Advertisement

ಮಾರುಕಟ್ಟೆಗೆ ಬಂದ ಹಳದಿ ಕಲ್ಲಂಗಡಿ

07:35 PM Jun 08, 2021 | Team Udayavani |

ಕಲಬುರಗಿ: ಹಳದಿ ಕಲ್ಲಂಗಡಿ ಹಣ್ಣು ಬೆಳೆದು ಗಮನ ಸೆಳೆದಿರುವ ಜಿಲ್ಲೆಯ ಯುವ ರೈತರೊಬ್ಬರು, ಈಗ ಲಾಕ್‌ಡೌನ್‌ ಸಮಯದಲ್ಲಿ ಅವುಗಳ ಮಾರಾಟದಿಂದಲೂ ಸದ್ದು ಮಾಡಿದ್ದಾರೆ. ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಹಳದಿ ಕಲ್ಲಂಗಡಿ ಕಂಡ ಜನರು ಖರೀದಿಗೆ ಮುಗಿಬಿದ್ದಿದ್ದರು. ಹೌದು, ಬೇಸಿಗೆಯಲ್ಲಿ ಅತೀ ಹೆಚ್ಚು ಬೇಡಿಕೆ ಕಲ್ಲಂಗಡಿ ಹಣ್ಣಿಗೆ ಇರುತ್ತದೆ.

Advertisement

ಪ್ರತಿ ಕಡೆಯಲ್ಲೂ ಕಲ್ಲಂಗಡಿ ಮಾರಾಟ ಜೋರಾಗಿಯೇ ನಡೆದಿರುತ್ತದೆ. ಮುಖ್ಯವಾಗಿ ಕಲ್ಲಂಗಡಿ ಎಂದರೆ ಎಲ್ಲರಿಗೂ ನೆನಪಾಗುವುದು ಕೆಂಪು ಬಣ್ಣ. ಆದರೆ, ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಯುವ ರೈತ ಬಸವರಾಜ ಪಾಟೀಲ ಬೆಳೆದಿರುವುದು ಹಳದಿ ಬಣ್ಣದ ಕಲ್ಲಂಗಡಿ. ಇದೇ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ಅತಿ ಹೆಚ್ಚು ಸುದ್ದಿ ಕೂಡ ಆಗಿದ್ದರು. ಹಳದಿ ಕಲ್ಲಂಗಡಿ ನೋಡಲು ಮೇಲ್ನೋಟಕ್ಕೆ ಕೆಂಪು ಕಲ್ಲಂಗಡಿಯಂತೆ ಇದೆ.

ಗಾತ್ರ-ಆಕಾರ ಎಲ್ಲವೂ ಸಾಮಾನ್ಯ ಕಲ್ಲಂಗಡಿಯೇ. ಆದರೆ, ಕತ್ತರಿಸಿ ಒಳಗೆ ನೋಡಿದರೆ ಇಡೀ ಹಣ್ಣು ಹಳದಿ ಬಣ್ಣ. ಇದನ್ನು ಯಲ್ಲೋ ಗೋಲ್ಡ್‌ ಕರೆಯುತ್ತಾರೆ. ನಾನು ಹಲವು ವರ್ಷಗಳಿಂದ ಎಲ್ಲ ರೈತರಂತೆ ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದೆ. ಯುಟ್ಯೂಬ್‌ನಲ್ಲಿ ನೋಡಿ ಜರ್ಮನ್‌ ನಿಂದ ಬೀಜ ತರಿಸಿಕೊಂಡು ಬಿತ್ತನೆ ಮಾಡಿದ್ದೇನೆ.

ಈ ವರ್ಷದ ಆರಂಭದಿಂದ ಎರಡು ಫಸಲು ಬಂದಿದೆ ಎನ್ನುತ್ತಾರೆ ರೈತ ಬಸವರಾಜ ಪಾಟೀಲ. ಮೊದಲು ಪ್ರಾಯೋಗಿಕ ಎಂಬಂತೆ ಎರಡು ಎಕರೆಯಲ್ಲಿ ಹಳದಿ ಕಲ್ಲಂಗಡಿ ಬೆಳೆದಿದ್ದೆ. ಮಾಚ್‌ ìನಲ್ಲಿ 40 ಟನ್‌ ಫಸಲು ಬಂದಿತ್ತು. ಹೊಸ ತಳಿಯಾಗಿದ್ದರಿಂದ ಮತ್ತು ಈ ದೇಶದಲ್ಲಿ ಹಳದಿ ಕಲ್ಲಂಗಡಿ ಅಪರೂಪವಾಗಿದ್ದರಿಂದ ಹೆಚ್ಚು ಬೇಡಿಕೆ ಬಂದಿತ್ತು.

