Advertisement
ಎಲ್ಲಾ ಓಕೆ, “ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ನಂತರ ನಾವು ಆ ಹುಡುಗಿಯನ್ನು ಎಲ್ಲೂ ನೋಡಿಲ್ಲವಲ್ಲ ಎಂದು ನೀವು ಕೇಳಬಹುದು. ಅದು ಕೂಡಾ ಸರಿ. ಏಕೆಂದರೆ ಆ ಚಿತ್ರ ಬಂದು ಎರಡು ವರ್ಷ ಕಳೆದರೂ ಸುಮಿತ್ರಾ ಮಾತ್ರ ಬೇರೆ ಯಾವುದೇ ಸಿನಿಮಾ ಮಾಡಿಲ್ಲ. ಅಷ್ಟೆಲ್ಲಾ ಸುದ್ದಿಯಾದ ಆ ಸಿನಿಮಾದಲ್ಲಿ ನಟಿಸಿದ ಸುಮಿತ್ರಾಗೆ ಬೇರೆ ಅವಕಾಶಗಳು ಬರಲಿಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಬಂತು, ಆದರೆ ಸುಮಿತ್ರಾ ಅವ್ಯಾವುದನ್ನು ಒಪ್ಪಿಕೊಳ್ಳಲಿಲ್ಲವಂತೆ. ಕಾರಣ ಎಜುಕೇಶನ್. ಸಿನಿಮಾದ ಜೊತೆಗೆ ಎಜುಕೇಶನ್ ಕೂಡಾ ಮುಖ್ಯ. ಅದನ್ನು ಮುಗಿಸಿಕೊಂಡು ಬಿಟ್ಟರೆ ಆ ನಂತರ ಆರಾಮವಾಗಿ ಸಿನಿಮಾ ಮಾಡುತ್ತಿರಬಹುದೆಂಬ ನಿರ್ಧಾರಕ್ಕೆ ಬಂದ ಸುಮಿತ್ರಾ ಈಗ ಎಜುಕೇಶನ್ ಮುಗಿಸಿದ್ದಾರೆ. “ನನಗೆ ಸಿನಿಮಾದ ಜೊತೆಗೆ ಓದು ಕೂಡಾ ಮುಖ್ಯ. ಹಾಗಾಗಿ, “ಡೈರೆಕ್ಟರ್ ಸ್ಪೆಷಲ್’ ನಂತರ ಯಾವುದೇ ಸಿನಿಮಾ ಮಾಡಲಿಲ್ಲ. ಅನೇಕ ಆಫರ್‌ಗಳು ಬಂದಿದ್ದಂತೂ ಸುಳ್ಳಲ್ಲ. ಈಗ ಓದು ಮುಗಿದಿದೆ. ಮತ್ತೆ ಸಿನಿಮಾದಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಖುಷಿಯ ವಿಚಾರವೆಂದರೆ “ಡೈರೆಕ್ಟರ್ ಸ್ಪೆಷಲ್’ ಚಿತ್ರದ ನನ್ನ ಪಾತ್ರವನ್ನು ಜನ ಇವತ್ತಿಗೂ ನೆನಪಿನಲ್ಲಿಟ್ಟಿದ್ದಾರೆ. ಹೋದಲ್ಲೆಲ್ಲಾ ಆ ಪಾತ್ರದ ಮೂಲಕ ಗುರುತಿಸುತ್ತಿದ್ದಾರೆ’ ಎಂಬುದು ಸುಮಿತ್ರಾ ಮಾತು.
