನ ಬರೆದಿದ್ದರು. ಕೆಲವೇ ದಿನಗಳಲ್ಲಿ ಅವರ ಮಾತು ಸತ್ಯವಾಯಿತು. ಅಮೆರಿಕ ಮತ್ತು ಯುರೋಪ್‌ಗಿಂತಲೂ ಹೆಚ್ಚಿನ ಸೋಂಕಿನ ಪ್ರಕರಣಗಳು ಲ್ಯಾಟಿನ್ ಅಮೆರಿಕದಲ್ಲಿ ನಿತ್ಯ ಪತ್ತೆಯಾಗುತ್ತಿವೆ. ರಷ್ಯಾ, ಬ್ರಿಟನ್ ಮತ್ತು ಇಟಲಿಯನ್ನು ಹಿಂದಿಕ್ಕಿ ಬ್ರಜಿಲ್ ಎರಡನೇ ಸ್ಥಾನಕ್ಕೇರಿದೆ.
ಲ್ಯಾಟಿನ್ ಅಮೆರಿಕದಲ್ಲಿ ಸೋಂಕು ಮತ್ತು ಸಾವಿನ ಲೆಕ್ಕ ಸರಿಯಾಗಿಲ್ಲ ಎಂಬ ಮಾತೂ ಇದೆ. ಕೆಲವು ದೇಶಗಳು ಸಾಮೂಹಿಕ ಪರೀಕ್ಷೆ ಮಾಡುತ್ತಿಲ್ಲ ಮತ್ತು ಕೆಲವು ದೇಶಗಳಲ್ಲಿ ಸಾವಿನ ಕಾರಣವನ್ನೇ ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಸೋಂಕಿತರು 10ರಿಂದ 12 ಲಕ್ಷದಷ್ಟಿರಬಹುದು ಎನ್ನುತ್ತಾರೆ ತಜ್ಞರು. ಚೀನ ಜನವರಿಯಲ್ಲೇ ಕೋವಿಡ್ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿರುವ ಮಾಹಿತಿ ಬಹಿರಂಗಪಡಿಸಿತ್ತು. ಆಗಲೇ ಪ್ರತಿಯೊಂದು ಸರಕಾರವೂ ಎಚ್ಚೆತ್ತುಕೊಳ್ಳಬೇಕಿತ್ತು. ಆಗ ತೋರಿಸಿದ ಬೇಜವಾಬ್ದಾರಿ ವರ್ತನೆ ಈಗ ಮುಳುವಾಗುತ್ತಿದೆ. ಬ್ರಜಿಲ್, ಮೆಕ್ಸಿಕೊ, ಕೋಸ್ಟಾರಿಕಾದಂಥ ದೇಶಗಳ ಅಧ್ಯಕ್ಷರೇ ಕೋವಿಡ್ ವೈರಸನ್ನು ಲಘುವಾಗಿ ಪರಿಗಣಿಸಿದ್ದರು ಹಾಗೂ ಲಾಕ್‌ಡೌನ್ ಹೇರುವುದಕ್ಕೆ ಮುಂದಾಗಲಿಲ್ಲ. ಇದರಿಂದಾಗಿ ವೈರಸ್ ಅಂಕೆಯಿಲ್ಲದೆ ಹರಡುತ್ತಿದೆ.
ಪೆರು, ಚಿಲಿ, ಈಕ್ವಡೋರ್‌ನಂಥ ಕೆಲವು ದೇಶಗಳು ಮಾರ್ಚ್ ನಲ್ಲಿ ದೇಶದ ಗಡಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡರೂ ಪೆರುವಿನಲ್ಲಿ ಕೋವಿಡ್ ಕ್ಷಿಪ್ರವಾಗಿ ವ್ಯಾಪಿಸಿದೆ. ಸರಕಾರಗಳು ಸತತ ಪ್ರಯತ್ನಗಳ ಹೊರತಾಗಿಯೂ ವೈರಸ್ ಸಾಮುದಾಯಿಕ ನೆಲೆಯಲ್ಲಿ ಹರಡುವುದನ್ನು ತಡೆಯಲಾಗಲಿಲ್ಲ.