ಬೆಂಗಳೂರು: ಮೋಜಿಗಾಗಿ ಮೊಬೈಲ್ ಕಳವು ಮತ್ತು ಮನೆ ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೋಜಿನ ಜೀವನಕ್ಕಾಗಿ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ. ನೀಲಸಂದ್ರದ ಮುನಿಯಲ್ಲಪ್ಪ ಗಾರ್ಡನ್ ನಿವಾಸಿ ರಹೀಮ್ ಪಾಷಾ (29) ಬಂಧಿತ. ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 8 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ರಹೀಮ್ ಪಾಷಾ, ಫಾಜಿಲ್ ಎಂಬಾತನ ಜತೆ ಸೇರಿಕೊಂಡು ಮೊಬೈಲ್ ಕದ್ದು ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಆರೋಪಿ ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ರಿಸಲ್ದಾರ್ ಸ್ಟ್ರೀಟ್ ಕಡೆಗೆ ಬರುತ್ತಿದ್ದ. ಅದೇ ವೇಳೆ ಜಿಎಸ್‌ಬಿ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಮನಿಸಿ, ಆರೋಪಿ ಕಡೆ ಹೋಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆದರೂ ಪೊಲೀಸ್ ಸಿಬ್ಬಂದಿ ಬೆನ್ನತ್ತಿ ಆರೋಪಿಯನ್ನು ಹಿಡಿದು ಕೈಯಲ್ಲಿದ್ದ ಕವರ್ ಪರಿಶೀಲಿಸಿದಾಗ ಮೊಬೈಲ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಮನೆ ಕಳ್ಳನ ಬಂಧನ: ಮತ್ತೂಂದು ಪ್ರಕರಣದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಶಿರಾ ಮೂಲದ ಗೊಲ್ಲ ರಂಗಪ್ಪ ಅಲಿಯಾಸ್ ಸತೀಶ್(40) ಬಂಧಿತ. ಆರೋಪಿಯಿಂದ 10 ಸಾವಿರ ರೂ. ನಗದು ಹಾಗೂ ಗೋದ್ರೇಜ್ ಕಂಪನಿಯ ಟ್ರೆಜರಿ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಂಧನದಿಂದ ಕೊಡಿಗೇಹಳ್ಳಿ ನಾಲ್ಕು ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸೇರಿ ಒಟ್ಟು ಏಳು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶ ಮೂಲದ ಆರೋಪಿ ಹಲವು ವರ್ಷಗಳಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ವಾಸವಾಗಿದ್ದಾನೆ. ವೃತ್ತಿಪರ ಕಳ್ಳನಾಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳನ್ನು ಎಸೆಗಿದ್ದಾನೆ. ಈ ಹಿಂದೆ ಶ್ರೀಗಂಧ ಕಳವು ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದ. ಅನಂತರವೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿಯು ಹಗಲಿನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳು, ವಾಣಿಜ್ಯ ಮಳಿಗೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಒಳ ಪ್ರವೇಶಿಸಿ ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.