Advertisement

ಸಿಎಂ ತುಘಲಕ್‌ ದರ್ಬಾರ್‌ಗೆ ಹದಗೆಟ್ಟ ಕಾನೂನು ಸುವ್ಯವಸ್ಥೆ

12:55 PM Jan 24, 2018 | |

ಮೈಸೂರು: ತುಘಲಕ್‌ ದರ್ಬಾರ್‌ ನಡೆಸುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್‌ ಒನ್‌ ಸ್ಥಾನಗಳಿಸಿದ್ದು, ಕಾನೂನು-ಸುವ್ಯವಸ್ಥೆ ಹದಗೆಟ್ಟು ಬೆಂಗಳೂರಿನಲ್ಲಿ ರಾತ್ರಿ 9ಗಂಟೆ ನಂತರ ಹೆಣ್ಣು ಮಕ್ಕಳು ಓಡಾಡಲಾರದ ಸ್ಥಿತಿ ತಂದಿಟ್ಟಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

Advertisement

ಮಂಗಳವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುತ್ತೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 3515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

6521 ಕೊಲೆಗಳಾಗಿವೆ. 19382 ಅತ್ಯಾಚಾರ ಪ್ರಕರಣ, 4759 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರವೇ ವಿಧಾನಸಭೆಯಲ್ಲಿ ಉತ್ತರ ಕೊಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸರ್ಕಾರ ನೀಡಿರುವ ಉತ್ತರವೇ ಉದಾಹರಣೆಯಾಗಿದೆ ಎಂದರು.

ಪ್ರೋತ್ಸಾಹ ಧನ ನೀಡಿಲ್ಲ: ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಬೆಂಗಳೂರಲ್ಲಿ ಮೂಲೆ ನಿವೇಶನಗಳನ್ನು ಅಡವಿಟ್ಟು 900 ಕೋಟಿ ಸಾಲ ಪಡೆದಿದೆ. ಎಂಎಂಎನ್‌ಎಲ್‌ನ 1400 ಕೋಟಿ ಠೇವಣಿ ಹಣವನ್ನೂ ಪಡೆದುಕೊಳ್ಳಲಾಗಿದೆ. ಹೈನುಗಾರರಿಗೆ ಆರೇಳು ತಿಂಗಳಿಂದ ಪ್ರೋತ್ಸಾಹ ಧನ ನೀಡಿಲ್ಲ. ಶವಸಂಸ್ಕಾರಕ್ಕೆ ಒಂದು ವರ್ಷದಿಂದ ಹಣ ನೀಡಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 76 ಮೊಕದ್ದಮೆಗಳಿವೆ. ಆದರೆ, ಇದರ ತನಿಖೆಯೇ ಇಲ್ಲದೆ ಎಸಿಬಿಯಿಂದ ಕ್ಲೀನ್‌ಚಿಟ್‌ ಪಡೆಯಲು ಹೊರಟಿದ್ದಾರೆ. ಈ ಎಲ್ಲ ಮೊಕದ್ದಮೆಗಳ ಚಾರ್ಜ್‌ಶೀಟ್‌ ಸಿದ್ಧಪಡಿಸುತ್ತಿದ್ದು, ಮನೆ ಮನೆಗೆ ಹಂಚಿ ಬೀದಿಯಲ್ಲಿ ಇವರ ಮಾನ ಹರಾಜು ಹಾಕುತ್ತೇವೆ ಎಂದರು.

Advertisement

ಅನುದಾನದ ವಿವರ ಕೊಡಿ: ವರುಣ ಕ್ಷೇತ್ರದ ಅಭಿವೃದ್ಧಿಗೆ 1600 ಕೋಟಿ ಕೊಟ್ಟಿರುವುದಾಗಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ವಿವರ ಕೊಡಲಿ ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಶೆ.25 ರಿಂದ 30ರಷ್ಟು ಕಮೀಷನ್‌ ಪಡೆದು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರಿದರು.

ಯಡಿಯೂರಪ್ಪ ಹಸಿರು ಶಾಲು ಹಾಕಬಾರದು ಅನ್ನುತ್ತಾರೆ ಸಿದ್ದರಾಮಯ್ಯ, ನಾನು ಹಸಿರು ಶಾಲು ಹಾಕುವುದು ಅಪರಾಧವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯಾಗಿ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದ್ದೇನೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ್ದೇನೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿದ್ದ ಸಾಲದ ಮೇಲಿನ 1400 ಕೋಟಿ ಬಡ್ಡಿ ಮನ್ನಾ ಮಾಡಿದ್ದೇನೆ, ಜತೆಗೆ ತಮ್ಮ ಅವಧಿಯಲ್ಲಿ ಎರಡು ಬಾರಿ ರೈತರ ಸಾಲಮನ್ನಾ ಮಾಡಿದ್ದೇನೆ, ಇದು ಅಪರಾಧನಾ ಎಂದು ಪ್ರಶ್ನಿಸಿದರು.

ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್‌, ಎಸ್‌.ಸುರೇಶ್‌ ಕುಮಾರ್‌, ಮಾಜಿ ಸಂಸದೆ ತೇಜಸ್ವಿನಿ ಗೌಡ, ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಮಾತನಾಡಿದರು. ಮಾಜಿ ಸಚಿವರಾದ ಬಿ.ಜೆ.ಪುಟ್ಟಸ್ವಾಮಿ, ಸಿ.ಪಿ.ಯೋಗೇಶ್ವರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಶಿವಣ್ಣ, ಮುಖಂಡರಾದ ಕಾ.ಪು.ಸಿದ್ದಲಿಂಗಸ್ವಾಮಿ, ಅಪ್ಪಣ್ಣ, ಅಶೋಕ, ಪುಟ್ಟಬುದ್ದಿ ಮೊದಲಾದವರು ಉಪಸ್ಥಿತರಿದ್ದರು.

ಯತೀಂದ್ರ ಅವರೇ ಪ್ರಥಮ ಚುಂಬನಂ ದಂತಭಗ್ನಂ: ಸಮಾವೇಶದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಅಧಿಕಾರದ ಮದ ಏರಿರುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು. ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುತ್ತೆ ಅನ್ನುವ ಕಾರಣಕ್ಕೆ ನಿಮ್ಮ ಅಪ್ಪ ಓಡಿಹೋಗುತ್ತಿದ್ದಾರೆ ಯತೀಂದ್ರ ಅವರೇ ಪ್ರಥಮ ಚುಂಬನಂ ದಂತಭಗ್ನಂ ಅನ್ನುವಂತೆ ಮಾಡಿಕೊಳ್ಳಬೇಡಿ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು.

ರಾಕೇಶ್‌ ಸಾವಿಗೆ ಸಿದ್ದು ಬೇಜವಾಬ್ದಾರಿ ಕಾರಣ: ಪ್ರಸಾದ್‌
ಮಗನ ಬಗ್ಗೆಯೇ ಕಾಳಜಿವಹಿಸದ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ವರ್ತನೆಯಿಂದ ರಾಕೇಶ್‌ ಸಾವನ್ನಪ್ಪು$ವಂತಾಯಿತು ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ದೂರಿದರು. ವರುಣ ಕ್ಷೇತ್ರದ ಉತ್ತರಾಧಿಕಾರಿಯಾಗಿದ್ದ ರಾಕೇಶ್‌ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಸಮುದ್ರಕ್ಕೆ ಬಿಟ್ಟರು, ಮೋಜು-ಮಸ್ತಿ ಮಾಡಲು ರಾಕೇಶ್‌ ಬೆಲ್ಜಿಯಂಗೆ ಹೋಗುವುದನ್ನು ತಿಳುವಳಿಕೆ ಹೇಳಿ ತಡೆಯುವ ಕೆಲಸವನ್ನು ಅಪ್ಪನಾಗಿ ಸಿದ್ದರಾಮಯ್ಯ ಮಾಡಬೇಕಿತ್ತು ಎಂದರು.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ, ತಿ.ನರಸೀಪುರದಲ್ಲಿ ಮಹದೇವಪ್ಪ ಅವರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಕಾಂಗ್ರೆಸ್‌ಗೆ ಮತ ಕೊಟ್ಟರೆ, ಸಿದ್ದರಾಮಯ್ಯ ಅವರ ದುರಂಹಕಾರ, ಉಡಾಫೆಗೆ ಮತ ಕೊಟ್ಟಂತಾಗುತ್ತದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಮನವಿ ಮಾಡಿದರು.

ರೈತರಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟಿದ್ದು ಬಿಎಸ್‌ವೈ!: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಾತನಾಡುವ ಭರದಲ್ಲಿ ರೈತರ ಆತ್ಮಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಬದಲು, ರಾಜ್ಯದಲ್ಲಿ ಏನಾದ್ರು ರೈತರಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟಿದ್ದರೆ ಅದು ಸನ್ಮಾನ್ಯ ಯಡಿಯೂರಪ್ಪ ಅವರು, 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರಲ್ಲಾ ಇಂತಹ ಒಬ್ಬ ಮುಖ್ಯಮಂತ್ರಿ ನಿಮಗೆ ಬೇಕಾ ಎಂದು ಯಡಿಯೂರಪ್ಪ ಅವರ ಕಡೆಗೆ ಕೈ ತೋರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next