Advertisement

ರಾಜೇಶ್ವರಿ ಶೆಟ್ಟಿ ಮನೆಯಲ್ಲಿ ಕಳವು:ವರವಾಯಿತೆ ನಿರ್ಜನ ಬಂಗಲೆ?

10:27 AM Mar 09, 2018 | |

ಉಡುಪಿ: ಪತಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿರುವ ರಾಜೇಶ್ವರಿ ಶೆಟ್ಟಿ ಅವರಿಗೆ ಸೇರಿರುವ ಇಂದ್ರಾಳಿ ಹಯಗ್ರೀವ ನಗರದ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 

Advertisement

ಹಯಗ್ರೀವನಗರ 6ನೇ ಅಡ್ಡರಸ್ತೆಯಲ್ಲಿರುವ ಈ ಬಂಗಲೆ ಒಂಟಿ ಮನೆಯಲ್ಲ. ಹಾಗಂತ ಒಂದಕ್ಕೊಂದು ತಾಗಿಕೊಂಡು ಮನೆಗಳಿಲ್ಲ. ಮನೆಗಳ ನಡುವೆ ಅಂತರ ಇರುವುದು ಹಾಗೂ ಈ ಮನೆ 2 ವರ್ಷಗಳಿಂದ ನಿರ್ಜನವಾಗಿರುವುದು ಕಳ್ಳರಿಗೆ ವರದಾನವಾಗಿದೆ. ಮನೆಯ ಗೇಟು ಹಾಗೂ ಬಾಗಿಲುಗಳನ್ನು ತೆರೆಯದೆ ತಿಂಗಳುಗಳೇ ಕಳೆದಿವೆ. 2016ರಲ್ಲಿ ಭಾಸ್ಕರ ಶೆಟ್ಟಿ ಅವರ ಕೊಲೆ ನಡೆದ ಬಳಿಕ ಆ ಮನೆಯಲ್ಲಿ ಯಾರೂ ವಾಸ ಇರಲಿಲ್ಲ.

ಬೆಂಗಳೂರಿನ ರೇಣುಕಾ ವಿಶ್ವನಾಥ ರೈ ಅವರು ರಾಜೇಶ್ವರಿ ಶೆಟ್ಟಿ ಅವರಿಂದ ಈ ಮನೆಯ ಜಿಪಿಎ ಅಧಿಕಾರ ಪತ್ರ ಪಡೆದುಕೊಂಡಿದ್ದು, 2-3 ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಆದರೆ ಒಳಗೆ ಹೋಗುತ್ತಿರಲಿಲ್ಲ. ಗೇಟು, ಆವರಣಗೋಡೆಯ ಮೇಲೆ ಹುಲ್ಲು, ಬಳ್ಳಿ ಬೆಳೆದು ಬಹುತೇಕ ಪಾಳು ಬಿದ್ದಂತಿರುವ ಮನೆಗೆ ಕಳ್ಳರು ನುಗ್ಗಿ 3.25 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. 2017ರ ನ. 1ರಿಂದ 2018ರ ಮಾ. 6ರ ನಡುವೆ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿಸಿ ಕೆಮರಾ ಇಲ್ಲ
ಮನೆಗೆ ಸಿಸಿ ಕೆಮರಾ ಅಳವಡಿಸಿಲ್ಲ ಹಾಗೂ ಇಲ್ಲಿ ಯಾರೂ ವಾಸವಿಲ್ಲ ಎಂಬ ಮಾಹಿತಿಯನ್ನು ನಮಗೂ ನೀಡಿರಲಿಲ್ಲ ಎನ್ನುತ್ತಾರೆ ಪೊಲೀಸರು. ಮೇಲ್ನೋಟಕ್ಕೆ ಇದು ತಿಂಗಳ ಹಿಂದೆಯೇ ನಡೆದಿರುವ ಘಟನೆಯಂತೆ ತೋರುತ್ತದೆ. ಇದು ಕೇವಲ ಕಳವು ಪ್ರಕರಣವೇ ಹೊರತು ಕೊಲೆ ಮತ್ತು ಈ ಕಳವಿಗೆ ಸಂಬಂಧ ಇರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಪೊಲೀಸರು.

ಅಕ್ಕಪಕ್ಕದಲ್ಲಿರುವ ಮನೆಗಳು ಬಹುತೇಕ ದಿನವಿಡೀ ಬಾಗಿಲು ಮುಚ್ಚಿಕೊಂಡಿರುತ್ತವೆ. ಹಾಗಾಗಿ ಅವರು ಕೂಡ ಈ ಮನೆಯ ಕಡೆ ಕಣ್ಣುಹಾಕಿದಂತಿಲ್ಲ. “ಇತ್ತೀಚೆಗೆ ಇಲ್ಲಿ ಇಂತಹ ಕಳ್ಳತನ ಪ್ರಕರಣಗಳು 
ನಡೆದಿಲ್ಲ. ಆದರೂ ಪೊಲೀಸರು ಹೆಚ್ಚು ಗಸ್ತು ನಡೆಸಬೇಕು. ರಾತ್ರಿ ವೇಳೆ ಹೆಚ್ಚು ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ನಮ್ಮಲ್ಲಿ ಆತಂಕ ಮೂಡಿಸಿವೆ’ ಎನ್ನುತ್ತಾರೆ ಸ್ಥಳೀಯರು.

