Advertisement

Thekkatte: ಅಂಗಡಿಗಳಿಂದ ಸರಣಿ ಕಳ್ಳತನ

11:10 PM Jun 13, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಭಾಗದಲ್ಲಿರುವ ವೈನ್ಸ್‌ ಶಾಪ್‌ನಲ್ಲಿ, ಮಲ್ಯಾಡಿ ರಸ್ತೆಯ ಸಮೀಪದಲ್ಲಿರುವ ದಿನಸಿ ಅಂಗಡಿಯಲ್ಲಿ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಸಹಿತ ಸರಣಿ ಕಳ್ಳತನವಾದ ಘಟನೆ ಜೂ. 13ರ ಬೆಳಗ್ಗಿನ ಜಾವ ಸುಮಾರು 3.49ರ ವೇಳೆಗೆ ಸಂಭವಿಸಿದೆ.

Advertisement

ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾಲಕತ್ವದ ಶ್ರೀ ಗಣೇಶ್‌ ವೈನ್ಸ್‌ನ ರೋಲಿಂಗ್‌ ಶಟರ್‌ ಮುರಿದು ಒಳ ಪ್ರವೇಶಿಸಿದ ಕಳ್ಳರು ಕ್ಯಾಶ್‌ ಟೇಬಲನ್ನು ಜಾಲಾಡಿದ್ದು, ಅನಂತರ ದೇವರ ಡಬ್ಬದಲ್ಲಿದ್ದ 700 ರೂ. ನಗದು ಹಾಗೂ 6 ಸಾವಿರ ರೂ.ಗೂ ಅಧಿಕ ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.

ಮಲ್ಯಾಡಿ ಸಂಪರ್ಕ ರಸ್ತೆಯ ಸಮೀಪದಲ್ಲಿರುವ ಸಂತೋಷ್‌ ಶೆಟ್ಟಿ ಮಾಲಕತ್ವದ ದಿನಸಿ ಅಂಗಡಿಗೆ ಬೆಳಗ್ಗಿನ ಜಾವ 3.15ರ ಸುಮಾರಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಕ್ಯಾಶ್‌ ಟೇಬಲ್‌ನಲ್ಲಿದ್ದ 2 ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ತಿಂಡಿ ತಿನಿಸಿನ ಪೊಟ್ಟಣದ ಮೇಲೆ ಎರಡು ಕಲ್ಲು ಇರಿಸಿ ಅನಂತರ ಚಾಕಲೇಟ್‌ ಡಬ್ಬವನ್ನು ಪಕ್ಕದ ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ.

ಸಮೀಪದ ಜನವಸತಿ ಪ್ರದೇಶದಲ್ಲಿರುವ ಮೂಡು ತೆಕ್ಕಟ್ಟೆ ಅಣ್ಣಪ್ಪ ಆಚಾರ್ಯ ಅವರ ಮನೆಯ ಮುಂಭಾಗದಲ್ಲಿ ಬೀಗ ಹಾಕದೇ ನಿಲ್ಲಿಸಿದ್ದ  ಹೋಂಡಾ ಆ್ಯಕ್ಟಿವಾ ವಾಹನವನ್ನೂ ಕದ್ದೊಯ್ದಿದ್ದಾರೆ ಎಂದು ಶ್ರವಣ್‌ ಆಚಾರ್ಯ ತಿಳಿಸಿದ್ದಾರೆ.

ಸಿಸಿ ಕೆಮರಾದಲ್ಲಿ ಸೆರೆ:

Advertisement

ಬೆಳಗ್ಗಿನ ಜಾವ 3.49ರ ಸುಮಾರಿಗೆ ರಾ.ಹೆ. 66ರ ಪ್ರಮುಖ ಭಾಗದಲ್ಲಿರುವ ಶ್ರೀಗಣೇಶ್‌ ವೈನ್ಸ್‌ ಒಳಪ್ರವೇಶಿಸಿದ ಮೂವರು ಕಳ್ಳರ ತಂಡವು ಮೊಬೈಲ್‌ ಟಾರ್ಚ್‌ ಬಳಸಿಕೊಂಡು ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಕೈಯಲ್ಲಿ ಸೂð ಡ್ರೈವರ್‌ ಹಿಡಿದು, ಕ್ಯಾಶ್‌ ಟೇಬಲ್‌ ಹಾಗೂ ಸಂಪೂರ್ಣ ವೈನ್‌ಶಾಪನ್ನು ಜಾಲಾಡಿದ್ದಾರೆ. ಓರ್ವ ಅಂಗಡಿಯ ಹೊರಗಡೆ ನಿಂತು ವೀಕ್ಷಿಸುತ್ತಿರುವ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿವೆ.

ಗ್ರಾಹಕರ ಸೋಗಿನಲ್ಲಿ ಬಂದಿದ್ದರೇ ಕಳ್ಳರು ?:

ಈ ನಡುವೆ ಶ್ರೀ ಗಣೇಶ್‌ ವೈನ್ಸ್‌ಗೆ ರಾತ್ರಿ ಗಂಟೆ 10.30ರ ಸುಮಾರಿಗೆ ಓರ್ವ ವ್ಯಕ್ತಿ ಗ್ರಾಹಕರ ಸೋಗಿನಲ್ಲಿ ಮದ್ಯ ಖರೀದಿಸಿ, ಫೋನ್‌ ಪೇ ಮೂಲಕ ಹಣ ಪಾವತಿಸಿದ್ದು, ಆತನ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಫೋನ್‌ ಪೇ ಹಾಗೂ ಮೊಬೈಲ್‌ನ ಜಾಡು ಹಿಡಿದು ಕಳ್ಳರ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ:

ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ಭೇಟಿ ನೀಡಿ ಪರಿಶೀಲಿಸಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಎನ್‌.ಎಂ., ಕೋಟ ಪೊಲೀಸ್‌ ಪಿಎಸ್‌ಐ ಸುಧಾ ಪ್ರಭು, ಎಎಸ್‌ಐ ಗೋಪಾಲ ಪೂಜಾರಿ, ಸಿಬಂದಿ ರಾಘವೇಂದ್ರ, ವಿಜೇಂದ್ರ ಹಾಗೂ ಪ್ರಸನ್ನ, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಆತಂಕ ಮೂಡಿಸಿದ ಸರಣಿ ಕಳ್ಳತನ:

ಇಲ್ಲಿನ ರಾ.ಹೆ. 66ರ ಸಮೀಪ ಶಾನುಭಾಗ್‌ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಗೆ ಮುಸುಕುಧಾರಿ ತಂಡವೊಂದು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ 2023ರ ಡಿ. 29ರಂದು ನಡೆದಿತ್ತು. ಆ ಕುರಿತು ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಜ. 1ರಂದು ಉದಯವಾಣಿ ಚಿತ್ರಸಹಿತ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಆದೇಶದಂತೆ ಪ್ರಕರಣ ದಾಖಲಿಸಿ, ತನಿಖೆ ಚುರುಕುಗೊಳಿಸಿದ ಕೋಟ ಪೊಲೀಸರ ತಂಡ 3 ತಿಂಗಳ ಬಳಿಕ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸರಣಿ ಕಳ್ಳತನ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next