Advertisement

ಮದುವೆ ಆಗುವುದಾಗಿ ಯುವತಿಯ ನಂಬಿಸಿ ಅತ್ಯಾಚಾರ

11:40 AM Sep 27, 2017 | |

ಬೆಂಗಳೂರು: ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದ ಗುತ್ತಿಗೆದಾರನೊಬ್ಬ, ಕಾಫೀ ಡೇವೊಂದರಲ್ಲಿ ಯುವತಿಯೊಬ್ಬಳ ಪರಿಚಯ ಮಾಡಿಕೊಂಡು ಅತ್ಯಾಚಾರ ನಡೆಸಿದ ಆರೋಪ ಪ್ರಕರಣದಲ್ಲಿ ಇದೀಗ  ಜೈಲುಪಾಲಾಗಿದ್ದಾನೆ. ಬಾಣಸವಾಡಿಯ ಕಾಚರಕನಹಳ್ಳಿಯ ಮೂರ್ತಿ (30) ಜೈಲುಸೇರಿದ ವ್ಯಕ್ತಿ. 

Advertisement

ಮಡಿಕೇರಿ ಮೂಲದ ಸೌಜನ್ಯ ಮಾದಪ್ಪ (22) ಎಂಬುವವರು ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಾಫಿಡೇ ಪ್ರೀತಿ-ಪ್ರಣಯ: 2013ರಲ್ಲಿ ದ್ವೀತಿಯ ಪಿಯುಸಿ ದೂರಶಿಕ್ಷಣ ವ್ಯಾಸಂಗ ಮಾಡಲು ಬಾಣಸವಾಡಿಯಲ್ಲಿರುವ ದೊಡ್ಡಮ್ಮನ ಮನೆಗೆ ಸೌಜನ್ಯ ಬಂದಿದ್ದು, ಟ್ಯೂಶನ್‌ಗೆ ಹೋಗುತ್ತಿದ್ದರು. ಈ ವೇಳೆ ಕಾಫಿಡೇ ಒಂದರಲ್ಲಿ ಆರೋಪಿ ಮೂರ್ತಿಯ ಪರಿಚಯವಾಗಿದ್ದು, ಇವರಿಬ್ಬರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿದೆ.

ತನಗೆ ಮದುವೆಯಾಗಿಲ್ಲ ಎಂದು ನಂಬಿಸಿದ್ದ ಆರೋಪಿ, ಯುವತಿಯ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದು ಪ್ರತ್ಯೇಕ ಬಾಡಿಗೆ ಮನೆಯಲ್ಲಿ ಇರಿಸಿದ್ದಾನೆ. ಕ್ರಮೇಣ ಯುವತಿ ಗರ್ಭವತಿಯಾಗಿದ್ದು, ಮದುವೆಯಾಗುವುದನ್ನು ಮುಂದೂಡಿದ್ದ ಆರೋಪಿ ಗರ್ಭಪಾತ ಮಾಡಿಸಿದ್ದಾನೆ. 

ತನ್ನ ನಿಖರವಾದ ವಿಳಾಸ ಹಾಗೂ ಮಾಹಿತಿ ನೀಡದ ಆರೋಪಿ ಪದೇ ಪದೇ ಯುವತಿಯನ್ನು ಬಾಡಿಗೆ ಮನೆಗಳಲ್ಲಿ ಶಿಫ್ಟ್ ಮಾಡಿ ಇರಿಸಿದ್ದಾನೆ. ಇತ್ತೀಚೆಗೆ ಮದುವೆ ವಿಚಾರವಾಗಿ ಇಬ್ಬರಿಗೂ ಜಗಳ ನಡೆದಿದೆ. ಈ ವೇಳೆ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿರುವ ಸಂಗತಿ ಸೌಜನ್ಯಾಳಿಗೆ ಗೊತ್ತಾಗಿದೆ.

Advertisement

ಇದರಿಂದ ನೊಂದ ಯುವತಿ ಆಗಸ್ಟ್‌ 22ರಂದು ಬಾಣಸವಾಡಿ ಠಾಣೆಗೆ ಆರೋಪಿ ವಿರುದ್ಧ ಅತ್ಯಾಚಾರ, ಬಲವಂತದ ಗರ್ಭಪಾತ, ವಂಚನೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬಾಲಕಿ ಮುಂದೆ ಪ್ಯಾಂಟ್‌ ಜಿಪ್‌ ಬಿಚ್ಚಿದವನಿಗೆ ಧರ್ಮದೇಟು
ಬೆಂಗಳೂರು:
ಹದಿನಾಲ್ಕು  ವರ್ಷದ ಬಾಲಕಿ ಎದುರು ಪ್ಯಾಂಟ್‌ ಜಿಪ್‌ ಬಿಚ್ಚಿದವನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಭದ್ರಪ್ಪ ಲೇಔಟ್‌ನಲ್ಲಿ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ಕ್ಯಾಬ್‌ ಚಾಲಕ ಮೊಹಮದ್‌ ಮುಕ್ಸಾರ್‌ (30) ಬಂಧಿತ ಆರೋಪಿ.

ಶಾಲೆಗೆಂದು ಭದ್ರಪ್ಪ ಲೇಔಟ್‌ ಕಡೆ ನಡೆದು ಹೋಗುತ್ತಿದ್ದ ಬಾಲಕಿ ಮುಂದೆ ಕ್ಯಾಬ್‌ ನಿಲ್ಲಿಸಿದ ಮುಕ್ಸಾರ್‌, ಆಲಕೆಯ ಎದುರೇ ಪ್ಯಾಂಟ್‌ನ ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಬಾಲಕಿ ಕಿರುಚಿಕೊಂಡಿದ್ದಾಳೆ.

ಕೂಡಲೇ ಸ್ಥಳೀಯರು ಬಾಲಕಿಯ ನೆರವಿಗೆ ಧಾವಿಸಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೀಟ್‌ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಆರೋಪಿ ವಿರುದ್ಧ ಸ್ವಯಂಪ್ರೇರಿತ ಫೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next