Advertisement

ಚಿಟ್ಟಾಣಿ ಇಲ್ಲದೆ ಕಳೆಯಿತು ವರ್ಷ

05:14 PM Sep 15, 2018 | |

ಹೊನ್ನಾವರ: ಆರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನದ ರಂಗಸ್ಥಳದಲ್ಲಿ ಸಾವಿರಾರು ರಾತ್ರಿ ಹರ್ಷದ ಹೊನಲು ಹರಿಸಿದ್ದ ಕಲಾಚಿಲುಮೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಇಹಲೋಕ ತ್ಯಜಿಸಿ ಸೆ. 22ಕ್ಕೆ ವರ್ಷವೇ ತುಂಬುತ್ತಿದೆ. ಚಿಟ್ಟಾಣಿ ಹೆಸರಿನಲ್ಲಿ ಚಿಟ್ಟಾಣಿ ಟ್ರಸ್ಟ್‌ ನೋಂದಾಯಿಸಿಕೊಂಡು ಅವರ ಧರ್ಮಪತ್ನಿ ಸುಶೀಲಾ ಅವರು ಮಕ್ಕಳೊಂದಿಗೆ ಚಿಟ್ಟಾಣಿ ಹೆಸರನ್ನು ಶಾಶ್ವತಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

Advertisement

ಕಲಾಪ್ರೇಮಿಗಳ ಮನಸ್ಸನ್ನು ಗಾಢವಾಗಿ ತುಂಬಿಕೊಂಡಿದ್ದ ಚಿಟ್ಟಾಣಿ ಅವರ ನಿಧನದ ಸುದ್ದಿ ತಿಳಿದು ಮರುಗದವರಿಲ್ಲ. ಅವರ ಕಲಾಪ್ರೌಢಿಮೆಯನ್ನು ತಮ್ಮ ಅನುಭವದಂತೆ ಕಂಡಕಂಡವರಲ್ಲಿ ವರ್ಣಿಸುತ್ತಾ, ಮನಸ್ಸನ್ನು ಸಾಂತ್ವನಪಡಿಸಿಕೊಳ್ಳುತ್ತಾ, ಸಂಭ್ರಮಿಸುತ್ತಾ ಲಕ್ಷಾಂತರ ಜನ ಚಿಟ್ಟಾಣಿ ಚಿಟ್ಟಾಣಿ ಎನ್ನುತ್ತಲೇ ಇದ್ದರು. ಇಂಥವರು ಕರಾವಳಿ ಕನ್ನಡದಲ್ಲಿ ಮಾತ್ರವಲ್ಲ, ಯಕ್ಷಗಾನದ ಗಾಳಿ ಇದ್ದಲ್ಲೆಲ್ಲ ಕಾಣಸಿಗುತ್ತಿದ್ದರು. 

ನಾಡಿನ ಎಲ್ಲ ಪತ್ರಿಕೆಗಳು ಎರಡು ಪುಟ ಸಚಿತ್ರ ವರದಿ ಮಾಡಿದವು. ವಾರದ ಪುರವಣಿಯಲ್ಲಿ ಲೇಖನಗಳು ಬಂದವು. ಉಡುಪಿಯಿಂದ ಚಿಟ್ಟಾಣಿ ಊರಿನವರೆಗಿನ ಶವಯಾತ್ರೆಯಲ್ಲಿ ಹಾದಿಯುದ್ದಕ್ಕೂ ಜನ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ವತಿಯಿಂದ ಪೊಲೀಸರು ಅಂತಿಮ ಗೌರವ ಸಲ್ಲಿಸಿದರು. ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು.

ಚಿಟ್ಟಾಣಿ ನಿಧನಾನಂತರ ಅವರ ಕುರಿತು ಬಂದ ಲೇಖನ, ಪತ್ರಿಕಾ ವರದಿಗಳು ಮತ್ತು ಅವರ ಜೀವಿತಕಾಲದ ವಿಶೇಷ ಲೇಖನಗಳ ಎರಡು ಪುಸ್ತಕಗಳನ್ನು ಮೈಸೂರಿನ ಪ್ರಕಾಶಕರು ಪ್ರಕಟಿಸಿದರು. ವಾಟ್ಸ ಆ್ಯಪ್‌, ಫೇಸ್‌ಬುಕ್‌ ಗಳಲ್ಲಿ ಚಿಟ್ಟಾಣಿ ಅವರ ಅಸಂಖ್ಯ ಕಾರ್ಯಕ್ರಮಗಳ ದೃಶ್ಯ ಈಗಲೂ ಕಾಣಿಸಿಕೊಳ್ಳುತ್ತಿವೆ. ಹೆಸರಾಂತ ಛಾಯಾಗ್ರಾಹಕ ಷಣ್ಮುಖ ಚಿಟ್ಟಾಣಿ ಅವರ ಸಾವಿರಾರು ಚಿತ್ರಗಳನ್ನು ಪ್ರದರ್ಶಿಸಿದರು. 60ಕ್ಕೂ ಹೆಚ್ಚು ಸಿಡಿ, ಡಿವಿಡಿಗಳನ್ನು ಮಂಕಿಯ ನಾಯಕ ಸಹೋದರರು ಬಿಡುಗಡೆ ಮಾಡಿದ್ದಾರೆ.

