ಇಂದಿನಿಂದ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಆರಂಭವಾಗಲಿದೆ. ಈ ಮೂಲಕ ಮತ್ತೂಮ್ಮೆ ಕನ್ನಡ ಚಿತ್ರರಂಗದ ಮೊಗದಲ್ಲಿ ನಗುಮೂಡಿದೆ. ಒಂದಷ್ಟು
ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹೊಸಬರು, ಸ್ಟಾರ್‌ಗಳು ಒಟ್ಟೊಟ್ಟಿಗೆ ಸಿನಿಜಾತ್ರೆ ಮಾಡಲು ಹೊರಟಿದ್ದಾರೆ. ಅವರಿಗಿರುವ ಒಂದೇ ಒಂದು ಭರವಸೆ ಎಂದರೆ ಕನ್ನಡ ಪ್ರೇಕ್ಷಕ.
ಹೌದು, ಇಡೀ ಚಿತ್ರರಂಗ ನಂಬಿರೋದು ಪ್ರೇಕ್ಷಕರನ್ನು. ಡಾ.ರಾಜ್ ಅವರು ಹೇಳಿದಂತೆ ಅಭಿಮಾನಿಗಳೇ ದೇವರು. ಈಗ ಕನ್ನಡ ಚಿತ್ರರಂಗವನ್ನು ಮೇಲೆತ್ತುವ ಜವಾಬ್ದಾರಿ ಸಿನಿಮಾ ಮಂದಿಗಿಂತ ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೆಚ್ಚಿದೆ. ಆ ನಿಟ್ಟಿನಲ್ಲಿ ಅಭಿಮಾನಿಗಳು ದೊಡ್ಡ ಮನಸ್ಸು ಮಾಡಿ, ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಅಭಿಮಾನಿ ವರ್ಗ ಮನಸ್ಸು ಮಾಡಿದರೆ ಚಿತ್ರರಂಗ ಮತ್ತೆ ಹಳೆಯ ದಿನಗಳನ್ನು ಕಾಣೋದು ಕಷ್ಟದ ಕೆಲಸವಲ್ಲ.
ಇಷ್ಟು ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಬೆಳೆಸಿಕೊಂಡು, ಆಯಾಯ ಸಮಯಕ್ಕೆ ಸ್ಟಾರ್‌ಗಳನ್ನು ಹುಟ್ಟುಹಾಕಿಕೊಂಡು, ಒಳ್ಳೆಯ ಚಿತ್ರಗಳನ್ನು ಗೆಲ್ಲಿಸಿಕೊಂಡು ಬಂದವರು ಪ್ರೇಕ್ಷಕರು. ಆದರೆ, ಈ ಬಾರಿ ಪ್ರೇಕ್ಷಕರ ಬೆಂಬಲ ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಬೇಕಿದೆ. ಅದಕ್ಕೆ ಕಾರಣ ಕೋವಿಡ್‌ನಿಂದ ನಲುಗಿ ಹೋದ ಚಿತ್ರರಂಗ. ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಎಲ್ಲಾ ಕ್ಷೇತ್ರಗಳನ್ನು ಇನ್ನಿಲ್ಲದಂತೆ ಕಾಡಿದೆ. ಅದರಿಂದ ಕನ್ನಡ ಚಿತ್ರರಂಗ ಕೂಡಾ ಹೊರತಾಗಿಲ್ಲ.
ಬೇರೆ ಕ್ಷೇತ್ರಗಳಲ್ಲಿ ಕೇವಲ ಕಾಸು ಅಷ್ಟೇ ನಷ್ಟವಾಗಿರಬಹುದು. ಆದರೆ, ಚಿತ್ರರಂಗದ ವಿಷಯಕ್ಕೆ ಬರುವುದಾದರೆ ಕಾಸು-ಕನಸು ಎರಡೂ ನಷ್ಟವಾಗಿದೆ. ಒಳ್ಳೆಯ ಸಿನಿಮಾ ಮಾಡಬೇಕೆಂದು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದ ಅದೆಷ್ಟೋ ಪ್ರತಿಭೆಗಳು ಕೋವಿಡ್‌ನಿಂದಾಗಿ ಭರವಸೆ ಕಳೆದುಕೊಂಡಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸಬೇಕೆಂದು ಸಿನಿಮಾ ಮಾಡಲು ಮುಂದಾದ ನಿರ್ಮಾಪಕರು ವಿಶ್ವಾಸ ಕಳೆದು ಕೊಳ್ಳುವಂತಾಗಿದೆ. ಇವೆಲ್ಲವೂ ಮರಳಿ ಬರಬೇಕಾದರೆ ಪ್ರೇಕ್ಷಕರು ಸಿನಿಮಾಗಳನ್ನು ಗೆಲ್ಲಿಸಬೇಕು. ಒಂದು ಸಿನಿಮಾ ಗೆದ್ದರೆ ಹತ್ತು ಮಂದಿಗೆ ವಿಶ್ವಾಸ ಬರುತ್ತದೆ. ಆ ಹತ್ತು ಮಂದಿ ಸಿನಿಮಾ ಮಾಡಲು ಬಂದರೆ ನೂರಾರು ಸಿನಿ ಕಾರ್ಮಿಕರಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ ಕೆಲಸ ಸಿಗುತ್ತದೆ. ಹೀಗೆ ಸತತವಾಗಿ ಸಿನಿಮಾಗಳು ಗೆಲ್ಲುತ್ತಾ ಹೋದರೆ ಚಿತ್ರರಂಗ ಮೊದಲಿನ ಸ್ಥಿತಿಗೆ ಬರೋಕೆ ಹೆಚ್ಚು ಸಮಯ ಬೇಕಾಗಿಲ್ಲ.
