ಬೆಂಗಳೂರು: ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಪತಿಗೆ ಬುದ್ಧಿ ಕಲಿಸಲೆಂದು ಸ್ನೇಹಿತರ ಬಳಿಯೇ ಚಿನ್ನ, ಸ್ಕೂಟರ್ ಕಳ್ಳತನ ಮಾಡಿಸಿ ಠಾಣೆಗೆ ದೂರು ಕೊಟ್ಟ ಪತ್ನಿಯ ಕಳ್ಳಾಟ ಕೊನೆಗೂ ಬಯಲಾಗಿದೆ.
ಧನರಾಜ್, ರಾಕೇಶ್ ಬಂಧಿತರು. 109 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮಲ್ಲೇಶ್ವರ ನಿವಾಸಿ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಮಹಿಳೆಯ ಪತಿ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದ. ಇದರಿಂದ ಬೇಸೆತ್ತ ಮಹಿಳೆ ಮನೆಯಲ್ಲಿರುವ ಚಿನ್ನಾಭರಣ, ದ್ವಿಚಕ್ರವಾಹನ ಕಳವಾಗಿದೆ ಎಂದರೆ ತನ್ನ ಪತಿ ಕೆಲಸಕ್ಕೆ ಹೋಗಬಹುದು ಎಂದು ಭಾವಿಸಿದ್ದಳು. ಈ ವಿಚಾರವನ್ನು ಆರೋಪಿಗಳಾದ ಧನರಾಜ್ ಹಾಗೂ ರಾಕೇಶ್‌ಗೆ ತಿಳಿಸಿದ್ದಳು. ತಾನು ರೂಪಿಸಿದ ಸಂಚಿನಂತೆ ಇತ್ತೀಚೆಗೆ ಪತಿಗೆ ತಿಳಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ 109 ಗ್ರಾಂ ಚಿನ್ನ ಬಿಡಿಸಿಕೊಂಡು ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡು ಬಂದಿದ್ದಳು. ಮಲ್ಲೇಶ್ವರ 13ನೇ ಕ್ರಾಸ್‌ನಲ್ಲಿ ಸ್ಕೂಟರ್ ಅನ್ನು ನಿಲುಗಡೆ ಮಾಡಿ ಅದರ ಫುಟ್‌ಮ್ಯಾಟ್‌ನಡಿ ಗಾಡಿ ಕೀ ಇಟ್ಟಿದ್ದಳು. ಇದಾದ ಬಳಿಕ ತನ್ನ ಗೆಳೆಯ ಧನಂಜಯ್‌ಗೆ ಕರೆ ಮಾಡಿ ತಾನು ಸ್ಕೂಟರ್ ನಿಲುಗಡೆ ಮಾಡಿರುವ ಪ್ರದೇಶದ ಲೊಕೇಷನ್ ಅನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಳು. ಇತ್ತ ಧನಂಜಯ್ ಮಹಿಳೆಯ ಸೂಚನೆ ಮೇರೆಗೆ ತನ್ನ ಸ್ನೇಹಿತ ರಾಕೇಶ್ ಜತೆ ಬಂದು ಸ್ಕೂಟರ್ ಚಲಾಯಿಸಿಕೊಂಡು ಹೋಗಿದ್ದ.
ಕಳ್ಳತನ ಮಾಡಿಸಿ ದೂರು ಕೊಟ್ಟ ಪತ್ನಿ: ಇತ್ತ ಪತಿಯ ಬಳಿ ಬಂದು ಸ್ಕೂಟರ್ ಕಳ್ಳತನವಾಗಿದೆ ಎಂದು ಗಾಬರಿಯಿಂದ ಹೇಳಿದ್ದಾಳೆ. ಇದಾದ ಬಳಿಕ ಮಲ್ಲೇಶ್ವರ ಠಾಣೆಗೆ ಬಂದ ಮಹಿಳೆ ತಾನು ಸ್ಕೂಟರ್ ನಿಲುಗಡೆ ಮಾಡಿ ವಾಕಿಂಗ್ ಮಾಡಲು ಹೋಗಿ ಬರುವಷ್ಟರಲ್ಲಿ ಸ್ಕೂಟರ್ ಕದ್ದಿದ್ದಾರೆ ಎಂದು ದೂರು ನೀಡಿದ್ದಳು. ಸ್ಕೂಟರ್ ಡಿಕ್ಕಿಯಲ್ಲಿ ಚಿನ್ನ ಇಟ್ಟಿರುವ ಬಗ್ಗೆಯೂ ಮಾಹಿತಿ ನೀಡಿದ್ದಳು. ಇತ್ತ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಧನಂಜಯ್ ಹಾಗೂ ರಾಕೇಶ್ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಕೂಡಲೇ ತಾಂತ್ರಿಕ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಠಾಣೆ ಕರೆ ತಂದಾಗ ಮಹಿಳೆಯ ಸೂಚನೆ ಮೇರೆಗೆ ಕಳ್ಳತನ ಮಾಡಿರುವುದಾಗಿ ನಡೆದ ಸಂಗತಿ ವಿವರಿಸಿದ್ದಾರೆ. ಆರೋಪಿಗಳ ಮೊಬೈಲ್ ಪರಿಶೀಲಿಸಿದಾಗ ದೂರುದಾರ ಮಹಿಳೆಯ ಜತೆಗೆ ಆರೋಪಿಗಳು ಚಾಟಿಂಗ್ ಮಾಡಿರುವುದು, ಮಾತನಾಡಿರುವುದು ಪತ್ತೆಯಾಗಿದೆ.