ಮೈಸೂರು: ದಸರೆ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ನೆಚ್ಚಿನ ತಾಣಗಳಾದ ಮೃಗಾಲಯ ಮತ್ತು ಮೈಸೂರು ಅರಮನೆಗೆ ಲಕ್ಷ ಲಕ್ಷ ಜನರು ಭೇಟಿ ನೀಡಿದ್ದಾರೆ. ಹಾಗೆ ನೋಡಿದರೆ ಕಳೆದ 10 ದಿನಗಳಲ್ಲಿ ಅರಮನೆ ಗಿಂತಲೂ ಮೃಗಾಲಯಕ್ಕೆ ಭೇಟಿ ನೀಡಿ, ಪ್ರಾಣಿ – ಪಕ್ಷಿಗಳನ್ನು ವೀಕ್ಷಿಸಿದವರ ಸಂಖ್ಯೆಯೇ ಹೆಚ್ಚು.
ಈ ವರ್ಷ ದಸರೆ 10 ದಿನಗಳಲ್ಲಿ 1.23 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, 69.17 ಲಕ್ಷ ರೂ. ಸಂಗ್ರಹವಾಗಿದೆ. ಸೆ.30ರಂದು ವಿಜಯದಶಮಿ ದಿನ ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿತ್ತು. ಹೀಗಾಗಿ ಮೃಗಾಲಯಕ್ಕೆ ಒಂದೇ ದಿನ 31,722 ಮಂದಿ ಭೇಟಿ ನೀಡಿದ್ದು, ಪ್ರವೇಶ ದ್ವಾರಗಳ ಟಿಕೆಟ್ ಮಾರಾಟದಿಂದ ಮೃಗಾಲಯಕ್ಕೆ 18.81 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಅರಮನೆ ವೀಕ್ಷಣೆ: ದಸರೆ ಹತ್ತು ದಿನಗಳಲ್ಲಿ ಸೆ.30ರಂದು ವಿಜಯ ದಶಮಿ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅರಮನೆ ವೀಕ್ಷಣೆ ನಿರ್ಬಂಧಿಸಲಾಗಿತ್ತು. ಜತೆಗೆ ರಾಜಮನೆತನದವರ ನವರಾತ್ರಿ ಪೂಜೆ ಹಿನ್ನೆಲೆಯಲ್ಲಿ ಮಧ್ಯೆ ಮಧ್ಯೆ ಅರ್ಧ ದಿನಗಳ ಕಾಲ ಪ್ರವೇಶ ನಿರ್ಬಂಧಿಸಿದ್ದರಿಂದ ಒಟ್ಟಾರೆ. 93583 ಮಂದಿ ಭಾರತೀಯರು ಹಾಗೂ 586 ಮಂದಿ ವಿದೇಶಿಯರು ಸೇರಿದಂತೆ ಕಳೆದ ಹತ್ತು ದಿನಗಳಲ್ಲಿ ಅರಮನೆಗೆ 94169 ಪ್ರವಾಸಿಗರು ಭೇಟಿ ನೀಡಿದ್ದಾರೆ.
ಸೆ.21ರಂದು 7054 ಜನ ಭಾರತೀಯರು, 35 ಜನ ವಿದೇಶಿಯರು, 22ರಂದು 10464 ಜನ ಭಾರತೀಯರು, 52 ಜನ ವಿದೇಶಿಯರು, 23ರಂದು 13613 ಜನ ಭಾರತೀಯರು ಹಾಗೂ 128 ಜನ ವಿದೇಶಿಯರು, 24ರಂದು 15828 ಜನ ಭಾರತೀಯರು, 100 ಜನ ವಿದೇಶಿಯರು, 25ರಂದು 8173 ಮಂದಿ ಭಾರತೀಯರು, 57 ಜನ ವಿದೇಶಿಯರು, 26ರಂದು 9720 ಜನ ಭಾರತೀಯರು, 42 ಜನ ವಿದೇಶಿಯರು, 27ರಂದು 8972 ಭಾರತೀಯರು,
53 ಜನ ವಿದೇಶಿಯರು, 28ರಂದು 9280 ಭಾರತೀಯರು, 64 ಜನ ವಿದೇಶಿಯರು, 29ರಂದು 10479 ಜನ ಭಾರತೀಯರು ಹಾಗೂ 55 ಜನ ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟಾರೆ ದಸರೆ 10 ದಿನಗಳಲ್ಲಿ ಅರಮನೆಗೆ 94169 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಮೈಸೂರು ಅರಮನೆ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದ್ದಾರೆ.
* ಗಿರೀಶ್ ಹುಣಸೂರು