Advertisement

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

11:41 PM Oct 05, 2024 | Team Udayavani |

ಮಂಗಳೂರು: ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರಿಗೆ ಈಗ ಹೊಸ ರೋಗದ ಭೀತಿ ಮೂಡಿದೆ. ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ ಬರುತ್ತಿತ್ತು. ಇದೇ ಮೊದಲ ಬಾರಿ ವೈರಸ್‌ ಬಾಧಿಸಿದೆ. ಇದನ್ನು ತೋಟಗಾರಿಕೆ ವಿಜ್ಞಾನಿಗಳು “ರಿಂಗ್‌ ಸ್ಪಾಟ್‌ ಡಿಸೀಸ್‌’ ಎಂದು ಗುರುತಿಸಿದ್ದಾರೆ. 2023ರಲ್ಲೇ ಈ ರೋಗ ಲಕ್ಷಣ ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಕಾಣಿಸಿಕೊಂಡಿತ್ತು.

Advertisement

ಎಲೆ ಚುಕ್ಕಿ ರೋಗವೆಂದೇ ಕೃಷಿಕರೂ ಭಾವಿಸಿದ್ದರು. ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿದ ಸಿಪಿಸಿಆರ್‌ಐ ವಿಜ್ಞಾನಿಗಳು ಇದು ಅರೆಪಾ ವೈರಸ್‌ ವರ್ಗಕ್ಕೆ ಸೇರಿದ ಹೊಸ ನೆಕ್ರೋಟಿಕ್‌ ರಿಂಗ್‌ ಸ್ಪಾಟ್‌ ವೈರಸ್‌ 2 (ಎಎನ್‌ಆರ್‌ಎಸ್‌ವಿ2) ಎಂದು ಖಚಿತಪಡಿಸಿದ್ದಾರೆ.

ಚೀನದಲ್ಲಿ ಮೊದಲು ಗೋಚರ!
ಮನುಕುಲವನ್ನು ಕಂಗೆಡಿಸಿದ ಕೋವಿಡ್‌ ಕಾಣಿಸಿಕೊಂಡಿದ್ದ ಚೀನದಲ್ಲೇ ಅಡಿಕೆಗೆ ತಗಲಿರುವ ವೈರಸ್‌ ಕೂಡ 2018ರಲ್ಲಿ ಮೊದಲು ಕಾಣಿಸಿಕೊಂಡಿತ್ತು. ಅಲ್ಲಿನ ವಿಜ್ಞಾನಿಗಳು ವಿವರಿಸುವಂತಹ ಲಕ್ಷಣಗಳು ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ತೋಟಗಳಲ್ಲೂ ಕಾಣಿಸಿಕೊಂಡಿರುವುದಾಗಿ ಸಿಪಿಸಿಆರ್‌ಐ ತಜ್ಞರು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕುಂಡಡ್ಕ, ನೇರಳಕಟ್ಟೆಯಿಂದ ಇದಕ್ಕೆ ಪೂರಕವಾದ ಮಾದರಿ ಸಂಗ್ರಹಿಸಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಎನ್‌ಆರ್‌ಎಸ್‌ವಿ 2 ಎಂದು ಖಚಿತಪಡಿಸಲಾಗಿದೆ. ಶಿರಸಿ, ಶಿವಮೊಗ್ಗ, ಮೈಸೂರಿನ ಕೆಲವು ತೋಟಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಿಪಿಸಿಆರ್‌ಐ ವಿಜ್ಞಾನಿ ಡಾ| ವಿನಾಯಕ ಹೆಗ್ಡೆ ತಿಳಿಸಿದ್ದಾರೆ.

ಎಚ್ಚರಿಕೆ ಬೇಕು: ಇದೊಂದು ಹೊಸ ಗಿಡವನ್ನು ಬಾಧಿಸುವ ವೈರಸ್‌ ಆಗಿದ್ದು, ಅದರ ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ವೈರಸ್‌ ತಗಲುವುದು ಎಂದರೆ ಗಿಡಕ್ಕೆ ಕ್ಯಾನ್ಸರ್‌ ಬಾಧಿಸಿದಂತೆಯೇ. ರೋಗಗ್ರಸ್ತ ಮರಗಳ ನಿರ್ಮೂಲನೆ ಮತ್ತು ರೋಗವಾಹಕ ಕೀಟಗಳ ನಿಯಂತ್ರಣವಷ್ಟೇ ಸದ್ಯಕ್ಕಿರುವ ಪರಿಹಾರ ಕ್ರಮ. ಹೆಚ್ಚಿನ ಸಂಶೋಧನೆ ಆಗಬೇಕಿದೆ ಎನ್ನುತ್ತಾರೆ ಡಾ| ವಿನಾಯಕ ಹೆಗ್ಡೆ.

Advertisement

ಲಕ್ಷಣಗಳೇನು?
ಹಸುರು ಸೋಗೆಗಳಲ್ಲಿ ಮಚ್ಚೆ ರೀತಿಯಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ವೈರಸ್‌ಗಳು ಹರಿತ್ತನ್ನು ತಿನ್ನುತ್ತಾ ಹೋಗುತ್ತವೆ. ಸೋಗೆ ಸೊರಗುತ್ತಾ ಹೋಗಿ ಮರ ಸಾಯುವ ಪರಿಸ್ಥಿತಿ ಎದುರಾಗಬಹುದು.

ಕೀಟ ಯಾವುದು?
ರೋಗ ತೋಟದಿಂದ ತೋಟಕ್ಕೆ ರೋಗ ಹರಡುತ್ತದೆ. ವೈರಸ್‌ ಹರಡಬೇಕಾದರೆ ವಾಹಕವಾಗಿ ಯಾವುದಾದರೂ ಕೀಟ ಬೇಕಾಗುತ್ತದೆ. ರಿಂಗ್‌ಸ್ಪಾಟ್‌ ವೈರಸ್‌ ಹರಡುವ ಕೀಟ ಯಾವುದು ಎನ್ನುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಮೀಲಿ ಬಗ್‌ ಎನ್ನುವ ಬಿಳಿ ಕೀಟವಿರಬಹುದು ಎನ್ನುವ ಸಂಶಯವಷ್ಟೇ ಇದೆ.

ರಿಂಗ್‌ ಸ್ಪಾಟ್‌ ರೋಗ ಹಲವು ಕಡೆ ವರದಿಯಾಗಿದೆ. ಕಳೆದ ವರ್ಷವೇ ನಿಗಾ ಇರಿಸಿದ್ದೆವು. ಈಗ ಅದು ವೈರಸ್‌ ಬಾಧಿತ ರೋಗ ಎನ್ನುವುದು ದೃಢಪಟ್ಟಿದೆ. ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ ಸ್ಥಳೀಯ ತೋಟಗಾರಿಕೆ ಇಲಾಖೆ ಅಥವಾ ಸಿಪಿಸಿಆರ್‌ಐ ಗಮನಕ್ಕೆ ತರಬಹುದು.
– ಡಾ| ಬಾಲಚಂದ್ರ ಹೆಬ್ಟಾರ್‌, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು

*ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next