Advertisement

ರಂಗ ದಿಗ್ಗಜರ ಪಾತ್ರಗಳು ಡಿಜಿಟಲ್‌ ಪರದೆಗೆ 

06:51 AM Oct 15, 2018 | Team Udayavani |

ಬೆಂಗಳೂರು: ದಶಕಗಳ ಕಾಲ ಕರ್ನಾಟಕ ರಂಗಭೂಮಿಯನ್ನು ಆಳಿದ ಮಹಾನ್‌ ರಂಗನಾಯಕರ ಪಾತ್ರಗಳು ಇನ್ನು ಮುಂದೆ ಡಿಜಿಟಲ್‌ ಪರದೆ ಮೇಲೆ ಮಿಂಚಲಿವೆ. ಗುಬ್ಬಿ ಕಂಪನಿಯ ಸಂಸ್ಥಾಪಕ ಗುಬ್ಬಿ ವೀರಣ್ಣ, ಹಿರಿಯ ನಾಟಕಕಾರರಾದ ಟಿ.ಪಿ ಕೈಲಾಸಂ, ಶ್ರೀರಂಗ, ಪರ್ವತವಾಣಿ ಸೇರಿ ನೂರಾರು ರಂಗಭೂಮಿ ಕಲಾವಿದರ ಪಾತ್ರಗಳು ಡಿಜಿಟಲೀಕರಣಗೊಂಡು ಇಂದಿನ ತಲೆಮಾರಿಗೆ,
ಹಿಂದಿನ ತಲೆಮಾರಿನ ರಂಗಭೂಮಿಯನ್ನು ಪರಿಚಯಿಸಲಿವೆ. ಮತ್ತೆ ಗತವೈಭದ ಕಥೆಯನ್ನು ಪೊಣಿಸಿ ಕಣ್ಮುಂದೆ ಇಡಲಿವೆ.

Advertisement

ಕರ್ನಾಟಕ ನಾಟಕ ಅಕಾಡೆಮಿ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಂಬಂಧ ಮುಂಬೈ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಹಿರಿಯ ರಂಗಭೂಮಿ ತಜ್ಞರಿಂದ ಅಮೂಲ್ಯ ದಾಖಲೆಗಳ ಕ್ರೋಢೀಕರಿಸುವ ಕಾರ್ಯ ಆರಂಭಿಸಿದೆ. ಎಚ್‌.ವಿ.ವೆಂಕಟಸುಬ್ಬಯ್ಯ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ರಂಗ ದಾಖಲಾತಿ ಸಂಗ್ರಹಕಾರ  ಎ.ಎಸ್‌.ಕೃಷ್ಣಮೂರ್ತಿ, ತಿಪಟೂರಿನ ನಾಗೇಶ್‌ ಶೆಟ್ಟಿ, ಮುಂಬೈನಲ್ಲಿ ನೆಲೆಸಿರುವ ರಂಗಕಲಾವಿದ ಹಾಗೂ ಮೈಸೂರು ಅಸೋಸಿಯೇಷನ್‌ನ ಮಂಜುನಾಥಯ್ಯ, ಹಿರಿಯ ಛಾಯಾಗ್ರಾಹಕ
ಕೆ.ಎಸ್‌.ಶಿವರುದ್ರಯ್ಯ ಸೇರಿ ಹಲವು ರಂಗದಾಖಲಾತಿ ಸಂಗ್ರಹಕಾರರು ತಮ್ಮಲ್ಲಿರುವ ದಾಖಲಾತಿಗಳನ್ನು ಅಕಾಡೆಮಿಗೆ ನೀಡಲು ಮುಂದೆ ಬಂದಿದ್ದಾರೆ.