ಸಂಪೂರ್ಣ ರಿಲಯನ್ಸ್‌ ಮಾರ್ಟ್‌ನವರು ಖರೀದಿಸಿದ್ದರು. ಬೆಂಗಳೂರು, ಪುಣೆ, ಮುಂಬೈಗೆ ಪೂರೈಸಲಾಗಿತ್ತು ಎಂದು ಹೇಳಿದರು. ಕೆಂಪು ಮತ್ತು ಹಳದಿ ಕಲ್ಲಂಗಡಿ ಹಣ್ಣಿನಲ್ಲಿ ಕೊಂಚ ಸ್ವಾದ ಬದಲಾಗಿದೆ. ಕೆಂಪು ಕಲ್ಲಂಗಡಿಗಿಂತ ಹೆಚ್ಚು ರುಚಿ ಇದೆ. ಈ ಕಾರಣಕ್ಕಾಗಿ ಬೆಲೆ ಉತ್ತಮವಾಗಿದೆ. ಕಳೆದ ಬಾರಿ ಮದ್ಯವರ್ತಿಗಳ ಮೂಲಕವೇ ಪ್ರತಿ ಟನ್‌ಗೆ 15 ಸಾವಿರ ರೂ.ನಂತೆ ಮಾರಾಟ ಮಾಡಲಾಗಿತ್ತು. ಈಗ ಮೂರು ಎಕರೆಯಲ್ಲಿ ಮತ್ತೆ ಬೆಳೆದಿದ್ದು, 60 ಸಾವಿರ ಹಣ್ಣುಗಳ ಫಸಲು ಬಂದಿದೆ. ಆದರೆ, ಇಷ್ಟರಲ್ಲೇ ಕೊರೊನಾ ಮತ್ತೆ ಹಾವಳಿ ಶುರುವಾಗಿ, ಲಾಕ್‌ಡೌನ್‌ ಜಾರಿಯಾಗಿದೆ.

Advertisement

ಮಾರ್ಟ್‌ಗಳು ಬಂದ್‌ ಆಗಿವೆ. ಹೀಗಾಗಿ ಕಳೆದ ಎರಡು ದಿನಗಳಿಂದ ಜನರ ಬಳಿಗೆ ಮಾರಾಟ ಮಾಡುತ್ತಿದ್ದೇನೆ. ನಿತ್ಯ ಎರಡು ಸಾವಿರದಂತೆ ನಾಲ್ಕು ಸಾವಿರ ಹಣ್ಣುಗಳು ಮಾರಾಟವಾಗಿವೆ ಎಂದು ವಿವರಿಸಿದರು. ಮಾರಾಟ ಬಲು ಜೋರು: ರೈತ ಬಸವರಾಜ ಪಾಟೀಲ ಬೆಳೆದಿರುವ ಹಳದಿ ಕಲ್ಲಂಗಡಿ ಹಣ್ಣುಗಳು ದೇಶದ ಗಮನ ಸೆಳೆದಿದ್ದರೂ, ಜಿಲ್ಲೆಯ ಮಾರುಕಟ್ಟೆಗೆ ಪ್ರವೇಶ ಪಡೆದಿರಲಿಲ್ಲ. ರವಿವಾರದಿಂದ ಖುದ್ದು ರೈತನೇ ಜನರ ಬಳಿಗೆ ಹಣ್ಣು ತಂದಿದ್ದರಿಂದ ಮಾರಾಟ ಕೂಡ ಜೋರಾಗಿತ್ತು. ಸೋಮವಾರ ಬೆಳಗ್ಗೆ ಇಲ್ಲಿನ ಜಿಲ್ಲಾ ಕೋರ್ಟ್‌ ಸಮೀಪ ರೈತನ ಹಣ್ಣಿನ ವಾಹನದ ಸುತ್ತಲೂ ಜಮಾವಣೆಗೊಂಡಿದ್ದರು. ಕಲ್ಲಂಗಡಿಯಲ್ಲಿ ಕೆಂಪು ಬದಲು ಹಳದಿ ಕಂಡು ಆಶ್ಚರ್ಯ ಸಹ ಪಟ್ಟರು. ಹಲವು ಗ್ರಾಹಕರು ಅಲ್ಲೇ ಹಣ್ಣಿನ ರುಚಿ ನೋಡಿ ಮುಗಿಬಿದ್ದು ಹಣ್ಣು ಖರೀದಿ ಮಾಡಿದ್ದರು.

ಒಂದು ಹಣ್ಣಿಗೆ 50 ರೂ. ಬೆಲೆ ಇದ್ದರೂ, ಒಬ್ಬೊಬ್ಬರು ಕನಿಷ್ಟ ಎರಡು ಹಣ್ಣುಗಳನ್ನು ತೆಗೆದುಕೊಂಡರು. ಕೆಲವರು ಐದಾರು ಹಣ್ಣುಗಳನ್ನು ಒಟ್ಟಿಗೆ ಖರೀದಿ ಮಾಡಿ, ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಹಣ್ಣು ಹಳದಿಯಾದರೂ ಕಪ್ಪು ಬಣ್ಣದ ಬೀಜಗಳೇ ಇವೆ. ಆದರೆ, ಕೆಂಪು ಕಲ್ಲಂಗಡಿಯಲ್ಲಿರುವಷ್ಟು ಬೀಜಗಳು ಇಲ್ಲ. ಆದರೆ, ಹಣ್ಣಿನ ರುಚಿಗೆ ಯಾವ ಅಡ್ಡಿ ಎಲ್ಲ ಎಂದು ಗ್ರಾಹಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next