Advertisement

ಅಂತರ್ಜಲ ವೃದ್ಧಿಗೆ ಮಳೆ ಕೊಯ್ಲು ಥೀಮ್‌ ಪಾರ್ಕ್‌

11:53 AM Sep 19, 2018 | |

ಮೈಸೂರು: ನಗರದಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಜತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಅದರ ಮಹತ್ವವನ್ನು ಸಾರಲು ಮೈಸೂರು ನಗರ ಪಾಲಿಕೆ ಸಜ್ಜಾಗಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೀಘ್ರದಲ್ಲೇ ಮಳೆ ನೀರು ಕೊಯ್ಲಿನ ಥೀಮ್‌ ಪಾರ್ಕ್‌ ನಿರ್ಮಾಣವಾಗಲಿದೆ. 

Advertisement

ಮೈಸೂರು ನಗರದಲ್ಲಿ ಬೇಸಿಗೆ ವೇಳೆ ಮಾತ್ರವಲ್ಲದೆ, ವರ್ಷದ ಹಲವು ಸಂದರ್ಭದಲ್ಲಿ ನೀರಿನ ಸಮಸ್ಯೆ ಕೇಳಿಬರುತ್ತದೆ. ಇದೇ ಕಾರಣಕ್ಕಾಗಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ಮನೆಗಳಲ್ಲಿ ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸಿ, ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಇದರ ಬೆನ್ನಲ್ಲೆ ನಗರದಲ್ಲಿ ಅಂತರ್ಜಲದ ಮಟ್ಟವನ್ನು ಅಭಿವೃದ್ಧಿಪಡಿಸಿ, ಅಂತರ್ಜಲದ ಮಹತ್ವ ಕಾಪಾಡಿಕೊಳ್ಳುವ ಮಳೆನೀರು ಕೊಯ್ಲು ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದೆ. ಇದರೊಂದಿಗೆ ನಗರದಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪಾಲಿಕೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ. 

ಸಿಎಸ್‌ಆರ್‌ ಅನುದಾನ: ಬೆಂಗಳೂರಿನ ಜಯನಗರದಲ್ಲಿ ಜಲಮಂಡಳಿ ನಿರ್ಮಿಸಿರುವ ಸರ್‌ ಎಂ.ವಿಶ್ವೇಶ್ವರಯ್ಯ ಮಳೆನೀರು ಕೊಯ್ಲು ಥೀಮ್‌ ಪಾರ್ಕ್‌ ಮಾದರಿಯಲ್ಲಿ ಮೈಸೂರಿನಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಗರದಲ್ಲಿರುವ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಪಾರ್ಕ್‌ಗಳನ್ನು ಗುರುತಿಸಲಾಗಿದೆ.

ಈ ಪಾರ್ಕ್‌ಗಳಲ್ಲಿನ 2.5ರಿಂದ 3 ಎಕರೆ ಜಾಗದಲ್ಲಿ ಥೀಮ್‌ ನಿರ್ಮಿಸುವ ಗುರಿ ಇದೆ. ಇದಕ್ಕಾಗಿ 1.5 ರಿಂದ 2 ಕೋಟಿ ವೆಚ್ಚವಾಗಲಿದೆ. ಇದಕ್ಕಾಗಿ ಕಾರ್ಪೋರೇಟ್‌ ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ಅಡಿಯಲ್ಲಿ ಹಣ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವು ಖಾಸಗಿ ಕಂಪನಿಗಳಿಂದಲೂ ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. 

Advertisement

ಥೀಮ್‌ ಪಾರ್ಕ್‌ ವಿಶೇಷ: ಮಳೆ ನೀರು ಕೊಯ್ಲು ಥೀಮ್‌ ಪಾರ್ಕ್‌ ನಿರ್ಮಿಸಲು ಮೂರು ಎಕರೆಯ ಒಂದು ಭಾಗದಲ್ಲಿ ಎರಡು ಅಂತಸ್ತಿನ ಕಟ್ಟಡವಿರುತ್ತದೆ. ಉಳಿದ ಭಾಗದಲ್ಲಿ ಮಳೆ ನೀರು ಕೊಯ್ಲು ವಿಷಯದಡಿ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತದೆ. ಇದರ ಜತೆಗೆ ಸಂಗೀತ ಕಾರಂಜಿ, ದೊಡ್ಡ ಅಕ್ವೇರಿಯಂ, ಮಳೆ ನೀರಿನ ಕೊಯ್ಲಿನ ಕುರಿತು ಜನರಿಗೆ ಅರಿವು ಮೂಡಿಸುವ ಫ‌ಲಕಗಳಿರಲಿದೆ.

ಜತೆಗೆ ವಿದ್ಯುತ್‌ ಚಾಲಿತ ಕೃತಕ ಮಳೆ ನೀರಿನ ಕೊಯ್ಲಿನ ಮಾದರಿಯೂ ಇರಲಿದ್ದು, ಮಳೆ ನೀರಿನ ಕೊಯ್ಲು ಹೇಗೆ ಮಾಡಬೇಕು? ನೀರಿನ ಸಂಗ್ರಹ ಮತ್ತು ಮಳೆ ನೀರಿನ ಕೊಯ್ಲಿನ ಪ್ರಯೋಜನ ತಿಳಿಸುತ್ತದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಉನ್ನತ ವ್ಯಾಸಂಗ ಮಾಡುವವರಗೆ ಈ ಥೀಮ್‌ ಪಾರ್ಕ್‌ ಪ್ರಯೋಜನವಾಗಲಿದೆ. ಜತೆಗೆ ಕಟ್ಟಡದ 2ನೇ ಅಂತಸ್ತಿನಲ್ಲಿ 50 ಮಂದಿ ಕುಳಿತುಕೊಳ್ಳುವ ಮಿನಿ ಥೀಯೇಟರ್‌ ಇರಲಿದೆ. ಇದರಲ್ಲಿ ಮಳೆ ನೀರು ಕೊಯ್ಲಿನ ಕುರಿತಾದ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. 

ನಗರದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ್ದು, ಜನತೆಗೆ ಇದರ ಬಗ್ಗೆ ಅರಿವು ಮೂಡಿಸಬೇಕಿದೆ. ನಗರ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೀರಿನ ಮಹತ್ವ, ಮಳೆ ಕೊಯ್ಲಿನ ತಿಳಿವಳಿಕೆ ಮೂಡಿಸಲು ಈ ಥೀಮ್‌ ಪಾರ್ಕ್‌ ಸಹಾಯವಾಗಲಿದೆ. 
-ಕೆ.ಎಚ್‌.ಜಗದೀಶ್‌, ಪಾಲಿಕೆ ಆಯುಕ್ತ  

Advertisement

Udayavani is now on Telegram. Click here to join our channel and stay updated with the latest news.

Next