Advertisement

ಪುಸ್ತಕಗಳಿಲ್ಲದ ಜಗತ್ತು ಅಂಧಕಾರದಲ್ಲಿರುತ್ತಿತ್ತು: ಸ್ವಾಮೀಜಿ

06:43 PM Apr 29, 2022 | Team Udayavani |

ಗದಗ: ಎಷ್ಟು ಬಳಸಿದರೂ ನಶಿಸದ, ಬಳಸಿದಂತೆಲ್ಲಾ ಹೆಚ್ಚುವ ವಸ್ತು ಜ್ಞಾನ. ಅಂಥ ಜ್ಞಾನವನ್ನು ನೀಡುವ ಪುಸ್ತಕಗಳು ಇರದಿದ್ದರೆ, ಈ ಜಗತ್ತು ಇನ್ನೂ ಅಂಧಕಾರದಲ್ಲಿ ಇರುತ್ತಿತ್ತು ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ 2586ನೇ ಶಿವಾನುಭವದಲ್ಲಿ “ವಿಶ್ವ ಪುಸ್ತಕ ದಿನ’ದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನೇಕ ಸಾಧಕರು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿ ಜಗತ್ತಿಗೆ ಬೆಳಕು ನೀಡಿದ್ದಾರೆ. ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳು ಪುಸ್ತಕಗಳಿಂದ ಪ್ರೇರೇಪಿತರಾಗಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ರಚಿಸಲ್ಪಟ್ಟ ಮಹಾಭಾರತ-ರಾಮಾಯಣಗಳು, 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಸ್ಫೂರ್ತಿಯ ಸೆಲೆಯಾಗಿವೆ. ವ್ಯಕ್ತಿತ್ವ ಗಟ್ಟಿಗೊಳಿಸಲು, ಬದುಕು ಕಟ್ಟಿಕೊಳ್ಳಲು ಓದುವುದು ಅವಶ್ಯಕ ಎಂದರು.

ಪ್ರಾಧ್ಯಾಪಕ ಡಾ| ದತ್ತಪ್ರಸನ್ನ ಪಾಟೀಲ ಉಪನ್ಯಾಸ ನೀಡಿ, ಆಂಗ್ಲ ಭಾಷೆಯ ಖ್ಯಾತ ಲೇಖಕ ವಿಲಿಯಂ ಶೇಕ್ಸ್‌ಪಿಯರ್‌ ನಿಧನ ಹೊಂದಿದ ದಿನವಾದ ಏ.23ನ್ನು 1995 ರಿಂದ ವಿಶ್ವ ಪುಸ್ತಕ ದಿನವೆಂದು ಆಚರಿಸುತ್ತಾ ಬರಲಾಗಿದೆ. ಯುನಿಸೆಫ್‌-ಯುನೆಸ್ಕೂಗಳು ಸಹ ಈ ಆಚರಣೆಗೆ ಒತ್ತು ಕೊಟ್ಟಿವೆ. ಮಸ್ತಕದ ಜ್ಞಾನವನ್ನು ಹೆಚ್ಚಿಸುವ ಪುಸ್ತಕಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕ ದತ್ತಪ್ರಸನ್ನ ಪಾಟೀಲರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಪದಾಧಿಕಾರಿಗಳಾದ ಮುರುಘೇಶ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next