Advertisement
ಪುತ್ತೂರು ಪೇಟೆಯನ್ನು ಕಣ್ಸೆರೆಯಲ್ಲಿ ಹಿಡಿಯಬಲ್ಲ ಸ್ಥಳ ಬಿರುಮಲೆ ಗುಡ್ಡ. ಇದರ ತುದಿಯಲ್ಲಿ ಗಾಂಧಿ ಮಂಟಪ, ಆಯಕಟ್ಟಿನ ಜಾಗ ಇದೆ. ಇಲ್ಲಿನ ವಿಸ್ತಾರ ಜಾಗದಲ್ಲಿ ಒಂದಷ್ಟನ್ನು ಅಂದರೆ 14 ಎಕರೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದರ ಉದ್ದೇಶ, ಪೇಟೆ ನಡುವೆ ಕಾಡನ್ನು ನಿರ್ಮಿಸುವುದು. ವಾಯುವಿಹಾರಕ್ಕೆ, ವಾಕಿಂಗ್‌ಗೆ, ಕಾಡಿನ ಪರಿಸರ ಸವಿಯುವ ಕಾರಣಕ್ಕೆ ಅರಣ್ಯದಂತೆ ನಿರ್ಮಿಸಬೇಕೆಂಬ ತುಡಿತ ಅರಣ್ಯ ಇಲಾಖೆಯದ್ದು. ಮೊದಲ ಹಂತದ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ನಡೆಸಲು ಮುಂದಾಗಿದೆ. ಇದರಲ್ಲಿ ಆ್ಯಂಪಿ ಥಿಯೇಟರನ್ನು ಸೇರಿಸಿಕೊಳ್ಳಲಾಗಿದೆ.
ಪ್ರತಿ ಜಿಲ್ಲೆಗೊಂದು ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ರಾಜ್ಯ ಸರಕಾರ ನೀಡಿತ್ತು. ಆದರೆ ಕರಾವಳಿ ಜಿಲ್ಲೆಗಳಿಗೆ ತಾಲೂಕಿ ಗೊಂದ ರಂತೆ ವೃಕ್ಷೋದ್ಯಾನ ನೀಡಲಾಗಿದೆ. ಇದರಲ್ಲಿ ಪುತ್ತೂರು ತಾಲೂಕಿನ ಬಿರುಮಲೆ ಗುಡ್ಡದಲ್ಲಿ ವೃಕ್ಷೋದ್ಯಾನ ನಿರ್ಮಾಣ ಆಗುತ್ತಿದೆ. ಇದು ಐದು ವರ್ಷದ ಯೋಜನೆ. ಒಟ್ಟು 1.25 ಕೋಟಿ ರೂ.ನಷ್ಟು ಅನುದಾನ ನೀಡಲಾಗಿದೆ. ಮೊದಲ ಹಂತದ ಯೋಜನೆಯಲ್ಲಿ 30 ಲಕ್ಷ ರೂ. ಮಂಜೂರಾಗಿದೆ. ಪುತ್ತೂರಿನ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುತ್ತಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಪುತ್ತೂರಿಗೆ ಹೆಚ್ಚುವರಿ 11.5 ಲಕ್ಷ ರೂ. ಗಳನ್ನು ಮಂಜೂರುಗೊಳಿಸಿದೆ. ಇಷ್ಟು ಅನುದಾನವನ್ನು ಬಳಸಿಕೊಂಡು ಸ್ವಾಗತ ಗೇಟ್, ಟಿಕೇಟ್ ಕೌಂಟರ್, ಚೈನ್ ಲಿಂಕ್ ಬೇಲಿ, ಮುಳ್ಳುತಂತಿ ಬೇಲಿ ಹಾಗೂ ವಾಕಿಂಗ್ ಪಾಥ್, ಪೆರಾಗೋಲ, ಕುಳಿತುಕೊಳ್ಳಲು ಕಟ್ಟೆ, ಬೋರ್‌ವೆಲ್, 700 ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಈಗ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆ ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ಆ್ಯಂಪಿ ಥಿಯೇಟರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಕಾಂಕ್ರೀಟ್ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ನೈಸರ್ಗಿಕ ವಸ್ತುಗಳಿಂದಲೇ ಆ್ಯಂಪಿ ಥಿಯೇಟರ್ ಹಾಗೂ ಇತರ ಕೆಲಸಗಳನ್ನು ನಿರ್ಮಾಣ ಮಾಡಲಿದೆ.