ಸಿನಿಮಾಕ್ಕೆ ಬರುವ ಮುಂಚೆ ನಟನೆ ಕಲಿಯಬೇಕು, ಏಕಾಏಕಿ ಬಂದು ಕ್ಯಾಮರಾ ಮುಂದೆ ನಿಲ್ಲೋದು ಸರಿಯಲ್ಲವೆಂದು ಬಹುತೇಕ ಹೊಸಬರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ನಂತರ ಸಿನಿಮಾಕ್ಕೆ ಬರುತ್ತಾರೆ. ಸುಮಿತ್ರಾ ಕೂಡಾ ರಂಗಭೂಮಿಯಿಂದಲೇ ಬಂದವರು. “ಅಭಿನಯ ತರಂಗ’ದಲ್ಲಿ ನಟನಾ ತರಬೇತಿ ಪಡೆದು, ಆ ನಂತರ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹೀಗಿರುವಾಗಲೇ ಸುಮಿತ್ರಾಗೆ ಕಿರುತೆರೆಯಿಂದ ಅವಕಾಶ ಬರುತ್ತದೆ. ನಟನೆಗೆ ಯಾವುದಾದರೇನು ಎಂದುಕೊಂಡ ಸುಮಿತ್ರಾ ನೇರವಾಗಿ ಕಿರುತೆರೆ ಪ್ರವೇಶಿಸುತ್ತಾರೆ. “ಚಿಕ್ಕಮ್ಮ’, “ಕೃಷ್ಣ ರುಕ್ಮಿಣಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಸುಮಿತ್ರಾ ನಟಿಸಿದ್ದಾರೆ. ಅವೆಲ್ಲವೂ ಅವರಿಗೆ ನಟನೆಯ ಅನುಭವ ನೀಡುವ ಮೂಲಕ ಅವರ ಭರವಸೆಯನ್ನು ಹೆಚ್ಚಿಸಿದವಂತೆ. “ಅಭಿನಯ ತರಂಗದಲ್ಲಿ ನಟನೆಯ ಮೂಲ ಅಂಶಗಳನ್ನು ತಿಳಿದುಕೊಂಡೆ. ಅನೇಕ ನಾಟಕಗಳನ್ನು ಮಾಡಿದ್ದು ಸಿನಿಮಾ, ಧಾರಾವಾಹಿಯಲ್ಲಿ ನಟಿಸುವಾಗ ಸಹಾಯವಾಯಿತು. ಏಕಾಏಕಿ ಬಂದು ಕ್ಯಾಮರಾ ಮುಂದೆ ನಿಲ್ಲುತ್ತಿದ್ದರೆ ಖಂಡಿತಾ ನಾನು ತಬ್ಬಿಬ್ಟಾಗುತ್ತಿದ್ದೆ. ಆದರೆ ಅಭಿನಯ ತರಂಗದಿಂದ ಆ ಭಯ ದೂರವಾಯಿತು. ಸಿನಿಮಾ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗ ನನಗೆ ಮೊದಲು ಧಾರಾವಾಹಿಯ ಅವಕಾಶ ಬಂತು. ಎಲ್ಲಾ ಧಾರಾವಾಹಿಗಳಲ್ಲೂ ಜನ ಗುರುತಿಸುವಂತಹ ಪಾತ್ರಗಳೇ ಸಿಕ್ಕಿದವು. ಕಿರುತೆರೆಯಲ್ಲಿ ನಟಿಸುತ್ತಾ ಒಂದಷ್ಟು ಅನುಭವ ಆದರೆ, ಸಿನಿಮಾಕ್ಕೂ ಸಹಾಯವಾಗುತ್ತದೆಂದುಕೊಂಡು ಒಪ್ಪಿಕೊಂಡೆ. ಅದು ಒಳ್ಳೆಯ ಅನುಭವ ಕೊಟ್ಟಿದ್ದು ಸುಳ್ಳಲ್ಲ. ಪಾತ್ರಕ್ಕೆ ಹೇಗೆ ತಯಾರಾಗಬೇಕು, ಯಾವ ಸಂದರ್ಭದಲ್ಲಿ ಹೇಗೆ ನಟಿಸಬೇಕು … ಹೀಗೆ ಅನೇಕ ಅಂಶಗಳನ್ನು ನಾನು ಕಲಿತೆ. ಅದಕ್ಕಿಂತ ಹೆಚ್ಚಾಗಿ ಜನ ನನ್ನನ್ನು ಗುರುತಿಸಲಾರಂಭಿಸಿದರು. ಹೋದಲ್ಲೆಲ್ಲಾ ನೀನು ಆ ಧಾರಾವಾಹಿಯಲ್ಲಿ ನಟಿಸಿದ ಹುಡುಗಿಯಲ್ವಾ ಎಂದು ಕೇಳುವ ಮೂಲಕ ಅವರ ಪ್ರೀತಿ ತೋರಿಸುತ್ತಿದ್ದರು. ಆಗ ತುಂಬಾ ಖುಷಿಯಾಗುತ್ತಿತ್ತು’ ಎನ್ನುವುದು ಸುಮಿತ್ರಾ ಮಾತು. