Advertisement

ವಿಶ್ವದ ಅತೀ ದೊಡ್ಡ ಗಡಿ ಕಾವಲು ಪಡೆ

04:04 PM Jun 13, 2020 | mahesh |

ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅದ್ವಿತೀಯ ಮತ್ತು ಅಜರಾಮರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು ಸುಖವಾಗಿ ನಿದ್ರಿಸುವಂತಾಗಿದೆ. ಇದು ಕೇವಲ ಭಾರತದ ಕತೆ ಅಲ್ಲ. ಇತರ ಎಲ್ಲ ದೇಶಗಳ ಸೇನೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತೀಯ ಸೇನೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ದೇಶವನ್ನು ರಕ್ಷಿಸಿದೆ. ಹಲವಾರು ಪ್ರಕೃತಿ ವಿಕೋಪಗಳಲ್ಲಿ ಜನರನ್ನು ಕಾಪಾಡಿದೆ. ಇಂಥ ಸೇನೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಭಾರತೀಯ ಸೇನೆ ಎಂದರೆ ಅದು ಕೇವಲ ಗಡಿ ಕಾಯುವ ಪಡೆ ಅಥವಾ ದೇಶ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಕಾದಾಡುವ ಸೈನ್ಯ ಅಲ್ಲ. ಸೇನೆಯಲ್ಲಿಯೂ ಹಲವಾರು ವಿಭಾಗಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವೂ ಇದೆ.

Advertisement

ಭಾರತೀಯ ಸೈನ್ಯ, ಸಿಆರ್‌ಪಿಎಫ್‌, ಬಿಎಸ್‌ಎಫ್‌ ರಕ್ಷಣಾ ಪಡೆಗಳು ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿವೆೆ. ದಿನ ಕಳೆದಂತೆ ದೇಶದಲ್ಲಿ ಸೇನೆ ಸೇರುವ ಒಲವು ಹೆಚ್ಚಾಗುತ್ತಿದ್ದು, ಯುವಕರು ಗಡಿಯಲ್ಲಿ ಕಾರ್ಯನಿರ್ವಹಿಸುವ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದ ಅತೀ ದೊಡ್ಡ ಮತ್ತು ಭಾರತೀಯ ಸೈನ್ಯದ ಪ್ರಮುಖ ಅಂಗವಾಗಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಅದರ ಇತಿಹಾಸ, ಕಾರ್ಯವೈಖರಿ ಮೇಲೆಯೂ ಬೆಳಕು ಚೆಲ್ಲಲಾಗಿದೆ.

ಯಾವಾಗ ಆರಂಭವಾಯಿತು?
ಗಡಿ ಭದ್ರತಾ ಪಡೆ (ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ ಅಥವಾ ಬಿಎಸ್‌ಎಫ್‌) ಭಾರತದ ಪ್ರಾಥಮಿಕ ಗಡಿ ರಕ್ಷಣಾ ಸಂಘಟನೆಯಾಗಿದ್ದು, ಐದು ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ಒಂದಾಗಿದೆ. ದೇಶಕ್ಕೆ ಆಂತರಿಕವಾಗಿ ಸಂರಕ್ಷಣೆ ನೀಡಲು ಮತ್ತು ಗಡಿ ಭಾಗಗಳಲ್ಲಿ ಭದ್ರತೆ ಕಾಯ್ದುಕೊಳ್ಳಲು 1965ರ ಡಿಸೆಂಬರ್‌ 1ರಂದು ಖುಸ್ರೋ ಫಾರಮುರ್ಜ್‌ ರುಸ್ತುಮ್‌ಜೀ ಅವರ ನೇತೃತ್ವದಲ್ಲಿ ಗಡಿಭದ್ರತಾ ಪಡೆ (ಬಿಎಸ್‌ಎಫ್‌)ಯನ್ನು ಸ್ಥಾಪನೆ ಮಾಡಲಾಯಿತು. ಕೇಂದ್ರ ಸರಕಾರ ನೇತೃತ್ವದ ಸಂಸ್ಥೆಯಾಗಿರುವ ಬಿಎಸ್‌ಎಫ್‌, ಶಾಂತಿ ಸಮಯದಲ್ಲಿ ಭಾರತದ ಭೂ ಗಡಿಯನ್ನು ಕಾಪಾಡುತ್ತದೆ. ಬಹುರಾಷ್ಟ್ರೀಯ ಸಂಚನ್ನು ಬೇಧಿಸುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಗೃಹ ಸಚಿವಾಲಯ ಆಡಳಿತಾತ್ಮಕ ನಿಯಂತ್ರಣ ವ್ಯಾಪ್ತಿಯಲ್ಲಿಯೂ ಇದು ಸೇವೆ ಸಲ್ಲಿಸುತ್ತಿದೆ. ಪ್ರತೀ ವರ್ಷ ಡಿಸೆಂಬರ್‌ ಒಂದರಂದು ಬಿಎಸ್‌ಎಫ್‌ ಸಂಸ್ಥಾಪನ ದಿನಾಚರಣೆ ಎಂದು ಘೋಷಣೆ ಮಾಡಲಾಗಿದೆ.

