Advertisement
ರಾಜ್ಯ ಅರಣ್ಯ ಇಲಾಖೆ ಮತ್ತು ಬೆಂಗಳೂರು ಚಿಟ್ಟೆ ಕ್ಲಬ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಮೂಲಕ ಚಿಟ್ಟೆಗಳ ಜೀವನ, ವಾಸಿಸುವ ವಿಧಾನ ಇತ್ಯಾದಿ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಹತ್ತಾರು ಕುತೂಹಲಕಾರಿ ಅಂಶಗಳನ್ನು ತೆರೆದಿಡಲಾಗಿದೆ.
Related Articles
Advertisement
ಚಿಟ್ಟೆಗಳ ವಲಸೆ: ಹವಾಮಾನದ ವೈಪರಿತ್ಯ ಹಾಗೂ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಚಿಟ್ಟೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹಾಗೆಯೇ ಬೇರೆ ಬೇರೆ ಪ್ರದೇಶದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೂ ಚಿಟ್ಟೆಗಳು ಬರುತ್ತಿರುತ್ತವೆ. ಭಾರತೀಯ ಚಿಟ್ಟೆಗಳಾದ ಕಾಮನ್ ಕ್ರೌವ್, ಬಡಲ್ ಬ್ರಾಂಡೆಡ್ ಕ್ರೌವ್, ಬ್ಲೂ ಟೈಗರ್ ಮತ್ತು ಡಾರ್ಕ್ ಟೈಗರ್ ಚಿಟ್ಟೆಗಳು ಮಾನ್ಸೂನ್ ಮೊದಲು ಪಶ್ಚಿಮ ಘಟ್ಟದಿಂದ ವಲಸೆ ಬರುತ್ತವೆ. ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ವಾಪಾಸ್ ಅಲ್ಲಿಗೆ ಹೋಗುತ್ತವೆ. ಅಲ್ಬೋಟ್ರೋಸ್ ಚಿಟ್ಟೆಗಳು ಪ್ರತಿವರ್ಷ ಜನವರಿಯಲ್ಲಿ ಪಶ್ಚಿಮ ಘಟ್ಟದಿಂದ ವಲಸೆ ಬರುತ್ತದೆ.
ಚಿಟ್ಟೆಯ ಜೀವನಚಕ್ರ: ಚಿಟ್ಟೆಗಳು ಲೆಪಿಡೊಪ್ಟೆರಾ ಆರ್ಡರ್ಗೆ ಕೀಟ ಪ್ರಭೇದಕ್ಕೆ ಸೇರಿದವು. ಇವುಗಳಿಗೆ ಹುಟ್ಟುವಾಗ ರೆಕ್ಕೆಗಳು ಇರುವುದಿಲ್ಲ. ಮೊಟ್ಟೆಯೊಳಗಿನ ಗರ್ಭಾವಸ್ಥೆಯಿಂದ ಗೂಡುಕಟ್ಟುವವರೆಗೂ ಕೀಟದ ರೂಪದಲ್ಲಿ ಇರುತ್ತದೆ. ನಾಲ್ಕೈದು ವಾರದ ನಂತರ ಚಿಟ್ಟೆಯಾಗಿ ಮಾರ್ಪಾಟಾಗುತ್ತದೆ. ಬಹುತೇಕ ಚಿಟ್ಟೆಗಳು ಹಗಲಿನಲ್ಲಿ ಮಾತ್ರ ಕ್ರಿಯಾಶೀಲವಾಗಿರುತ್ತದೆ. ಚಿಟ್ಟೆಗಳು ಒಂದು ವಾರದಿಂದ ಒಂದು ವರ್ಷದ ಆಯಸ್ಸು ಹೊಂದಿರುತ್ತದೆ ಎಂಬುದು ಚಿಟ್ಟೆ ತಜ್ಞರ ಅಭಿಪ್ರಾಯ.
ರೆಕ್ಕೆ ರಚನೆಯಲ್ಲೂ ವ್ಯತ್ಯಾಸ: ಚಿಟ್ಟೆಗಳು ತಮ್ಮ ಬಣ್ಣಬಣ್ಣದ ರೆಕ್ಕೆಗಳಿಂದಲೇ ಪ್ರಸಿದ್ಧತೆ ಪಡೆದಿದೆ. ಚಿಟ್ಟೆಗಳ ರೆಕ್ಕೆಗಳು ಅವುಗಳ ಪ್ರಭೇದಕ್ಕೆ ಹೊಂದಿಕೊಂಡಂತೆ ಗಾತ್ರ, ಬಣ್ಣದ ವ್ಯತ್ಯಾಸ ಇರುತ್ತದೆ. ಚಿಟ್ಟೆಗಳು ಹಾರುವಾಗ ರೆಕ್ಕೆಯನ್ನು ಅರಳಿಸುತ್ತದೆ ಹಾಗೂ ಆಯಾಸವಾಗಿ ಕುಳಿತುಕೊಂಡಾಗ ರೆಕ್ಕೆಯನ್ನು ಸೇರಿಕೊಂಡು ಸಣ್ಣಕ್ಕೆ ಪಟಪಟನೆ ಹೊಡೆದುಕೊಳ್ಳುತ್ತಿರುತ್ತವೆ.
* ರಾಜು ಖಾರ್ವಿ ಕೊಡೇರಿ