Related Articles
Advertisement
ಏನಿದು ಆ್ಯಂಪಿಥಿಯೇಟರ್?ಆ್ಯಂಪಿ ಥಿಯೇಟರ್ ಎನ್ನುವುದು ಗ್ರೀಕ್ ಪದ. ಬಯಲು ಮಂಟಪ ಎನ್ನುವುದೇ ಇದರ ಅರ್ಥ. ಬಿರುಮಲೆ ಗುಡ್ಡದಲ್ಲಿ ಮಕ್ಕಳಿಗಾಗಿ ನಿರ್ಮಿಸುವ ಕಾರಣ, 30 ಮಕ್ಕಳು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇಡಲಾಗುವುದು. ನಡುವಿನಲ್ಲಿ ಸ್ಟೇಡಿಯಂ, ಸುತ್ತ ಕುಳಿತುಕೊಳ್ಳಲು ಆಸನ. ಕಾಂಕ್ರೀಟ್ ಕಡಿಮೆ ಮಾಡಿ, ಮಣ್ಣಿನ ಕಲ್ಲುಗಳನ್ನು ಬಳಸಿ ನಿರ್ಮಾಣ ಕಾರ್ಯ ಮಾಡಲಾಗುವುದು. 3ಡಿ ಫೂಟೋ
ಅರಣ್ಯದ ಬಗೆಗಿನ ಫೂಟೋ, ಸಿನಿಮಾ, ಪ್ರಾಣಿ- ಪಕ್ಷಿಗಳ ಮಾಹಿತಿ ನೀಡುವುದು, 3ಡಿಯಲ್ಲಿ ಫೂಟೋಗಳನ್ನು ತೋರಿಸುವ ಕೆಲಸ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ. ಈ ಮೊದಲಿದ್ದ ಗ್ರಂಥಾಲಯವನ್ನು ನವೀಕರಣಗೊಳಿಸಿ ಬಳಸಿ ಕೊಳ್ಳಲಿದೆ. ಇದಕ್ಕೆಲ್ಲ ಟಿಕೆಟ್ ಶುಲ್ಕ ವಿಧಿಸುವ ಆಲೋಚನೆ ಇದೆ. ಆದರೆ ಶುಲ್ಕ ಎಷ್ಟು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಸರಕಾರಕ್ಕೆ ಪ್ರಸ್ತಾಪ
ಕಾಡಿನ ವಾತಾವರಣ ಪರಿಚಯಿಸುವ ಉದ್ದೇಶವೇ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ. ಇದರೊಳಗಡೆ ಆ್ಯಂಪಿ ಥಿಯೇಟರ್ ನಿರ್ಮಿಸಬೇಕೆಂದು ಸರಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದೆ. ಮಕ್ಕಳ ಪ್ರತಿಭೆ ಇಲ್ಲಿ ಬೆಳಗಬೇಕು. ಹಾಗೆಂದು ಇದರೊಳಗಡೆ ಇಡೀ ದಿನಕ್ಕೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಸಂಜೆ ಹೊತ್ತು ಮಾತ್ರ ಬಂದು ವಿರಮಿಸಿ, ಖುಷಿ ಪಟ್ಟು ಹೋಗಬಹುದು.
– ವಿ.ಪಿ. ಕಾರ್ಯಪ್ಪ,
ವಲಯ ಅರಣ್ಯಾಧಿಕಾರಿ,
ಪುತ್ತೂರು ಗಣೇಶ್ ಎನ್. ಕಲ್ಲರ್ಪೆ