ನವದೆಹಲಿ: ಭಾರತದ ಭದ್ರತಾ ಪಡೆಗಳ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 31 ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಕುರಿತಾದ ಪ್ರಸ್ತಾಪಕ್ಕೆ ಕಳೆದ ವಾರವಷ್ಟೇ ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ ನೀಡಿತ್ತು.
ಅಮೆರಿಕದ ಜನರಲ್ ಅಟೋಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಕಂಪನಿ ಈ ಡ್ರೋನ್‌ಗಳನ್ನು ಉತ್ಪಾದಿಸಿ ಭಾರತಕ್ಕೆ ನೀಡಲಿದ್ದು, ಒಟ್ಟು 29,400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇವುಗಳನ್ನು ಖರೀದಿಸಲಾಗುತ್ತಿದೆ.
31 ಡ್ರೋನ್‌ಗಳ ಪೈಕಿ ನೌಕಾಪಡೆಗೆ “ಸೀ ಗಾರ್ಡಿಯನ್’ (ಸಮುದ್ರ ಕಾವಲುಗಾರ) ವೈಶಿಷ್ಟತೆಯ 15 ಡ್ರೋನ್‌ಗಳನ್ನು ನೀಡಲಾಗುವುದು ಉಳಿದಂತೆ ಸೇನೆ ಮತ್ತು ವಾಯುಪಡೆಗಳು “ಸ್ಕೈ ಗಾರ್ಡಿಯನ್’ ಆವೃತ್ತಿಯ ತಲಾ 8 ಪ್ರಿಡೇಟರ್ ಡ್ರೋನ್‌ಗಳನ್ನು ಪಡೆಯಲಿವೆ. ಈ ಡ್ರೋನ್‌ಗಳು ಭೂಮಿ, ಕಡಲು, ವಾಯುಪ್ರದೇಶಗಳಿಗೆ ಎದುರಾಗುವ ಭದ್ರತಾ ಬೆದರಿಕೆಗಳನ್ನು ಎದುರಿಸುವುದಲ್ಲದೇ ಸಂಭಾವ್ಯ ಎಲೆಕ್ಟ್ರಾನಿಕ್ ಯುದ್ಧ ಕಾರ್ಯಾಚರಣೆಗಳಿಗೂ ಸಹಾಯವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಡ್ರೋನ್ ವೈಶಿಷ್ಟ್ಯ
* ಎಂಕ್ಯೂ-9 ರೀಪರ್ ಡ್ರೋನ್‌ನ ಹೊಸ ಆವೃತ್ತಿ
* 40,000 ಅಡಿ ಎತ್ತರದಲ್ಲಿ ಸತತ 40 ಗಂಟೆ ಹಾರಾಟ
* 2,155 ಕೆ.ಜಿ. ಪೇಲೋಡ್ ಸಾಮರ್ಥ್ಯ
* 4 ಹೆಲ್‌ಫೈರ್ ಕ್ಷಿಪಣಿ, 450 ಕೆ.ಜಿ. ಬಾಂಬ್ ಹೊರುವ ಸಾಮರ್ಥ್ಯ
* ಸ್ವಯಂಚಾಲಿತ ಟೇಕಾಫ್, ಲ್ಯಾಂಡಿಂಗ್ ಸಾಮರ್ಥ್ಯ