ಬಜಪೆ: ಎರಡು ಪ್ರತ್ಯೇಕ ಚಿನ್ನಾಭರಣ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಇಬ್ಬರನ್ನು ಪಣಂಬೂರಿನ ಕುದುರೆಮುಖ ಜಂಕ್ಷನ್ ಬಳಿ ಬಜಪೆ ಠಾಣೆಯ ಪೊಲೀಸರು ಬಂಧಿಸಿದರಲ್ಲದೇ 4.5 ಲಕ್ಷ ರೂ. ಮೌಲ್ಯದ 75 ಗ್ರಾಂ. ತೂಕದ ಚಿನ್ನಾಭರಣ ಹಾಗೂ ಕಳವು ಮಾಡಲು ಬಳಸಿದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಐ ಗುರಪ್ಪ ಕಾಂತಿ ಅವರ ತಂಡವು ಸುರತ್ಕಲ್ ಬೊಕ್ಕರಬೆಟ್ಟು ನಿವಾಸಿ ತೌಸೀಫ್ ಅಹಮ್ಮದ್ (34) ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ನನ್ನು ವಶಕ್ಕೆ ಪಡೆದಿದೆ.
ಆರೋಪಿಗಳ ವಿರುದ್ಧ ಮಂಗಳೂರು, ಬಂಟ್ವಾಳಮತ್ತು ಉಡುಪಿಯ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಳೆದ ಜ. 13ರಂದು ಅಡೂxರು ಗ್ರಾಮದ ಪುಣಿಕೋಡಿ ಎಂಬಲ್ಲಿ ಸದಾಶಿವ ಪೂಜಾರಿ ಎಂಬವರ ಮನೆಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2021ರ ಮಾ. 26ರಂದು ಬಡಗುಳಿಪಾಡಿ ಗ್ರಾಮದ ಮನಲಪದವು ಎಂಬಲ್ಲಿ ಸದಾಶಿವ ಸಾವಂತ ಎಂಬವರ ಮನೆಯಿಂದ ಕಳ್ಳರು ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಬಜಪೆ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪಾದೆಬೆಟ್ಟು: ನಗ, ನಗದು ಕಳವು
ಪಡುಬಿದ್ರಿ: ಪಾದೆಬೆಟ್ಟು ಗ್ರಾಮದ ಮನೆಯೊಂದರ ಮಾಡಿನ ಹೆಂಚು ತೆಗೆದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೋಣೆಯಲ್ಲಿನ ಕಪಾಟನ್ನು ಜಾಲಾಡಿ 45000 ರೂ. ಬೆಲೆಬಾಳುವ ಚಿನ್ನದ ಆಭರಣಗಳು ಹಾಗೂ 5000 ರೂ. ನಗದನ್ನು ಕಳವುಗೈದಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಸದಾನಂದ ಮೂಲ್ಯ ಎಂಬವರು ಪಡುಬಿದ್ರಿಯ ಹೊಟೇಲೊಂದರ ವೈಟರ್ ಆಗಿದ್ದು 7.30ಕ್ಕೆ ಮನೆಗೆ ಬೀಗ ಹಾಕಿ ಹೋಗಿದ್ದರು. ಅವರ ಪತ್ನಿ ಶನಿವಾರ ಮಧ್ಯಾಹ್ನದ ವೇಳೆ ಮನೆಗೆ ಬಂದಾಗ ಮನೆಯ ಬೀಗ ಹಾಕಿದಂತೆಯೇ ಇದ್ದು ಒಳ ಹೋಗಿ ನೋಡಿದಾಗ ಕಳವಿನ ಕೃತ್ಯವು ಬೆಳಕಿಗೆ ಬಂದಿತ್ತು. ಕಳ್ಳರು ಕಳವಿನ ಸೊತ್ತುಗಳೊಂದಿಗೆ ಬಂದ ದಾರಿಯಲ್ಲೇ ಹಿಂದಿರುಗಿದ್ದಾರೆಂದು ಪೊಲೀಸ್ ಮಾಹಿತಿಗಳು ತಿಳಿಸಿವೆ. ತನಿಖೆ ಮುಂದುವರಿದಿದೆ.