ಅತೀ ದೊಡ್ಡ ಪಡೆ
ಇದು ಇಡೀ ವಿಶ್ವದಲ್ಲೇ ಅತೀ ದೊಡ್ಡ ಗಡಿಭದ್ರತಾ ಪಡೆಯಾಗಿದೆ. ಕಳೆದ 52 ವರ್ಷಗಳಿಂದ ವಾರ್ಷಿಕ ಧ್ವಜ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಬಿಎಸ್‌ಎಫ್‌ ಹಿರಿಯ ಯೋಧರು ಹಾಗೂ ಸಿಬಂದಿಯಿಂದ ಈ ಸಂಸ್ಥಾಪನ ದಿನ ಸಮಾರಂಭದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

2 ಲಕ್ಷಕ್ಕೂ ಹೆಚ್ಚು ಯೋಧರು
ಬಿಎಸ್‌ಎಫ್‌ ಪಡೆಯಲ್ಲಿ ಗ್ರೂಪ್‌ ಎ, ಬಿ ಮತ್ತು ಸಿ ಎಂದು ಹತ್ತಾರು ವಿಭಾಗಗಳಿವೆ. ಇದರ ಮುಖ್ಯಸ್ಥರು ನಿರ್ದೇಶಕ-ಜನರಲ್‌ (ಡಿಜಿ) ಎಂದು ಕರೆಯಲಾಗುತ್ತದೆ. ಕಾಲಕಾಲಕ್ಕೆ ವಿವಿಧ ಕಾರ್ಯಯೋಜನೆಯೊಂದಿಗೆ ರೂಪುಗೊಳ್ಳುವ ಒಕ್ಕೂಟದ ಸಶಸ್ತ್ರ ಬಿಎಸ್‌ಎಫ್‌ ಪ್ರಾರಂಭದಲ್ಲಿ ಸೀಮಿತ ಬೆಟಾಲಿಯನ್‌ಗಳ ಮೂಲಕ ಕಾರ್ಯಾಚರಿಸುತ್ತಿತ್ತು. ಆದರೆ ಪ್ರಸ್ತುತ 2,57,363 ಸಿಬಂದಿ ವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

Advertisement

ಪ್ರಾಂತ್ಯಗಳ ರಕ್ಷಣ ರೇಖೆ
ಇನ್ನು ವಾಯು ವಿಂಗ್‌, ಮೆರೈನ್‌ ವಿಂಗ್‌, ಆರ್ಟಿಲರಿ ರೆಜಿಮೆಂಟ್ಸ್‌ ಮತ್ತು ಕಮಾಂಡೋ ಘಟಕಗಳು ಇದರ ವ್ಯಾಪ್ತಿಯಲ್ಲಿಯೇ ಬರುತ್ತವೆ. ಪ್ರಸ್ತುತ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆಯಾಗಿದೆ. ಈ ಕಾರಣಕ್ಕಾಗಿಯೇ ಬಿಎಸ್‌ಎಫ್‌ ಅನ್ನು ಭಾರತೀಯ ಪ್ರಾಂತ್ಯಗಳ ರಕ್ಷಣ ರೇಖೆಯೆಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಸುಮಾರು 24 ಡಿಜಿಗಳು ಸೇವೆ ಸಲ್ಲಿಸಿದ್ದು, ಪ್ರಸ್ತುತ ವಿ.ಕೆ. ಜೊಹ್ರಿ ಅವರು ನಿರ್ವಹಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಲವು ಕಾರ್ಯಾಚರಣೆಗಳು
ಗಡಿಭದ್ರತಾ ಪಡೆಯನ್ನು ಪ್ರಮುಖವಾಗಿ ಭಾರತ- ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿ, ಭಾರತ- ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿ, ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿದ್ದು, ಭಾರತೀಯ ಸೇನೆ ಹಾಗೂ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಪಡೆಯಾಗಿ ಕೂಡಾ ಕಾರ್ಯ ನಿರ್ವಹಿಸುತ್ತದೆ. ಆರಂಭದಿಂದಲೂ
ಬಿಎಸ್‌ಎಫ್‌ ವಿಶ್ವಾಸಾರ್ಹತೆ ಹಾಗೂ ಯುದ್ಧ ಕೌಶಲಕ್ಕೆ ಹೆಸರುವಾಸಿಯಾಗಿದ್ದು, ಹಲವು ಮಿಲಿಟರಿ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತು ಗಡಿ ನುಸುಳುವ ಸಂದರ್ಭದಲ್ಲಿ, ಆಂತರಿಕ ಭದ್ರತಾ ಕರ್ತವ್ಯಗಳನ್ನು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ.

ಸುಶಾನ್‌ ಎಂ.ಎಸ್‌. ಜೈನ್‌, ಬಸವನ ಬಾಗೇವಾಡಿ

Advertisement

Udayavani is now on Telegram. Click here to join our channel and stay updated with the latest news.

Next