Advertisement

ರೈತರಿಗೀಗ ಮೀಸಲು ಅರಣ್ಯ ಘೋಷಣೆ ಆತಂಕ!

02:40 PM Sep 29, 2019 | Naveen |

„ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ:
ಮಲೆನಾಡು ಭಾಗದ ರೈತರ ಮೇಲೆ ಅರಣ್ಯ ಇಲಾಖೆಯ ತೂಗುಕತ್ತಿ ಸದಾ ಕಾಲ ಇದ್ದು ರೈತರು ಆತಂಕದಿಂದಲೇ ಕೃಷಿ ಬದುಕು ಸಾಗಿಸುತ್ತಾ ಬಂದಿದ್ದಾರೆ. ಆದರೆ ಈಗ ಸರ್ಕಾರ ಅರಣ್ಯ ಕಾಯಿದೆ 1963ರ ಕಲಂ 41(1ಎ) ಪ್ರಕಾರ ತಾಲೂಕಿನ ಮತ್ತೂರು ಹೋಬಳಿಯ ಮಾಣಿಕೊಪ್ಪ ಹಾಗೂ ಕೊಳಿಗೆಯ ಗ್ರಾಮದ ಒಟ್ಟು 342 ಎಕರೆ 8ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಶೇಡ್ಗಾರು ಮೀಸಲು ಅರಣ್ಯ ಎಂದು ಘೋಷಿಸಿದ್ದು ಈ ಭಾಗದ ರೈತರು, ಕೃಷಿ ಕಾರ್ಮಿಕರು ಆತಂಕದಿಂದ ಬದುಕು ಸಾಗುವಂತಾಗಿದೆ.

Advertisement

ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವಾಲಯದವರು ಅಪಾಜಿ 38, ಎಫ್‌ಎಎಫ್‌ 2008 ಬೆಂಗಳೂರು 20-8-2019ರಂದು ಅಧಿಸೂಚನೆ ಹೊರಡಿಸಿದ್ದಾರೆ. ಮತ್ತೂರು ಹೋಬಳಿಯ ಮಾಣಿಕೊಪ್ಪ ಹಾಗೂ ಕೊಳಿಗೆ ಗ್ರಾಮದ ಗ್ರಾಮಸ್ಥರು ಹಲವು ವರ್ಷಗಳಿಂದ ಈ ಭಾಗದ ಕಾಡುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಈ ಭಾಗದಲ್ಲಿ ಕೃಷಿ ಬದುಕು ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ಸೊಪ್ಪು ಹಾಗೂ ಉರುವಲಿಗಾಗಿ ಸೌದೆಯನ್ನು ಮಾತ್ರ ಉಪಯೋಗಿಸುತ್ತ ಆ ಭಾಗದ ಕಾಡನ್ನು ಸಂರಕ್ಷಿಸುತ್ತ ಬಂದಿದ್ದರು. ಆದರೀಗ ಏಕಾಏಕಿ ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಭಾಗದ ಜನರು ಆತಂಕಗೊಂಡಿದ್ದಾರೆ. ಮಾಣಿಕೊಪ್ಪ ಗ್ರಾಮದ ಸರ್ವೆ ನಂ. 19ರ 164 ಎಕರೆ 8ಗುಂಟೆಯ 66/45 ಹೆಕ್ಟೇರ್‌ ಪ್ರದೇಶ ಕಾಡಿನಿಂದ ಕೂಡಿದೆ. ಕೆಲವೆಡೆ ಓಡಾಡುವ ರಸ್ತೆಗಳು ಸೇರಿವೆ.

ಮಾಣಿಕೊಪ್ಪದ ಸರ್ವೆ ನಂ. 10ರ 140 ಎಕರೆ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 200ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಕೃಷಿ ಬದುಕನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಈ ಭಾಗದ ಮಧ್ಯಮ ವರ್ಗದ ಕೃಷಿ ಕುಟುಂಬಗಳು ಭಯದಿಂದ ಬದುಕುವಂತಾಗಿದೆ.

ಕೊಳಿಗೆ ಗ್ರಾಮದ ಸರ್ವೆ ನಂ. 33 ರ 200 ಎಕರೆ 8ಗುಂಟೆ ವಿಸ್ತೀರ್ಣ ಹಾಗೂ ಸರ್ವೆ ನಂ. 29ರ 2 ಎಕರೆ ವಿಸ್ತೀರ್ಣದಲ್ಲಿ ಹಲವು ಮನೆಗಳು, ಕೃಷಿ ಜಮೀನುಗಳು, ಸಾರ್ವಜನಿಕರು ಓಡಾಡುವ ರಸ್ತೆಗಳಿವೆ. ಆದರೀಗ ಏಕಾಏಕಿ ಸರ್ಕಾರ ಈ ಎರಡು ಗ್ರಾಮಗಳ ಪ್ರದೇಶವನ್ನು ಮೇಲೆ ಶೇಡ್ಗಾರು ಮೀಸಲು ಅರಣ್ಯ ಎಂದು ಘೋಷಿಸಿದ್ದರಿಂದ ಇಲ್ಲಿನ ಕೃಷಿ ರೈತರ ಜೀವನ ಅತಂತ್ರವಾಗಲಿದೆ.

ಒಟ್ಟಾರೆ ಮಲೆನಾಡಿನಲ್ಲಿಂದು ಬಗರ್‌ಹುಕುಂ ಸಮಸ್ಯೆ, ಅರಣ್ಯಹಕ್ಕು, ಒತ್ತುವರಿ ಸಮಸ್ಯೆ ಮುಂತಾದ ಸಮಸ್ಯೆಗಳ ನಡುವೆಯೂ ರೈತರು ಕಂಗಾಲಾಗಿ ಬದುಕುತ್ತಿರುವಾಗ ಶೇಡ್ಗಾರು ಮೀಸಲು ಅರಣ್ಯದ ಘೋಷಣೆಯಿಂದ ಈ ಭಾಗದ ರೈತರ ಬದುಕಿನ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next