Advertisement

Thekkatte: ಅವೈಜ್ಞಾನಿಕ ತಂಗುದಾಣದ ಕಿರಿಕಿರಿ; ತುರ್ತು ಕ್ರಮಕ್ಕೆ ಜನರ ಆಗ್ರಹ

03:24 PM Dec 04, 2024 | Team Udayavani |

ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ಚತುಷ್ಪಥ ಹೆದ್ದಾರಿ ಕಾಮಗಾರಿಯ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ತೆಕ್ಕಟ್ಟೆಯಲ್ಲಿ ಯಾವುದೇ ಬಸ್‌ ತಂಗುದಾಣ ನಿರ್ಮಿಸಿಲ್ಲ. ಆದರೂ ಎರಡು ಅವ್ಯವಸ್ಥಿತ ಬಸ್‌ ತಂಗುದಾಣಗಳು ಇಲ್ಲಿವೆ. ಒಂದರಲ್ಲಿ ಸರಿಯಾಗಿ ಇಬ್ಬರು ನಿಲ್ಲುವುದೂ ಕಷ್ಟ. ಇನ್ನೊಂದು ತಗಡಿನ ಮೇಲ್ಛಾವಣಿಯ ತಾತ್ಕಾಲಿಕ ತಂಗುದಾಣ. ಅದಕ್ಕೆ ಯಾವ ರಕ್ಷಣೆಯ ವ್ಯವಸ್ಥೆಯೂ ಇಲ್ಲ. ಇಷ್ಟು ಮಾತ್ರವಲ್ಲ, ಈ ಬಸ್‌ ನಿಲ್ದಾಣಗಳನ್ನು ಸರ್ಕಲ್‌ನ ಆಸುಪಾಸಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಗೊಂದಲ, ಅಪಘಾತಗಳಿಗೆ ಕಾರಣವಾಗುತ್ತಿದೆ.

Advertisement

ಬಸ್‌ ತಂಗುದಾಣ ಇಲ್ಲದೆ ಜನರು ಪರದಾಡುತ್ತಿರುವುದನ್ನು ಗಮನಿಸಿ ಸ್ಥಳೀಯ ಸಂಘ ಸಂಸ್ಥೆಗಳು ಸೇರಿ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎರಡು ತಾತ್ಕಾಲಿಕ ಬಸ್‌ ತಂಗುದಾಣಗಳನ್ನು ನಿರ್ಮಿಸಿವೆ. ಇವು ಸರ್ಕಲ್‌ನಲ್ಲಿ ಮುಖಾಮುಖೀಯಾಗಿ ನಿರ್ಮಾಣವಾಗಿರುವುದರಿಂದ ಕೆಲವೊಂದು ಸಮಸ್ಯೆಗಳು ಉಂಟಾಗುತ್ತಿವೆ.

ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್‌ಗಳು ತಂಗುದಾಣದಲ್ಲಿ ನಿಂತಿರುವ ಸಂದರ್ಭದಲ್ಲಿ ಕೊಮೆ ಪರಿಸರದಿಂದ ಸರ್ಕಲ್‌ಗೆ ಬಂದು ಉಡುಪಿ ಕಡೆಗೆ ಹೋಗುವ ಬಸ್‌ ಕೂಡಾ ಬಂದು ನಿಂತರೆ ಬೇರೆ ವಾಹನಗಳು ಸಂಚರಿಸಲು ಅವಕಾಶವಿಲ್ಲದೇ ಗೊಂದಲ ಏರ್ಪಟ್ಟು ಈಗಾಗಲೇ ಹಲವು ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೇ ಕುಂದಾಪುರದ ಕಡೆಗೆ ತೆರಳುವ ಪ್ರಯಾಣಿಕರಿಗೂ ಕೂಡಾ ಇದೇ ಸಮಸ್ಯೆಗಳಿರುವುದರಿಂದ ಮುಂಜಾನೆ ಹಾಗೂ ಸಂಜೆ ವೇಳೆಗೆ ಭಾರಿ ಸಮಸ್ಯೆ ಎದುರಾಗುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸ್ಥಳೀಯರು, ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಲಿ
ಬಸ್‌ ತಂಗುದಾಣ, ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸದೆ ರಸ್ತೆ ಪ್ರಾಧಿಕಾರ ದವರು ಮೀನ ಮೇಷ ಎಣಿಸುವುದು ಸರಿಯಲ್ಲ. ಬದಲಾದ ಗ್ರಾಮದ ಮೂಲ ಸ್ವರೂಪದ ಬಗ್ಗೆ ಅಧ್ಯಯನ ಮಾಡಿ ಗ್ರಾಮಸ್ಥರ ಅಭಿಪ್ರಾಯಕ್ಕೆ ಅನುಗುಣವಾಗಿ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ಗಂಭಿರವಾಗಿ ಚಿಂತನೆ ಮಾಡಬೇಕು ಎಂದು ಸಂಘಟಕ ಶ್ರೀನಾಥ್‌ ಶೆಟ್ಟಿ ಮೇಲ್ತಾರುಮನೆ ಅವರು ಆಗ್ರಹಿಸಿದ್ದಾರೆ.

Advertisement

ಮಳೆಗಾಲದ ಸಂದರ್ಭದಲ್ಲಿ ಕುಂದಾಪುರ ಕಡೆಗೆ ಪ್ರಯಾಣಿಕರು ತಂಗುವ ತಾತ್ಕಾಲಿಕ ಬಸ್‌ ತಂಗುದಾಣದ ಒಳಗೆ ಮಳೆ ನೀರು ಶೇಖರಣೆಯಾಗುವ ಪರಿಣಾಮ ಪ್ರಯಾಣಿಕರು ತಂಗುದಾಣದ ಹೊರಗಡೆ ನಿಂತು ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಕೂಡ ಚಿಂತನೆ ಅಗತ್ಯವಿದೆ ಎಂದು ಅಟೋ ಚಾಲಕ ನರಸಿಂಹ ಕೊಮೆ ಅವರು ಹೇಳುತ್ತಾರೆ.