ಎಚ್‌.ವಿ.ವೆಂಕಟಸುಬ್ಬಯ್ಯ ಅವರ ಬಳಿ ಶೇ.80ರಷ್ಟು ರಂಗಭೂಮಿ ದಾಖಲೆಗಳಿದ್ದು, 1940ರಲ್ಲಿ ಹಿರಿಯ ನಾಟಕಕಾರ ಟಿ.ಪಿ.ಕೈಲಾಸಂ ಅವರು ಕರ್ಣನ ಪಾತ್ರದಲ್ಲಿ  ಅಭಿನಯಿಸಿದ ಫೋಟೋ ದೊರೆತಿದೆ. ಅಲ್ಲದೆ 1956ರಲ್ಲಿ ಶ್ರೀರಂಗರು ಉಜ್ಜಯಿನಿಗೆ ತೆರಳಿ, ಅಲ್ಲಿ ಪ್ರದರ್ಶಿಸಿರುವ “ಅಭಿಜ್ಞಾನ ಶಾಕುಂತಲಾ’, ನಾಟಕದ ಚಿತ್ರ ಕೂಡ ದೊರಕಿದೆ. ಈ ಫೋಟೋಗಳಿಗೆ ಡಿಜಿಟಲೀಕರಣದ ಟಚ್‌ ನೀಡಲಾಗುವುದು ಎಂದು ಕರ್ನಾಟಕ ನಾಟಕ ಅಕಾಡೆಮಿ ಹೇಳಿದೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರಕ್ಕೆ ತೆರಳಲಿರುವ ಅಕಾಡೆಮಿ ದಾಖಲಾತಿ ಸಂಗ್ರಹಕಾರರ ತಂಡ, ರಂಗ ದಾಖಲಾತಿ ಸಂಗ್ರಹಕಾರ ಎ.ಎಸ್‌.ಕೃಷ್ಣಮೂರ್ತಿ ಅವರಲ್ಲಿದ್ದ 
250 ಅಪರೂಪದ ರಂಗ ದಾಖಲೆಗಳನ್ನು ಸಂಗ್ರಹಿಸಿದೆ. ಇದರಲ್ಲಿ ರಂಗಭೂಮಿಗೆ ಸಂಬಂಧಿಸಿದ ಲೇಖನಗಳು, ವಿಮರ್ಶೆಗಳು, ಕಲಾವಿದರ ಪರಿಚಯ ಲೇಖನಗಳು ಸೇರಿವೆ.

ವೆಬ್‌ಸೈಟ್‌ನಲ್ಲಿ ರಂಗ ಗೀತೆಗಳು: ರಂಗಗೀತೆಗಳು ಕೂಡ ರಂಗಭೂಮಿಯ ಜೀವಾಳ ಎನಿಸಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗಗೀತೆಗಳು ಒಂದೇ ಕಡೆ ದೊರಕಲಿ ಎಂಬ ದೃಷ್ಟಿಯಿಂದ ಗೀತೆಗಳ ಸಂಗ್ರಹಕ್ಕೆ ಮುಂದಾಗಿದೆ. ಲಹರಿ ಸಂಸ್ಥೆಯಲ್ಲಿ ದೇಸಿ ರಂಗಭೂಮಿಗೆ ಸಂಬಂಧಿಸಿದ ಹಲವು ಧ್ವನಿಮುದ್ರಣಗಳ ಕ್ಯಾಸೆಟ್‌ಗಳು ಇದ್ದು, ಅವುಗಳನ್ನು ಅಕಾಡೆಮಿಗೆ ನೀಡಲು ಮುಂದಾಗಿದ್ದಾರೆ. ನಾಟಕ ಅಕಾಡೆಮಿ, ಶೀಘ್ರದಲ್ಲೇ ಹೊಸ ವೆಬ್‌ಸೈಟ್‌ನ್ನು ಸ್ಥಾಪಿಸಲಿದ್ದು, ಇದಕ್ಕೆ ಲಹರಿ ಸಂಸ್ಥೆ ರಂಗಗೀತೆಗಳನ್ನು ಲಿಂಕ್‌ ಮಾಡಲಿದೆ ಎಂದು ನಾಟಕ ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಂಗಪತ್ರಿಕೆಗಾಗಿ ಹುಡುಕಾಟ: ರಂಗಭೂಮಿ ಉಳಿವಿಗೆ ರಂಗಪತ್ರಿಕೆಗಳ ಪಾತ್ರ ಕೂಡ ಹಿರಿದಾಗಿದ್ದು, ಈ ಹಿನ್ನೆಲೆಯಲ್ಲಿ ರಂಗಭೂಮಿಗೆ ಪ್ರಚಾರ ನೀಡುವ ಸಂಬಂಧ ಹುಟ್ಟಿಕೊಂಡಿದ್ದ ರಂಗಪತ್ರಿಕೆಗಳ ಸಂಗ್ರಹಕ್ಕೂ ಹೆಜ್ಜೆ ಇರಿಸಿದೆ. ಈ ಹಿಂದೆ ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಂ, ರಂಗಸಾಧಕ ಪ್ರಸನ್ನ, ನಾಗೇಶ ಸೇರಿ “ಮುಕ್ತ’ ಎಂಬ ರಂಗಪತ್ರಿಕೆಯನ್ನು ಹೊರ ತಂದಿದ್ದರು. ಈ ಪತ್ರಿಕೆಯ ಪ್ರತಿಗಳ ಹುಡುಕಾಟ ಸಾಗಿದೆ. ಅಲ್ಲದೆ ಅಜ್ಜಂಪುರದ ಕೃಷ್ಣಮೂರ್ತಿ ಅವರ ಬಳಿ “ಈ ಮಾಸ ಪತ್ರಿಕೆ’ ಇದ್ದು ಡಿಜಿಟಲ್‌ ಪುಟ ಸೇರಲಿದೆ.

