Advertisement

Kaup: ಅಜಾತಶತ್ರು, ರಂಗ ಕಲಾವಿದ ಕೆ. ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

09:29 AM Dec 13, 2023 | Team Udayavani |

ಕಾಪು: ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಪತ್ನಿ ವಸುಂಧರಾ ಶೆಟ್ಟಿ (58) ಸಮೇತರಾಗಿ ಮಂಗಳವಾರ ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ‌ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ‌ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಸಾವಿನ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.

ಎಲ್ಲರ ಆತ್ಮೀಯ ಲೀಲಣ್ಣ:  ಎಲ್.ಐ.ಸಿ. ಏಜಂಟರಾಗಿ, ಕಲಾ ಸಂಘಟಕ, ಕಲಾಪೋಷಕರಾಗಿದ್ದ ಅವರು ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ಚಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ಸೇವೆಗಾಗಿ ಎಲ್ಲರೂ ಅವರನ್ನು ಆತ್ಮೀಯವಾಗಿ ಲೀಲಣ್ಣ ಎಂದೇ ಕರೆಯುತ್ತಿದ್ದರು.

ಸಮಾಜರತ್ನ ಪುರಸ್ಕೃತರು: ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಸಮಾಜದಲ್ಲಿ ನೊಂದವರ ಪಾಲಿಗೆ ಆಶಾಕಿರಣವಾಗಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ, ಸಾಂಸಾರಿಕ ಬಾಂಧವ್ಯ ಜೋಡಣೆಗೆ ನೆರವಾಗಿದ್ದ ಅವರು ಕಾಪು ರಂಗತರಂಗ ನಾಟಕ ತಂಡವನ್ನು ಕಟ್ಟಿ ಕಲೆಯನ್ನು ಪ್ರಸಾರಗೊಳಿಸಲು ಅಪರಿಮಿತವಾಗಿ ಶ್ರಮಿಸಿದ್ದರು.  ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ  ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಭಾಜನರಾಗಿದ್ದರು.

Advertisement

ಚುನಾವಣೆಗೂ ಸ್ಪರ್ಧಿಸಿದ್ದರು : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅತ್ಯಾಪ್ತರಾಗಿದ್ದ ಲೀಲಾಧರ ಶೆಟ್ಟಿ ಕಾಪು‌ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದರು. ಬಹಳಷ್ಟು ಮಂದಿ ರಾಜಕೀಯ ಮತ್ತು ಸಾಮಾಜಿಕ ನಾಯಕರುಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದು ಗ್ರಾ. ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಕಾಪು, ಮಜೂರು, ಉಳಿಯಾರು, ಕರಂದಾಡಿ, ಜಲಂಚಾರು, ಮಲ್ಲಾರು ಪರಿಸರದ ವಿವಿಧ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ಅವರು ಸರ್ವ ಧರ್ಮೀಯರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಲೀಲಾಧರ ಶೆಟ್ಟಿ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ನೂರಾರು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಇಂದು ಸಂಜೆ ಅಂತಿಮ ಸಂಸ್ಕಾರ: ಲೀಲಾಧರ‌ ಶೆಟ್ಟಿ ಅವರ ಅಕಾಲಿಕ ಮರಣ ಕಾಪುವಿನ ಜನತೆಯನ್ನು‌ ಶೋಕಸಾಗರದಲ್ಲಿ ಮುಳುಗಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ನೂರಾರು ಮಂದಿ ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು ಬುಧವಾರ ಸಂಜೆ 4 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next