ತಂಗುದಾಣಗಳ ಸ್ಥಳಾಂತರಕ್ಕೆ ಆಗ್ರಹ
ತೆಕ್ಕಟ್ಟೆ ರಾ.ಹೆ 66 ರಲ್ಲಿ ತಾತ್ಕಾಲಿಕ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗಿದೆ. ರಸ್ತೆ ನಿಯಮದಂತೆ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ ತಂಗುದಾಣಗಳು ರಸ್ತೆಯ ಎರಡೂ ಬದಿಯಲ್ಲಿ ಸ್ವಲ್ಪ ಅಂತರದಲ್ಲಿ ನಿರ್ಮಾಣವಾಗಬೇಕಾಗಿದೆ. 1997-98ರಲ್ಲಿ ತೆಕ್ಕಟ್ಟೆಯಲ್ಲಿ ಸ್ಥಳೀಯರ ಹೋರಾಟದ ಫ‌ಲವಾಗಿ ಎಕ್ಸ್‌ಪ್ರೆಸ್‌ ಬಸ್‌ ನಿಲುಗಡೆಗೆ ಆದೇಶವಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರದವರು ಬಸ್‌ ತಂಗುದಾಣವನ್ನೇ ನಿರ್ಮಿಸಿಲ್ಲ. ಇದೀಗ ಸರ್ವಿಸ್‌ ರಸ್ತೆಯೂ ಆಗದೆ ಇರುವುದು ಬಸ್‌ ತಂಗುದಾಣ ನಿರ್ಮಾಣವನ್ನು ಮತ್ತಷ್ಟು ವಿಳಂಬಗೊಳಿಸಿದೆ.

ಸರಿಯಾದ ವ್ಯವಸ್ಥೆಯೇ ಇಲ್ಲ !
ಈ ಹಿಂದೆ ತಗಡಿನ ಮೇಲ್ಛಾವಣಿಯ ತಾತ್ಕಾಲಿಕ ಬಸ್‌ ತಂಗುದಾಣವು ಮಲ್ಯಾಡಿ ಗ್ರಾಮೀಣ ಸಂಪರ್ಕ ರಸ್ತೆಯ ಬಲ ಭಾಗದಲ್ಲಿತ್ತು. ಅದೇ ಸಮಯದಲ್ಲಿ ಬಸ್‌ಗಳು ತಂಗುದಾಣದಲ್ಲಿ ನಿಂತಾಗ ಒಳ ಮಾರ್ಗದಿಂದ ರಾ.ಹೆ.66 ಕ್ಕೆ ಪ್ರವೇಶಿಸುವ ವಾಹನ ಸವಾರರಿಗೆ ವಾಹನಗಳು ಸಂಚರಿಸುವುದು ಗೋಚರವಾಗದೇ ಅಪಘಾತ ಆಗುತ್ತಿತ್ತು. ಈ ಬಗ್ಗೆ ಉದಯವಾಣಿ ವಿಸ್ತೃತವಾದ ವರದಿ ಪ್ರಕಟಸಿದ ಪರಿಣಾಮ ಸ್ಥಳೀಯಾಡಳಿತ ಮತ್ತೊಂದೆಡೆಗೆ ಸ್ಥಳಾಂತರಿಸಿದೆ.

ಆದರೆ ತಂಗುದಾಣದ ಸಮೀಪದಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಆಗಮಿಸುವ ಗ್ರಾಹಕರು ರಸ್ತೆ ಇಕ್ಕೆಲದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ತೆರಳುವ ಪರಿಣಾಮ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ತಾತ್ಕಾಲಿಕ ಬಸ್‌ ತಂಗುದಾಣದಲ್ಲಿ ಪ್ರಯಾಣಿಕರು ತಂಗಲು ಸರಿಯಾದ ವ್ಯವಸ್ಥೆಗಳೇ ಇಲ್ಲದೇ ರಸ್ತೆಯ ಬದಿಯಲ್ಲಿ ನಿಂತುಕೊಂಡೆ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಶಾಶ್ವತ ಪರಿಹಾರ ಕಲ್ಪಿಸಿ
ತೆಕ್ಕಟ್ಟೆ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಲ್ಲಿ ಒಂದಾದ ಸುವ್ಯವಸ್ಥಿತವಾದ ಬಸ್‌ ತಂಗುದಾಣಗಳು ನಿರ್ಮಾಣವಾಗಬೇಕಾಗಿದೆ. ಜತೆಗೆ ಹೆದ್ದಾರಿ ಪ್ರಾಧಿಕಾರದವರು ಗ್ರಾಮಸ್ಥರ ಅಭಿಪ್ರಾಯಗಳಿಗೆ ಪೂರಕವಾಗಿ ಸ್ಪಂದಿಸಿ ಈಗಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರ ಸುರಕ್ಷತೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು .
-ತೆಕ್ಕಟ್ಟೆ ಪ್ರಕಾಶ್‌ ಶೆಟ್ಟಿ, ಸಂಚಾಲಕರು, ತೆಕ್ಕಟ್ಟೆ ಫ್ರೆಂಡ್ಸ್‌ ತೆಕ್ಕಟ್ಟೆ

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next