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗಲೇ ಸುಮಿತ್ರಾಗೆ ಸಿಕ್ಕಿದ್ದು “ಡೈರೆಕ್ಟರ್ ಸ್ಪೆಷಲ್’. ನಿರ್ದೇಶಕ ಗುರುಪ್ರಸಾದ್ ಚಿತ್ರದ ಒಂದು ತಂಗಿ ಪಾತ್ರಕ್ಕಾಗಿ ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಬಿದ್ದಿದ್ದು ಸುಮಿತ್ರಾ. ಕರೆದು ಅವಕಾಶ ಕೂಡಾ ಕೊಡುತ್ತಾರೆ. ಸುಮಿತ್ರಾ ಕೂಡಾ ಅವರ ನಂಬಿಕೆಯಂತೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಸುಮಿತ್ರಾ ಅವರನ್ನು ಜನ ಆ ಪಾತ್ರದ ಮೂಲಕ ಗುರುತಿಸುತ್ತಿದ್ದಾರಂತೆ. “ನಿಜ ಹೇಳಬೇಕೆಂದರೆ ಆ ಪಾತ್ರದಿಂದ ಚಿತ್ರರಂಗದಲ್ಲೂ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಏಕೆಂದರೆ ಅದು ಎರಡು ಶೇಡ್‌ನೊಂದಿಗೆ ಸಾಗುವ ಪಾತ್ರವಾಗಿತ್ತು. ಮೇಲ್ನೋಟಕ್ಕೆ ಮುಗ್ಧವಾಗಿ ಇರುವ ಪಾತ್ರ, ತನ್ನದೇ ಲೆಕ್ಕಾಚಾರದೊಂದಿಗೆ ಇರುತ್ತಿತ್ತು. ಮೊದಲ ಸಿನಿಮಾದಲ್ಲೇ ಇಂತಹ ಪಾತ್ರ ಸಿಕ್ಕಿದ್ದು ಹಾಗೂ ರಂಗಾಯಣ ರಘು ಸೇರಿದಂತೆ ಅನುಭವಿ ನಟರೊಂದಿಗೆ ನಟಿಸಲು ಅವಕಾಶ ಸಿಕ್ಕ ಖುಷಿ ನನಗಿದೆ. ಇವತ್ತಿಗೂ ಆ ಪಾತ್ರದ ಮೂಲಕ ನನ್ನನ್ನು ಗುರುತಿಸುತ್ತಿದ್ದಾರೆ’ ಎಂದು ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳುತ್ತಾರೆ. ಅವಕಾಶ
ಶಿಕ್ಷಣ ಮುಗಿಸಿಕೊಂಡಿರುವ ಸುಮಿತ್ರಾ ಈಗ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಗ್ಯಾಪ್‌ನ ನಂತರ ಮತ್ತೆ ಬರುತ್ತಿರುವುದರಿಂದ ಡ್ಯಾನ್ಸ್ ಸೇರಿದಂತೆ ಒಂದಷ್ಟು ತಯಾರಿ ಮಾಡಿಕೊಂಡೇ ಬರುತ್ತಿದ್ದಾರೆ. ಈಗಾಗಲೇ ಒಂದಷ್ಟು ಅವಕಾಶಗಳು ಸುಮಿತ್ರಾ ಅವರನ್ನು ಹುಡುಕಿ ಬರುತ್ತಿವೆ. ಅದರಲ್ಲಿ ತೆಲುಗು ಕೂಡಾ ಇದೆ. “ಒಂದಷ್ಟು ಅವಕಾಶಗಳು ಬರುತ್ತಿರುವುದಂತೂ ನಿಜ. ಯಾವುದನ್ನೂ ಈಗಲೇ ಹೇಳುವಂತಿಲ್ಲ. ಏಕೆಂದರೆ ಮಾತುಕತೆಯ ಹಂತದಲ್ಲಿರುವಾಗಲೇ ಹೇಳ್ಳೋದು ಸರಿಯಾಗಲ್ಲ. ಜೊತೆಗೆ ತೆಲುಗು ಸಿನಿಮಾವೊಂದರಿಂದಲೂ ಅವಕಾಶ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ತೆಲುಗು ಸಿನಿಮಾವೊಂದರಲ್ಲಿ ನಟಿಸಲಿದ್ದೇನೆ. ಅದು ಬಿಟ್ಟರೆ ಕನ್ನಡದ ಕೆಲವು ಸಿನಿಮಾಗಳಿಂದಲೂ ಆಫರ್ ಇದೆ’ ಎಂದು ತಮಗೆ ಬರುತ್ತಿರುವ ಅವಕಾಶಗಳ ಬಗ್ಗೆ ಹೇಳುತ್ತಾರೆ ಸುಮಿತ್ರಾ.
Related Articles
Advertisement
ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