Advertisement
40 ವರ್ಷಗಳ ಹಿಂದೆ ಸುಳ್ಯ- ಕೊಡಗು ಗಡಿಭಾಗದ ಸಂಪಾಜೆ ಪರಿಸರದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗವು ನೂರಾರು ಎಕ್ರೆ ಅಡಿಕೆ ತೋಟವನ್ನು ಆಹುತಿ ಪಡೆದುಕೊಂಡಿತ್ತು.ಸುಳ್ಯ ತಾಲೂಕನ್ನು ಅತೀ ಹೆಚ್ಚಾಗಿ ಬಾಧಿಸಿದ್ದ ಸಮಸ್ಯೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೂ ವ್ಯಾಪಿಸಿದೆ. ಈ ರೋಗಕ್ಕೆ ಸೂಕ್ತ ಔಷಧ ಇಲ್ಲದ ಕಾರಣ ಅಡಿಕೆ ಕೃಷಿಯೇ ಆತಂಕದಲ್ಲಿದೆ.
Related Articles
Advertisement
ಡ್ರೋನ್ ಬಳಕೆ?
ಸರ್ವೇಗಾಗಿ ಡ್ರೋನ್ ಬಳಸಲು ಚಿಂತನೆ ನಡೆದಿದ್ದರೂ ಅದಿನ್ನೂ ಅಂತಿಮ ವಾಗಿಲ್ಲ. ತೋಟಗಾರಿಕೆ ಇಲಾಖೆ, ಸಿಪಿಸಿಆರ್ಐ ಈ ಬಗ್ಗೆ ಚಿಂತನೆ ನಡೆಸಿದ್ದು, ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಡ್ರೋನ್ ಸಂಗ್ರಹಿಸುವ ಚಿತ್ರದ ಮೂಲಕ ಎಲೆ ಹಳದಿ ರೋಗಪೀಡಿತ ಅಡಿಕೆ ತೋಟವನ್ನು ಗುರುತಿಸುವುದು ಇದರ ಉದ್ದೇಶ. ಆದರೆ ಅದಿನ್ನೂ ಅಂತಿಮ ಸ್ವರೂಪ ಪಡೆದಿಲ್ಲ ಎನ್ನುತ್ತಾರೆ ಸಂಶೋಧನನಿರತ ವಿಜ್ಞಾನಿಗಳು.
ಸಿದ್ಧವಾಗದ ಪ್ರಯೋಗಾಲಯ
ಎಲೆ ಹಳದಿ ರೋಗಪೀಡಿತವಾಗಿರುವುದನ್ನು ದೃಢಪಡಿಸಲು ಈ ಭಾಗದಲ್ಲಿ ಪ್ರಯೋಗಾಲಯ ಇಲ್ಲ. ರೋಗ ಲಕ್ಷಣ ಕಾಣಿಸಿಕೊಂಡ ಅಡಿಕೆ ಮರದ ಭಾಗವನ್ನು ಸಂಗ್ರಹಿಸಿ ತಮಿಳುನಾಡಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿ ಬರುವ ತನಕ ಕಾಯಬೇಕು. ಹೀಗಾಗಿ ಯಡಿಯೂರಪ್ಪ ಸರಕಾರ ಬಿಡುಗಡೆಗೊಳಿಸಿದ 25 ಕೋ.ರೂ. ಅನುದಾನದಲ್ಲಿ 50 ಲಕ್ಷ ರೂ.ಗಳಲ್ಲಿ ವಿಟ್ಲ ಸಿಪಿಸಿಆರ್ಐ ಕೇಂದ್ರದಲ್ಲಿ ಎಲೆ ಹಳದಿ ರೋಗ ಪರೀಕ್ಷೆಯ ಪ್ರಯೋಗಾಲಯ ತೆರೆಯಲಾಗಿದೆ. ಅದಕ್ಕೆ ಬೇಕಾದ ಉಪಕರಣಗಳನ್ನು ತರಿಸಲಾಗಿದ್ದರೂ ಅದಿನ್ನೂ ಕೃಷಿಕರ ಸೇವೆಗೆ ತೆರೆದುಕೊಂಡಿಲ್ಲ. ಪರೀಕ್ಷೆಗೆ ತಗಲುವ ವೆಚ್ಚ ದುಬಾರಿಯಾಗಿರುವುದೇ ಇದಕ್ಕೆ ಕಾರಣ. ಇದನ್ನು ಬೆಳೆಗಾರ ಭರಿಸುವುದು ಕಷ್ಟ. ಹೀಗಾಗಿ 3 ವರ್ಷ ಶುಲ್ಕವನ್ನು ಸರಕಾರವೇ ಭರಿಸಬೇಕು ಎಂದು ಸಿಪಿಸಿಆರ್ಐ ಸರಕಾರಕ್ಕೆ ಮನವಿ ಸಲ್ಲಿಸಿದೆ.
4 ವರ್ಷ ಹಿಂದೆ ನಡೆದ ಸಮೀಕ್ಷೆ2020ರಲ್ಲಿ ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ತಂಡ ರಚಿಸಲಾಯಿತು. 13,993 ಸರ್ವೆ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಒಟ್ಟು 7,048 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಇದ್ದು, ಒಟ್ಟು 1,217 ಹೆಕ್ಟೇರ್ ಅಡಿಕೆ ತೋಟ ರೋಗ ಪೀಡಿತ ಎಂದು ಪರಿಗಣಿಸಲಾಗಿತ್ತು. ಸರಿಸುಮಾರು 14,29,440 ಮರಗಳು ರೋಗಬಾಧಿತ ಎಂದು ಹೇಳಲಾಗಿತ್ತು. ಕಂದಾಯ, ಪಂ.ರಾಜ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒಳ ಗೊಂಡ ತಂಡ ಪ್ರತೀ 700 ಸರ್ವೆ ನಂಬರ್ ವ್ಯಾಪ್ತಿಗೆ ಒಬ್ಬರಂತೆ ಸಮೀಕ್ಷೆ ನಡೆಸಿ, ನಿಗದಿತ ನಮೂನೆಯಲ್ಲಿ ವರದಿ ಸಂಗ್ರಹಿಸಿ, ತಾಲೂಕು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಿ, ಅಲ್ಲಿಂದ ಸರಕಾರಕ್ಕೆ ಕಳುಹಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಸರ್ವೇ ನಡೆಸಿ ಅಡಿಕೆ ಎಲೆ ಹಳದಿ ರೋಗ ಬಾಧಿತ ತೋಟಗಳನ್ನು ಪಟ್ಟಿ ಮಾಡಲಾಗಿದೆ. ಅನಂತರ ಸರ್ವೇ ನಡೆದಿಲ್ಲ. ಪ್ರತಿಯೊಂದು ತೋಟಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲು ದೀರ್ಘ ಸಮಯ ಬೇಕಿರುವುದರಿಂದ ಡ್ರೋನ್ ಮೂಲಕ ಈ ಕಾರ್ಯ ನಡೆಸುವ ಚಿಂತನೆ ಇದೆ. ಅದಿನ್ನೂ ಕಾರ್ಯಗತಗೊಳ್ಳಬೇಕಷ್ಟೆ.
– ಮಂಜುನಾಥ ಡಿ., ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ದ.ಕ.
*ಕಿರಣ್ ಪ್ರಸಾದ್ ಕುಂಡಡ್ಕ