Advertisement

ಕಾರು ಕೂಡ ಅನಾಥ?
ಎರಡು ಗೇಟುಗಳುಳ್ಳ ಮನೆ ಅನಾಥವಾಗಿ ನಿಂತಿರುವಂತೆ ಭಾಸವಾಗುತ್ತದೆ. ಮನೆಯಂಗಳ ದ‌ಲ್ಲಿ ನಿಲ್ಲಿಸಿರುವ ಕಾರನ್ನು ಕೆಲವು ತಿಂಗಳುಗಳಿಂದ ಹೊರತೆಗೆದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. 

ಸಂಶಯಕ್ಕೆ ಕಾರಣವಾದುದು ತೆರೆದಿಟ್ಟಿದ್ದ ಕಾರಿನ ಬಾಗಿಲು! 

ಮನೆಯಲ್ಲಿ ಕಳವಾಗಿರುವುದು ಬೆಳಕಿಗೆ ಬರಲು ಕಾರಣವಾದದ್ದು ಮನೆಯಂಗಳದಲ್ಲಿ ನಿಲ್ಲಿಸಿರುವ ಕಾರಿನ ಬಾಗಿಲು!

2016ರ ಜುಲೈನ  ಬಳಿಕ ಆ ಮನೆಯ ಬಾಗಿಲು ಮಾತ್ರವಲ್ಲ ಗೇಟನ್ನು ಕೂಡ ತೆರೆದಿರಲಿಲ್ಲ. ರಾಜೇಶ್ವರಿ ಅವರಿಂದ ಮನೆಯ ಜಿಪಿಎ ಅಧಿಕಾರ ಪಡೆದಿದ್ದ ಬೆಂಗಳೂರಿನ ರೇಣುಕಾ ವಿಶ್ವನಾಥ ರೈ ಅವರು 2-3 ತಿಂಗಳಿಗೊಮ್ಮೆ ಮನೆ ಪರಿಸರಕ್ಕೆ ಬಂದು ನೋಡುತ್ತಿದ್ದರು.  ಮಾ.6ರಂದು ಕೂಡ ಇದೇ ರೀತಿ ಮನೆಯ ಹೊರಗಿಂದ ರೌಂಡ್‌ ಹೊಡೆಯುವಾಗ  ಅಂಗಳದೊಳಗಿದ್ದ ಕಾರಿನ ಬಾಗಿಲು ತೆರೆದಿರುವುದು ಕಂಡು ಬಂತು. ಅದನ್ನು ಕಂಡು ಗಾಬರಿಗೊಂಡ ಅವರು ಗೇಟು ತೆರೆದು ಅಂಗಳ ಪ್ರವೇಶಿಸಿದರು. ಆಗ ಮನೆಯ ಹಿಂಬದಿಯ ಕಬ್ಬಿಣದ ಬಾಗಿಲನ್ನು ಮುರಿದು ಯಾರೋ ಒಳ ಪ್ರವೇಶಿಸಿರುವುದು ತಿಳಿಯಿತು ಎಂದು ಗೊತ್ತಾಗಿದೆ.

ಮನೆಯಿಡೀ ಜಾಲಾಡಿದ್ದರು
ಒಳಗೆ ಪ್ರವೇಶಿಸಿರುವ ಕಳ್ಳರು  ಸಾವಕಾಶದಿಂದ ಮನೆಯಿಡೀ ಜಾಲಾ ಡಿದ್ದಾರೆ.  ನಳ್ಳಿ ನೀರನ್ನು  ಹರಿಯಬಿಟ್ಟು  ಹೋಗಿದ್ದರು. ಇದರಿಂದ ಕಪಾಟಿನಿಂದ ಕೆಳಕ್ಕೆ ಬಿದ್ದಿದ್ದ ಸೀರೆಗಳು ಕೂಡ ನೀರಿನಲ್ಲಿ ತೋಯ್ದು ಹೋಗಿವೆ.   ಕೋಣೆಗಳಿಗೆ ಅಳವಡಿಸಿದ್ದ ಎ.ಸಿ.ಗಳನ್ನು ಕೂಡ ಕಿತ್ತು ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ.

ಕಾರಿನಿಂದಲೂ ಕಳವು
ಅಂಗಳದಲ್ಲಿದ್ದ ಎರ್ಟಿಗಾ ಕಾರಿನ ಬಾಗಿಲು ತೆರೆದು ಅದರ ಡ್ಯಾಶ್‌ಬೋರ್ಡ್‌ ಮತ್ತಿತರ ಕೆಲವು ಪರಿಕರಗಳನ್ನು ಹೊತ್ತೂಯ್ದಿದ್ದಾರೆ. ಈ ರೀತಿಯ ಕೃತ್ಯ ಮಾಡುವಾಗ ಕಾರಿನ ಬಾಗಿಲಿನಲ್ಲಿ ಕುಶನ್‌ನ ತುಂಡುಗಳು ಸಿಲುಕಿ ಬಾಗಿಲು ಮುಚ್ಚಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಬಾಗಿಲು ತೆರೆದೇ ಇತ್ತು. 
ಇದರಿಂದಾಗಿ ಪ್ರಕರಣ ಬೆಳಕಿಗೆ ಬರುವಂತಾಗಿದೆ ಎಂದು ತಿಳಿದುಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next