ಬೆಂಗಳೂರು: ಐಸಿಸ್ ಸಂಘಟನೆ ಸೇರಲು ಸಿರಿಯಾಕ್ಕೆ ತೆರಳಿದ್ದ ಬೆಂಗಳೂರಿನ ಮಸೂದ್ ಎಂಬ ಯುವಕ ಭದ್ರತಾ ಪಡೆಗಳ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬ ವಿಚಾರ ಬಯಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಂಧಿತನಾಗಿರುವ ವೈದ್ಯ ಅಬ್ದುರ್ ರೆಹಮಾನ್ ಈ ಬಗ್ಗೆ ಮಾಹಿತಿ ನೀಡಿದ್ದಾನೆ.
ಬೆಂಗಳೂರಿನ ಶ್ರೀಮಂತ ಕುಟುಂಬವೊಂದಕ್ಕೆ ಸೇರಿದ್ದ ಫಯಾಜ್ ಮಸೂದ್ ಏಳು ವರ್ಷಗಳಿಂದ ನಾಪತ್ತೆಯಾಗಿದ್ದ. ಈತನ ಪತ್ನಿ, ಇಬ್ಬರು ಮಕ್ಕಳು ಮತ್ತು ಪೋಷಕರು ಬೆಂಗಳೂರಿನಲ್ಲೇ ಇದ್ದಾರೆ.
ಆದರೆ ಈತ ನಾಪತ್ತೆಯಾಗಿರುವ ಬಗ್ಗೆ ಇವರ್ಯಾರೂ ಇದುವರೆಗೆ ಪೊಲೀಸ್ ದೂರು ನೀಡಿಲ್ಲ ಎಂದು ಎನ್‌ಐಎ ಮೂಲಗಳು ತಿಳಿಸಿವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಭಾರತದಲ್ಲಿ ಐಸಿಸ್ ಚಟುವಟಿಕೆ ಚುರುಕುಗೊಳ್ಳುತ್ತಿರುವ ಸುಳಿವಿನ ಆಧಾರದಲ್ಲಿ ಆ. 17ರಂದು ಬೆಂಗಳೂರಿನಲ್ಲಿ ವೈದ್ಯ ಅಬ್ದುರ್ ರೆಹಮಾನ್‌ನನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈತನ ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಫಯಾಜ್ ಮಸೂದ್ ಬಗ್ಗೆ ಮಾಹಿತಿ ನೀಡಿದ್ದಾನೆ. ಮಸೂದ್ ಐಸಿಸ್‌ಗೆ ಸೇರಲು ಇಚ್ಛಿಸುವ ಯುವಕರಿಗೆ ದಾರಿಯನ್ನೂ ಸೂಚಿಸುತ್ತಿದ್ದ ಎಂದೂ ರೆಹಮಾನ್ ಹೇಳಿದ್ದಾನೆ.
2013ರಲ್ಲಿ ತಾನು ಈತನನ್ನು ಸಿರಿಯಾದ ಗಡಿಯ ಆತ್ಮೆ ನಗರದಲ್ಲಿ ಭೇಟಿಯಾಗಿದ್ದೆ. ಆ ಬಳಿಕ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಮಸೂದ್ ಸತ್ತಿದ್ದ. ಆತನ ಜತೆಗಿದ್ದ ಇನ್ನೊಬ್ಬ ಗಾಯಗೊಂಡಿದ್ದ. ಹೀಗಾಗಿಯೇ ತಾನು ಐಸಿಸ್ ಸೇರುವ ಯೋಜನೆ ಕೈಬಿಟ್ಟು, ಪೋಷಕರಿಂದ ಹಣ ಸಹಾಯ ಪಡೆದು ವಾಪಸ್ ಬಂದೆ ಎಂದು ರೆಹಮಾನ್ NIA ಅಧಿಕಾರಿಗಳಿಗೆ ತಿಳಿಸಿದ್ದಾನೆ.