Advertisement

ಆಸಕ್ತರಿಂದ ರಂಗಭೂಮಿ ಜೀವಂತ: ಡಾ|ಜಂಗಮಶೆಟ್ಟಿ

03:20 PM Jun 28, 2017 | |

ಕಲಬುರಗಿ: ದೂರದರ್ಶನ ಮತ್ತು ಸಿನೆಮಾಗಳಿಗೆ ರಂಗಭೂಮಿಯನ್ನು ಹಿಂದೆ ಹಾಕುವ ತಾಕತ್ತಿಲ್ಲ. ಇವತ್ತು ರಂಗಭೂಮಿ ಏನಾದರೂ ಉಳಿದಿದೆ ಎಂದರೆ ಅದಕ್ಕೆ ಕಾರಣ ಆಸಕ್ತರೆ ಹೊರತು ಧನ-ಕನಕಗಳಲ್ಲ ಎಂದು ಸಿ.ಜಿ. ಕೃಷ್ಣಸ್ವಾಮಿ ಹೇಳುತ್ತಿದ್ದರು ಎಂದು ರಂಗ ಸಮಾಜದ ಸದಸ್ಯೆ ಹಾಗೂ ನಾಟಕಕಾರ್ತಿ ಡಾ| ಸುಜಾತಾ ಜಂಗಮಶೆಟ್ಟಿ ಸ್ಮರಿಸಿಕೊಂಡರು. 

Advertisement

ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಸಿಜಿಕೆ ಬೀದಿರಂಗ ದಿನ ಕಾರ್ಯಕ್ರಮದಲ್ಲಿ ರಂಗಶಿಕ್ಷಕ ಅಶೋಕ ತೊಟ್ನಳ್ಳಿ ಅವರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಸಿಜಿಕೆ ಅವರು ರಂಗಭೂಮಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದ ಶ್ರಮಜೀವಿ.

ಅವರಿಂದ ಕಲಿಯುವುದು ಸಾಕಷ್ಟಿದೆ. ಒಮ್ಮೆ ನಾಟಕ ಪ್ರದರ್ಶನಕ್ಕೆ ಬೆಳಕಿನ ವ್ಯವಸ್ಥೆ ಮಾಡಲು ರಂಗಸಜ್ಜಿಕೆ ಮಾಡುವವ ಕೈಕೊಟ್ಟ, ಬೆಳಗ್ಗೆಯೇ ನಾಟಕವಾಡಬೇಕು. ಬೆಳಕಿನ ವ್ಯವಸ್ಥೆ ಆಗಿರಲಿಲ್ಲ. ಏನು ಮಾಡುವುದು ಎಂದಾಗ ಖುದ್ದು ಸಿಜಿಕೆ ಬೆಳಕಿನ ವ್ಯವಸ್ಥೆ ಮಾಡಲು ಮುಂದಾಗುತ್ತಾರೆ. ಆಗ ಅವರಿಗೊಂದು ಅಪಘಾತವಾಗಿತ್ತು.

ಸಾವರಿಸಿಕೊಂಡು ನಾಟಕಕ್ಕೆ ಬೆಳಕು ನೀಡಿದ ಅವರ ಕೌಶಲ್ಯ ಮತ್ತು ಎದೆಗಾರಿಕೆ ಮೆಚ್ಚುವಂತಹದ್ದು ಎಂದರು. ಸೇಡಂ ತಾಲೂಕಿನ ಜಾಕನಪಲ್ಲಿಯ ಸರಕಾರಿ ಶಾಲೆ ರಂಗಶಿಕ್ಷಕ ಅಶೋಕ ತೋಟ್ನಳ್ಳಿ ಅವರಿಗೆ ಸಿಜಿಕೆ ರಂಗ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಅಶೋಕ ಒಂದು ಕುಗ್ರಾಮಕ್ಕೆ ರಂಗಭೂಮಿಯ ಬೆಳಕು ಚೆಲ್ಲಿದ್ದಾರೆ.