Advertisement

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೊಡಿನಲ್ಲಿರುವ ನಿನಾಸಂನಲ್ಲೂ ರಂಗಭೂಮಿಗೆ ಸಂಬಂಧಿಸಿದ ಹಲವು ದಾಖಲೆಗಳಿವೆ. ಅಲ್ಲದೆ, ಹಲವು ದಿಗ್ಗಜ ರಂಗ ಕಲಾವಿದರ ರಂಗಭೂಮಿ ಪ್ರಯೋಗದ ಸೀಡಿಗಳು ಕೂಡ ಇಲ್ಲಿವೆ. ಇವುಗಳನ್ನು ನೀಡಲು ನಿನಾಸಂ ಮುಂದೆ ಬಂದಿದೆ. ಇದರ ಜತೆಗೆ ಲಂಕೇಶ, ಕುವೆಂಪು, ಕೈಲಾಸಂ, ಶ್ರೀರಂಗ, ಪರ್ವತವಾಣಿ ಸೇರಿ ಹಲವು ಲೇಖಕರ ನಾಟಕಗಳು
ಕೂಡ ಅಕಾಡೆಮಿ ವೆಬ್‌ಸೈಟ್‌ನಲ್ಲಿ ದೊರೆಯಲಿವೆ ಎಂದು ನಾಟಕ ಅಕಾಡೆಮಿಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ
ನೀಡಿದ್ದಾರೆ.

ಯೋಜನೆಗೆ 20 ಲಕ್ಷ ರೂ. ವೆಚ್ಚ
ಹಿರಿಯ ರಂಗಸಾಧಕರ ಸಾಧನೆಗಳಿಗೆ ಬೆಲೆ ಕಟ್ಟಲಾಗದು. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆಗೆ ಸಾಧಕರ ಸಾಧನೆಗಳು ಪ್ರೇರಣೆ ಆಗಲಿ ಎಂಬ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿ ದಾಖಲಾತಿಗಳ ಡಿಜಿಟಲೀಕರಣ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ನಾಟಕ ಅಕಾಡೆಮಿ ಸುಮಾರು 20 ಲಕ್ಷ ರೂ. ವೆಚ್ಚ ಮಾಡಲಿದ್ದು, ದಾಖಲಾತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಅಕಾಡೆಮಿ ಖರೀದಿ ಮಾಡಿದೆ.

ರಂಗಭೂಮಿಗೆ ಸಂಬಂಧಿಸಿದ ಪಳೆಯುಳಿಕೆಗಳು ಅಮೂಲ್ಯವಾಗಿದ್ದು, ಅವುಗಳ ಉಳಿಕೆಗೆ ಅಕಾಡೆಮಿ ಮುಂದಾಗಿದೆ. ಈಗಾಗಲೇ 
ದಾಖಲಾತಿಗಳ ಡಿಜಿಟಲೀಕರಣ ಆರಂಭವಾಗಿದ್ದು, ಯೋಜನೆ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಕಾಯಬೇಕು.

● ಜೆ.ಲೋಕೇಶ್‌, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next