ದೊಡ್ಡಬಳ್ಳಾಪುರ: ಮಾಂಗಲ್ಯ ಸರ ಕಳವು ಮಾಡಿ, ಮಣ್ಣಿನಲ್ಲಿ ಹೂತಿಟ್ಟ ಕಳ್ಳನನ್ನು ಕೇವಲ 24 ಗಂಟೆಯೊಳಗೆ ಕಳ್ಳನ ಪತ್ತೆ ಹಚ್ಚಿ, ಕಳುವಾದ ಮಾಂಗಲ್ಯ ಸರವನ್ನು ಮಾಲೀಕರಿಗೆ ಗ್ರಾಮಾಂತರ ಠಾಣೆ ಪೊಲೀಸರು ಹಸ್ತಾಂತರಿಸಿರುವ ಘಟನೆ ನಡೆದಿದೆ.
ತಾಲೂಕಿನ ಲಗುಮೇನಹಳ್ಳಿ ಕ್ರಾಸ್ ಬಳಿಯಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿ ತಾಲೂಕು ಕುದುರೆಗೆರೆ ಗ್ರಾಮದ ವೆಂಕಟೇಶ್ (41) ಬಂಧಿತ ಆರೋಪಿ.
ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರವನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಲಗುಮೇನಹಳ್ಳಿ ಕ್ರಾಸ್ ಬಳಿಯಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ತೋಟದ ಸಮೀಪ ದಲ್ಲಿರುವ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಕಳವು ಮಾಡಿದ್ದನು. ಬಳಿಕ ಟವೆಲ್‌ನಲ್ಲಿ ಮಾಂಗಲ್ಯ ಸರವನ್ನು ಬಚ್ಚಿಟ್ಟು ಅದನ್ನು ತೋಟದಲ್ಲಿನ ಮಣ್ಣಿನ ಗುಡ್ಡೆಯಲ್ಲಿ ಹೂತಿದ್ದನು ಎನ್ನಲಾಗಿದೆ.
ಇದನ್ನೂ ಓದಿ:ಹೊಸಕೋಟೆ:ವಿವಾಹ ಆಗಬೇಕಿದ್ದ ಯುವತಿ ಫೋನ್‌ನಲ್ಲಿ ಸರಿಯಾಗಿ ಮಾತಾನಾಡದಕ್ಕೆ ನೇಣಿಗೆ ಶರಣಾದ ಯುವಕ
ಮಾಂಗಲ್ಯ ಸರ ಕಳ್ಳತನ ಆಗಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸರು ಮನೆಯ ಆಸುಪಾಸಿವರ ಬಳಿ ವಿಚಾರಣೆ ನಡೆಸಿದ್ದಾರೆ. ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಿ ದ್ದವರ ವಿಚಾರಣೆ ನಡೆಸುವಾಗ ಅನುಮಾನಾಸ್ಪದವಾಗಿ ವರ್ತನೆ ಕಂಡು ಬಂದ ಕಾರಣ, ಆರೋಪಿ ವೆಂಕಟೇಶ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಮಾಂಗಲ್ಯ ಸರವನ್ನು ಕದ್ದು, ಮಣ್ಣಿನ ಗುಡ್ಡೆಯಲ್ಲಿ ಬಚ್ಚಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಪಿಎಸ್‌ಐ ಪಂಕಜ, ಸಿಬ್ಬಂದಿಗಳಾದ ರಂಗನಾಥ್, ಮುತ್ತುರಾಜ್, ರಾಧಾಕೃಷ್ಣ, ದತ್ತು ಅವರು ಆರೋಪಿ ಜೊತೆ ಸ್ಥಳಕ್ಕೆ ತೆರಳಿ ಬಚ್ಚಿಟ್ಟಿದ್ದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದರು. ಬಳಿಕ ಅದನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.