Advertisement

ಗಾಂಧಿ ಭವನ ಆವರಣದಲ್ಲಿ ಬಯಲು ರಂಗಮಂದಿರ

02:19 PM Jun 28, 2022 | Team Udayavani |

ಬೆಳಗಾವಿ: ನಗರದ ಪೀರನವಾಡಿಯಲ್ಲಿ ತಲೆ ಎತ್ತಿರುವ ನೂತನ ಗಾಂಧಿ ಭವನ ಕಟ್ಟಡ ಆವರಣದಲ್ಲಿ ಮುಂದಿನ ಒಂದು ವರ್ಷದಲ್ಲಿ ಈ ನೆಲದ ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ಗಾಂಧೀಜಿ ಅವರ ತತ್ವ ಸಿದ್ಧಾಂತಗಳ ಜೀವಂತಿಕೆಗಾಗಿ ಬಯಲು ರಂಗಮಂದಿರ ಮತ್ತು ಡಿಜಿಟಲ್‌ ಲೈಬ್ರರಿ ನಿರ್ಮಿಸಲಾಗುವುದು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಭರವಸೆ ನೀಡಿದರು. ನಗರದ ಪೀರನವಾಡಿಯಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಲಾದ ಭವ್ಯ ಗಾಂಧಿ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮಹಾತ್ಮ ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್‌ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರ 100 ವರ್ಷಗಳ ಸ್ಮರಣೆಗಾಗಿ ಈ ಗಾಂಧಿ ಭವನದಲ್ಲಿ ಒಂದು ವರ್ಷದ ವರೆಗೆ ಸರ್ಕಾರದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗಾಂಧಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ರಾಷ್ಟ್ರಪಿತ ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸಾ ಗುಣಗಳು ಇವತ್ತಿನ ಯುವ ಸಮುದಾಯಕ್ಕೆ ಪ್ರೇರಕವಾಗಿವೆ. ಗಾಂಧಿ ನೀಡಿದ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಹೇಳಿದರು.

ರಾಮ ರಾಜ್ಯ, ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಆಶಯವನ್ನು ನಮ್ಮ ಸರ್ಕಾರ ನನಸು ಮಾಡುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ದೇಶ ಭದ್ರತೆಗಾಗಿ ಅಗ್ನಿಪಥ್‌ ಯೋಜನೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

2 ಎಕರೆ ವಿಸ್ತೀರ್ಣದಲ್ಲಿ 3 ಕೋಟಿ ರೂ. ವ್ಯಯಿಸಿ ನಿರ್ಮಿಸಲಾದ ಗಾಂಧಿ ಭವನದ ಆವರಣದಲ್ಲಿ ಸ್ಥಾಪಿಸಲಾದ ಆಕರ್ಷಕ ಧ್ಯಾನಸ್ಥ ಗಾಂಧೀಜಿಯ ಕಂಚಿನ ಪುತ್ಥಳಿಯನ್ನು ಸಚಿವರು, ಶಾಸಕರು ಕಟ್ಟಡ ಉದ್ಘಾಟನೆಗೂ ಮುನ್ನ ಅನಾವರಣಗೊಳಿಸಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರು, ಗಾಂಧಿ ಭವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಅನುಕೂಲವಾಗುವಂತೆ ಭವನದ ಆವರಣದಲ್ಲಿ ಬಯಲು ರಂಗಮಂದಿರ ಹಾಗೂ ಗ್ರಂಥಾಲಯ ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸುಸಜ್ಜಿತ ಹಾಗೂ ಸುಂದರ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಕುರಡಗಿ, ನಿರ್ಮಿತಿ ಕೇಂದ್ರದ ನಾಗರಾಜ ಪಾಟೀಲ ಅವರನ್ನು ಹಾಗೂ ಗಾಂಧೀಜಿ ಕಂಚಿನ ಪ್ರತಿಮೆ ರೂಪಿಸಿದ ಕೊಲ್ಲಾಪುರದ ಲಲಿತಾ ಡೊಂಗರಸಾನೆ ಅವರನ್ನು ಸಚಿವರು, ಶಾಸಕರು ಸತ್ಕರಿಸಿ ಗೌರವಿಸಿದರು.

ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಾರ್ತಾ ಇಲಾಖೆ ಸಿಬ್ಬಂದಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಪೀರನವಾಡಿ ಗ್ರಾಮಸ್ಥರು ಇದ್ದರು. ಸರ್ವಮಂಗಳ ಅರಳೀಕಟ್ಟಿ ನಿರೂಪಿಸಿ, ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next