ಅಲ್ಲಿನ  ಮಕ್ಕಳಿಗೆ ಪಾಠದ ಜೊತೆಯಲ್ಲಿ ರಂಗಭೂಮಿ ಆಸಕ್ತಿ ಕಲಿಸಿದ್ದಾರೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗಶಿಕ್ಷಕ ಅಶೋಕ ತೊಟ್ನಳ್ಳಿ, ಯಾವುದೇ ಕಲೆ ಕೋಮು ಭಾವನೆಯನ್ನು ಹುಟ್ಟು ಹಾಕುವುದಿಲ್ಲ ಎನ್ನಲಿಕ್ಕೆ ಜಾಕನಪಲ್ಲಿಯಲ್ಲಿನ ನಮ್ಮ ಪ್ರಯೋಗವೇ ಸಾಕ್ಷಿ.

Advertisement

ಮಕ್ಕಳ ಮೂಲಕ ನಾಟಕ ಮಾಡಲು ಹೊರಟ ನಮಗೆ ಎಂದೂ ಅಲ್ಲಿನ ಜಾತಿ ವ್ಯವಸ್ಥೆ ಅಡ್ಡವಾಗಲೇ ಇಲ್ಲ. ಅದೂ ಅಲ್ಲದೆ, ಆ ಗ್ರಾಮದ ಜನರಲ್ಲಿನ ಕಲಾಪ್ರೀತಿ ನಿಜಕ್ಕೂ ಅನುಕರಣೀಯ ಎಂದರು. ಜಾಕನಪಲ್ಲಿ ಮಕ್ಕಳ ಸಾಧನೆಯನ್ನು ಪತ್ರಿಕೆಯೊಂದು ಬರೆದಾಗ ಬೆಂಗಳೂರು ಮೂಲದ ಕೆ.ಎನ್‌.ರಾಜು ಎನ್ನುವವರು 12 ಸಾವಿರ ರೂ. ಡಿಪಾಸಿಟ್‌ ಮಾಡಿದ್ದಾರೆ.

ಅಲ್ಲದೆ, ಕಾಯಕ ಸಂಸ್ಥೆಯ ಶಿವರಾಜ ಪಾಟೀಲರು ಜಾಕನಪಲ್ಲಿಯ ಮಕ್ಕಳು ಮೆಟ್ರಿಕ್‌ನಲ್ಲಿ ಶೇ. 60 ರಷ್ಟು ಅಂಕ ತೆಗೆದುಕೊಂಡರು ತಮ್ಮ ಕಾಲೇಜಿನಲ್ಲಿ ಪಿಯುಗೆ ಉಚಿತ ಪ್ರವೇಶ ನೀಡುವುದಾಗಿ ಹೇಳಿದ್ದಾರೆ ಎಂದು ನೆನಪಿಸಿಕೊಂಡರು. ಅತಿಥಿಯಾಗಿದ್ದ ಗುವಿವಿ ಪ್ರಾಧ್ಯಾಪಕ ಡಾ| ಕೆ.ಲಿಂಗಪ್ಪ, ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್‌ ಮಾತನಾಡಿದರು. 

ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಲ್ಲ ಎನ್ನಲಿಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೂಂದಿಲ್ಲ ಎಂದರು. ಪರಶುರಾಮ ಕೆ., ಬಸವರಾಜ ಜಾನೆ, ಮಂಜುಳಾ ಜಾನೆ, ಎಸ್‌.ಎಂ.ನೀಲಾ, ಬಸವರಾಜ ಉಪ್ಪಿನ್‌, ವಿಶ್ವೇಶ್ವರಿ ತಿವಾರಿ, ಭೀಮಾಶಂಕರ ಚಿನಮಳ್ಳಿ, ಬಾಬುರಾವ್‌ ಇದ್ದರು. ಬಿ.ನಯನಾ ನಿರೂಪಿಸಿದರು. ಪರುಶರಾಮ ಸಿ.ಎಂ. ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next