ಬೆಂಗಳೂರು: ದೇಶದ ರಾಜಕೀಯ ವ್ಯವಸ್ಥೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಹಳ್ಳಿಹಕ್ಕಿ ಪ್ರಕಾಶನ ಹೊರತಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಅವರ “ಅಥೆನ್ಸ್ ರಾಜ್ಯಾಡಳಿತ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆ ಇದಕ್ಕೆ ವ್ಯತಿರಿಕ್ತವಾಗಿದೆ. ಸುಧಾರಿಸಲು ಸಾಧ್ಯವಾಗದಷ್ಟು ಹದಗೆಟ್ಟು ಹೋಗಿದೆ ಎಂದು ಹೇಳಿದರು.
ಭಾರತೀಯ ರಾಜಕೀಯ ವ್ಯವಸ್ಥೆ ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತವಾಗಿತ್ತು. ಚುನಾವಣಾ ಸಂದರ್ಭದಲ್ಲಿ ಮತದಾರರು ತಮ್ಮ ಬೆಂಬಲಿಗರ ಗೆಲುವಿಗಾಗಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮತಗಟ್ಟೆಗೆ ಹೋಗುತ್ತಿದ್ದರು. ಇಷ್ಟು ಮಾತ್ರವಲ್ಲದೇ ಗಾಂಧೀಜಿ, ಜವಾಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಮೊದಲಾದ ಅಗ್ರಗಣ್ಯ ನಾಯಕರ ಭಾವಚಿತ್ರಗಳನ್ನು ಹಿಡಿದುಕೊಂಡೇ ಮತಗಟ್ಟೆಗೆ ಹೋಗುತ್ತಿದ್ದರು. ಇದನ್ನೆಲ್ಲ ನಾನೇ ಕಣ್ಣಾರೇ ನೋಡಿದ್ದೇನೆ ಎಂದು ಸ್ಮರಿಸಿದರು.
ವಿಶ್ವದಲ್ಲಿಯೇ ಮೊದಲ ಪ್ರಜಾಪ್ರಭುತ್ವ ಆಡಳಿತ ನೀಡಿದ ಗ್ರೀಸ್‌ನ ಅಥೆನ್ಸ್ ನಗರ ದೇವಲೋಕದಂತಿದೆ. 1973ರಲ್ಲಿ ಅಥೆನ್ಸ್‌ಗೆ ಭೇಟಿಕೊಟ್ಟಿದ್ದ ನೆನಪು ಇಂದಿಗೂ ಹಾಗೇ ಉಳಿದಿದೆ. ಅಲ್ಲಿನ ಜನರ ಪ್ರಾಮಾಣಿಕತೆ, ಸಂಸ್ಕೃತಿ, ನಡವಳಿಕೆ ಎಲ್ಲವೂ ಅನುಕರಣೀಯ. 1947ರ ವೇಳೆಯಲ್ಲಿ ಭಾರತವೂ ಅದೇ ಮಾದರಿಯಲ್ಲಿತ್ತು. ಇಲ್ಲಿನ ಜನರು ವಿಶ್ವಕ್ಕೇ ಮಾದರಿಯಾಗಿದ್ದರು. ಆದರೀಗ ಅದು ಕಡಿಮೆಯಾಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಲೇಖಕ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ಅಥೆನ್ಸ್‌ನಲ್ಲಿ 2,500 ವರ್ಷ ಹಿಂದೆಯೇ ಪ್ರಜಾಪ್ರಭುತ್ವದ ಪರಿಕಲ್ಪನೆಯ ಆಡಳಿತ ನಡೆಸುತ್ತಿದ್ದರು. ಅಥೆನ್ಸ್‌ನ ರಾಜ್ಯಾಡಳಿತ ಪುಸ್ತಕವನ್ನು ಗ್ರೀಸ್ ದೇಶದ ಸಂಸತ್ತಿನಲ್ಲಿಡಲು ಅಲ್ಲಿನ ಆಡಳಿತ ನಿರ್ಧರಿಸಿದೆ. ಈ ಹಿಂದೆ ಬರೆದಿದ್ದ ಲಂಡನ್‌ನ ಸಂಸದೀಯ ವ್ಯವಸ್ಥೆ ಕುರಿತು ನಾನು ಬರೆದ “ದಿ ಟಾಕಿಂಗ್ ಶಾಪ್’ ಕನ್ನಡ ಪುಸ್ತಕ ಲಂಡನ್‌ನ ವೆಸ್ಟ್ ಮಿನಿಸ್ಟರ್ ಗ್ರಂಥಾಲಯದಲ್ಲಿದೆ ಎಂದು ನೆನಪಿಸಿಕೊಂಡರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಹಿರಿಯ ಪತಕರ್ತ ಬಿ.ಎಂ.ಹನೀಫ್ ಉಪಸ್ಥಿತರಿದ್ದರು.
ರಾಜಕಾರಣಿಗಳು ಅನುಭವದ ಆಧಾರದಲ್ಲಿ ಬರೆಯುವ ಕೃತಿಗಳನ್ನು ಸಾಹಿತ್ಯ ಪರಿಷತ್ತುಗಳು ಒಪ್ಪಿಕೊಳ್ಳುವುದಿಲ್ಲ. ಸಾಹಿತಿಗಳು ಬರೆದಿದ್ದು ಮಾತ್ರ ಸಾಹಿತ್ಯ ಎಂಬ ಮನಸ್ಥಿತಿ ಅವರಲ್ಲಿದೆ. ರಾಜಕಾರಣಿಗಳಲ್ಲೂ ಉತ್ತಮ ಬರಹಗಾರರಿದ್ದಾರೆ. ಅದನ್ನು ಗುರುತಿಸುವ ಕೆಲಸ ಸಾಹಿತ್ಯ ಪರಿಷತ್ತು ಮಾಡಬೇಕು.
– ಎಚ್.ವಿಶ್ವನಾಥ್