ರಥ ಎಳೆಯೋರು ಪ್ರೇಕ್ಷಕರೇ: ಸಿನಿಮಾ ಮಂದಿಯ ಒಂದೊಳ್ಳೆಯ ಕರ್ತವ್ಯ ಸಿನಿಮಾ ಮಾಡಿ ಅದನ್ನು ಪ್ರೇಕ್ಷಕನ ಮುಂದಿಡೋ ದಷ್ಟೇ. ಅದರಾಚೆಗಿನ ಜವಾಬ್ದಾರಿ ಏನಿದ್ದರೂ ಪ್ರೇಕ್ಷಕನದ್ದು. ಒಂದೊಳ್ಳೆಯ ಸಿನಿಮಾವನ್ನು ಬೆನ್ನುತಟ್ಟುವ ಮೂಲಕ, ಬಾಯಿ ಮಾತಿನ ಪ್ರಚಾರದ ಮೂಲಕ ಆ ಸಿನಿಮಾವನ್ನು ಪ್ರೋತ್ಸಾಹಿಸಿದಾಗ ಸಿನಿಮಾ ಮಂದಿ ದಡ ಸೇರಬಹುದು.
ಕನ್ನಡ ಚಿತ್ರರಂಗವನ್ನೇ ನಂಬಿ ಕೋಟಿಗಟ್ಟಲೇ ಬಂಡವಾಳ ಹೂಡಿರೋದು ಒಂದು ಕಡೆಯಾದರೆ, ಚಿತ್ರರಂಗದಲ್ಲೇ ಭವಿಷ್ಯ ಕಂಡುಕೊಳ್ಳುತ್ತೇನೆ ಎಂಬ ಭರವಸೆಯಿಂದ ಕೈ ತುಂಬಾ ಸಂಬಳ ಬರುತ್ತಿದ್ದ ನೌಕರಿ ಬಿಟ್ಟು ಚಿತ್ರರಂಗಕ್ಕೆ ಬಂದಿದ್ದಾರೆ. ಇವರೆಲ್ಲರ ಭರವಸೆಯೊಂದೇ ಅದು ಕನ್ನಡ ಸಿನಿಮಾ ಪ್ರೇಕ್ಷಕ. ಇವತ್ತು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿರುವವರ, ಕೋಟಿಗಟ್ಟಲೇ ಬಿಝಿನೆಸ್ ಮಾಡಿರುವ ಸಿನಿಮಾಗಳ ಹಿಂದೆ ಇರೋದು ಇದೇ ಪ್ರೇಕ್ಷಕ ವರ್ಗ. ಹಾಗಾಗಿ, ಕೋವಿಡ್ ಬಳಿಕ ಈಗಷ್ಟೇ ಚೇತರಿಕೆಯ ಹಾದಿಯತ್ತ ಮುಖ ಮಾಡಿದೆ. ಹಾಗಾಗಿ, ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳನ್ನು ಕೈ ಹಿಡಿಯಬೇಕಿದೆ. ಗೆಲುವಿನ ಟಾನಿಕ್ ಇರೋದು ಪ್ರೇಕ್ಷಕನ ಕೈಯಲ್ಲಿ. ಆ ಟಾನಿಕ್ ಅನ್ನು ಪಡೆಯಬೇಕಾದರೆ ಸಿನಿಮಾ ಮಂದಿ ಕೂಡಾ ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು, ಪ್ರೇಕ್ಷಕನನ್ನು ಮನವೊಲಿಸಬೇಕಿದೆ.
ರವಿಪ್ರಕಾಶ್ ರೈ