ಚಿಟ್ಟಾಣಿ ಅವರಿಗೆ ಸಣ್ಣ ಗ್ರಾಮಮಟ್ಟದಿಂದ ಹಿಡಿದು ಭಾರತ ಸರ್ಕಾರದ ಪದ್ಮಶ್ರೀ ವರೆಗಿನ ಅಸಂಖ್ಯ ಗೌರವಗಳು, ಸನ್ಮಾನಗಳು ಸಂದಿವೆ. ಅವರ ವೇಷಭೂಷಣ, ಯಕ್ಷಗಾನದ ಸಿಡಿ ಗಳು, ಪ್ರಶಸ್ತಿ ಪುರ ಸ್ಕಾರಗಳು, ಭಾವ ಚಿತ್ರಗಳು ಶಾಶ್ವತವಾಗಿ ಜನರಿಗೆ ಸಿಗಬೇಕು. ಅವರ ಯಕ್ಷಗಾನ ನಿತ್ಯವೂ ಸಭಾಗೃಹದಲ್ಲಿ ಪ್ರದರ್ಶಿತವಾಗುತ್ತಿರಬೇಕು. ಯಕ್ಷಗಾನ ಕಲಿಯುವವರಿಗೆ ತಮ್ಮ ಕುಟುಂಬ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವುದು ಚಿಟ್ಟಾಣಿ ಬಯಕೆಯಾಗಿತ್ತು. ಅದಕ್ಕಾಗಿ ರಾಘವೇಶ್ವರ ಶ್ರೀಗಳು ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಹಣಕಾಸು ಸಂಗ್ರಹ ವಿಳಂಬವಾದ ಕಾರಣ ದೊಡ್ಡ ಯೋಜನೆ ಬೇಡ, ಮನೆಯ ಅಂಗಳದಲ್ಲೇ ಒಂದು ಸೌಧ ಆಗಲಿ ಎಂದು ಚಿಟ್ಟಾಣಿ ಜೀವಿತಕಾಲದಲ್ಲಿ ಕೆಲಸ ಆರಂಭವಾಗಿತ್ತು. ಕಟ್ಟಡ ಮೇಲೇಳುತ್ತಿದ್ದಂತೆ ಅವರು ಇಹಲೋಕ ತ್ಯಜಿಸಿದ್ದರು. ಆ ಕಟ್ಟಡವನ್ನು ವರ್ಷಾಂತಿಕದೊಳಗೆ ಮುಗಿಸಿ ಚಿಟ್ಟಾಣಿ ಅವರ ಚೈತನ್ಯವನ್ನು ಸೌಧದಲ್ಲಿ ತುಂಬಿಡಲು ಶ್ರೀಮತಿ ಸುಶೀಲಾ ಚಿಟ್ಟಾಣಿ ಬಯಸಿದ್ದರು. ಚಿಟ್ಟಾಣಿ ಅವರ ಹೆಸರಿನ ಯಕ್ಷಗಾನ ಕಲಾಶಾಲೆಯನ್ನು ನರಸಿಂಹ ಚಿಟ್ಟಾಣಿ ಮನೆ ಜಗುಲಿ ಮೇಲೆಯೇ ಆರಂಭಿಸಿದ್ದಾರೆ.

Advertisement

ಬರಿಗೈಯಿಂದ ಲೋಕಕ್ಕೆ ಬಂದು, ಕಷ್ಟನಷ್ಟ ನೋವುಗಳನ್ನೆಲ್ಲಾ ನುಂಗುತ್ತಾ ಮರೆಯಲು ಆರೋಗ್ಯ ಕೆಡಿಸಿಕೊಳ್ಳುತ್ತ, ನಂಬಿದ ಪ್ರೇಕ್ಷಕನಿಗೆ ಎಂದಿಗೂ ಮೋಸಮಾಡದ ಚಿಟ್ಟಾಣಿ ಹಲವರ ಪ್ರಭಾವದಿಂದ ಬೆಳೆದು ತಾವೇ ಯಕ್ಷಗಾನಕ್ಕೆ ಪ್ರಭಾವಳಿ ಆದವರು. ಕಲೆಯನ್ನು ತಮ್ಮ ಪ್ರತಿಭೆಯಿಂದ ಉನ್ನತ ಸ್ಥಾನಕ್ಕೆ ಕೊಂಡೊಯ್ದವರು. ಇಂದು ಚಿಟ್ಟಾಣಿಯವರ ಪ್ರಭಾವದಿಂದ ಅದೆಷ್ಟೋ ಕಲಾವಿದರು ಬೆಳೆದಿದ್ದಾರೆ. ಚಿಟ್ಟಾಣಿ ಎಂಬ ಹೆಸರೇ ಕೆಲವರಲ್ಲಿ ಚೈತನ್ಯ ಮೂಡಿಸುತ್ತದೆ. ವರ್ಷಾಂತಿಕ ಬಂದಿದೆ, ಸೌಧ ಮುಗಿಯುತ್ತಾ ಬಂದಿದೆ. ಆದರೆ ಉದ್ಘಾಟನೆ ಮುಂದೆ ಹೋಗಿದೆ. ಚಿಟ್ಟಾಣಿಯ ಕನಸು ಮನಸ್ಸಿನಲ್ಲಿಯೂ ಎಣಿಸದ್ದು, ಉದ್ಘಾಟನೆ ಮುಂದೆ ಹೋಗಿದೆ. ಕಾಲ ಎಲ್ಲದಕ್ಕೂ ಉತ್ತರ ಹೇಳಲಿದೆ. ಮತ್ತೂಮ್ಮೆ ಚಿಟ್ಟಾಣಿ ಅಭಿಮಾನಿಗಳು ಸೇರಲು ಸುಶೀಲಕ್ಕ ಸೆ. 23ರಂದು ಕರೆದಿದ್ದಾರೆ. ಚಿಟ್ಟಾಣಿಗಾಗಿ ಮನುಷ್ಯ ಸಹಜ ದೌರ್ಬಲ್ಯ ಮರೆತು ಅವರ ಕಲಾಪರಂಪರೆ ಉಳಿಸುವುದು ಸಮಾಜದ ಜವಾಬ್ಧಾರಿ.

„ಜಿ.ಯು. ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next