ಮುದಗಲ್ಲ: ಪಟ್ಟಣದ ಹೊರ ವಲಯದಲ್ಲಿರುವ ವಾಸುಕಿ ಸುಬ್ರಹ್ಮಣ್ಯೇಶ್ವರ ಮೂರ್ತಿ ಭಗ್ನಗೊಳಿಸಿದ ಮತ್ತು ದೇವಸ್ಥಾನಗಳಲ್ಲಿ ಹುಂಡಿ ಪೆಟ್ಟಿಗೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಮುದಗಲ್ಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮರಳಿ ಗ್ರಾಮದ ನಿವಾಸಿ ಶರಣಬಸವ ಬಸಪ್ಪ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ನೇತೃತ್ವದ ತನಿಖೆ ಕೈಗೊಂಡ ತಂಡ, ಕಳ್ಳನ ಸೆರೆಗೆ ಜಾಲ ಬೀಸಿತ್ತು. ಆರೋಪಿಯು ಪಟ್ಟಣದ ರಾಮಲಿಂಗೇಶ್ವರ ಕಾಲೋನಿಯ ರಾಮಲಿಂಗೇಶ್ವರ ದೇವಸ್ಥಾನದ ಹುಂಡಿ ಪೆಟ್ಟಿಗೆ ಮತ್ತು ಸೋಮವಾರ ಪೇಟೆಯ ನೀಲಕಂಠೇಶ್ವರ ದೇವಸ್ಥಾನ ಮುಂದಿರುವ ಹನುಮಂತ ದೇವರ ಹುಂಡಿ ಪೆಟ್ಟಿಗೆ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಈತನು ಪಟ್ಟಣವಲ್ಲದೇ ತಾವರಗೇರಾ ವಲಯ ಸೇರಿದಂತೆ ವಿವಿಧೆಡೆ ಹಣದ ಆಸೆಗಾಗಿ ದೇವರ ಮೂರ್ತಿಗಳನ್ನು ಭಗ್ನಗೊಳಿಸುವುದಲ್ಲದೇ ಹುಂಡಿ ಪೆಟ್ಟಿಗೆ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳೀಯ ಠಾಣೆಯಲ್ಲಿ ಏ.16ರಂದು ಹೊಳೆಯಪ್ಪ ಸಂಗಪ್ಪ ಬಂಕದಮನಿ ಎಂಬುವರು ದೂರು ನೀಡಿದ್ದರು.