ಸೀರೆಯ ಜೊತೆ ತೊಡುವ ರವಿಕೆಗೆ, ಹಿಂದಿನ ಕಾಲದಲ್ಲಿ ಜಾಕೆಟ್ ಎನ್ನಲಾಗುತ್ತಿತ್ತು. ಆದರೀಗ, ಜಾಕೆಟ್ ಎಂದರೆ ರವಿಕೆ ಅಷ್ಟೇ ಅಲ್ಲ, ಮೇಲುಡುಪೂ ಹೌದು. ಜಾಕೆಟ್‌ಗಳಲ್ಲಿ ಅನೇಕ ಪ್ರಕಾರಗಳಿವೆ. ಕಾಲರ್ ಇರುವ, ಇಲ್ಲದಿರುವ ಜಾಕೆಟ್, ದ್ದ ತೋಳು, ಮುಕ್ಕಾಲು ತೋಳು, ಅರ್ಧ ತೋಳು ಅಥವಾ ತೋಳುಗಳೇ ಇಲ್ಲದ ಜಾಕೆಟ್! ಜೇಬುಗಳಿರುವ, ಇಲ್ಲದಿರುವ ಜಾಕೆಟ್, ಬಟನ್ ಇರುವ, ಲಾಡಿ ಅಥವಾ ದಾರದಿಂದ ಕಟ್ಟಿಕೊಳ್ಳುವ ಜಾಕೆಟ್, ಜಿಪ್ ಉಳ್ಳ ಜಾಕೆಟ್, ವೆಲೊ ಜಾಕೆಟ್ ಅಥವಾ ಯಾವ ರೀತಿಯಿಂದಲೂ ಕಟ್ಟಿಕೊಳ್ಳಲಾಗದ, ಹಾಗೇ ಖಾಲಿ ಬಿಡುವ ಜಾಕೆಟ್. ಹೀಗೆ, ಹತ್ತಾರು ಬಗೆಯ ಜಾಕೆಟ್‌ಗಳು ಲಭ್ಯ.
ಇದು ಬಹು ಉಪಯೋಗಿ: ಜಾಕೆಟ್‌ಗಳನ್ನು ಸೀರೆಯ ಜೊತೆ ರವಿಕೆಯಂತೆ ತೊಡಬಹುದು. ಕುರ್ತಿ, ಕಮೀಜ್, ಅನಾರ್ಕಲಿ ಡ್ರೆಸ್, ಚೂಡಿದಾರದ ಟಾಪ್ ಮೇಲೂ ಧರಿಸಬಹುದು. ಜಾಕೆಟ್ ತೊಟ್ಟಾಗ ದುಪಟ್ಟಾ ಅಥವಾ ಶಾಲಿನ ಅಗತ್ಯ ಇರುವುದಿಲ್ಲ. ಜಾಕೆಟ್ ಗಳಲ್ಲೂ ಬಿಗಿಯಾದ ಮತ್ತು ಸಡಿಲವಾದ ಫಿಟಿಂಗ್ ಆಯ್ಕೆಗಳಿವೆ. ವೇಸ್ಟ್ ಕೋಟ್‌ನಂತೆ ಕೂಡ, ಇವನ್ನು ತೊಡಬಹುದು. ಕೇವಲ ಒಂದೇ ಬಣ್ಣ, ಚೆಕ್ಸ್ ಡಿಸೈನ್, ಫ್ರೋರಲ್ ಪ್ರಿಂಟ್‌ನ ಜಾಕೆಟ್‌ಗಳು ಈಗ ಟ್ರೆಂಡಿಂಗ್‌ನಲ್ಲಿವೆ.
ರಾಯಲ್ ಗತ್ತಿನ ಜಾಕೆಟ್: ಮಿರರ್ ವರ್ಕ್, ಕಸೂತಿ, ಮಣಿ, ದಾರ, ಗೆಜ್ಜೆ, ಟ್ಯಾಸೆಲ್, ಬಣ್ಣದ ಕಲ್ಲುಗಳು, ಮತ್ತಿತರ ಅಲಂಕಾರಿಕ ವಸ್ತುಗಳನ್ನು ಪೋಣಿಸಿ, ಜಾಕೆಟ್‌ಗಳ ಅಂದ ಹೆಚ್ಚಿಸಬಹುದು. ಸ್ಲಿವ್‌ಲೆಸ್ ಜಾಕೆಟ್‌ಗಳಿಗೆ ಬಹಳಷ್ಟು ಬೇಡಿಕೆ ಇದೆ. ಏಕೆಂದರೆ, ಇವುಗಳನ್ನು ಯಾವುದೇ ದಿರಿಸಿನ ಮೇಲೆ ಬೇಕಾದರೂ ತೊಟ್ಟುಕೊಳ್ಳಬಹುದು ಹಾಗೂ ಸೆಖೆಯೂ ಆಗದು. ಪ್ಲೇನ್ ಬಣ್ಣದ ಟಾಪ್ ಮೇಲೆ ಬಣ್ಣ ಬಣ್ಣದ ಜಾಕೆಟ್ ತೊಟ್ಟರೆ, ಎಂಥ ಬೋರಿಂಗ್ ಉಡುಗೆಯೂ ಆಕರ್ಷಕವಾಗಿ ಕಾಣುತ್ತದೆ! ಪ್ಯಾಚ್ ವರ್ಕ್, ಚರ್ಮ, ಡೆನಿಮ್ (ಜೀನ್ಸ್), ವೆಲ್ವೆಟ್ (ಮಕ್ಮಲ್), ಫರ್, ಉಣ್ಣೆ ಬಟ್ಟೆಯಲ್ಲಿ, ಜಾಕೆಟ್‌ಗಳು ಲಭ್ಯ.
ಎರಡಕ್ಕೂ ಮ್ಯಾಚ್ ಮಾಡಬಹುದು: ಲೆದರ್ ಅಥವಾ ಚರ್ಮದ ಜಾಕೆಟ್‌ಗಳನ್ನು ಬೈಕರ್ಸ್‌ಗಳು, ನ್ಪೋರ್ಟ್ಸ್ ಆಡುವವರು ಹೆಚ್ಚಾಗಿ ಇಷ್ಟಪಡುತ್ತಾರೆ. ಲೆದರ್ ಬಳಕೆಯನ್ನು ವಿರೋಧಿಸುವ ಪ್ರಾಣಿಪ್ರಿಯರು, ಸಿಂಥೆಟಿಕ್ ಲೆದರ್‌ನ ಜಾಕೆಟ್‌ಗಳನ್ನು ತೊಡಬಹುದು. ಇಂಥ ಜಾಕೆಟ್ ಅನ್ನು, ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆಗೆ ತೊಟ್ಟರೇ ಚೆನ್ನ. ಇವುಗಳ ಮೇಲೆ ಕಸೂತಿ, ಚಿತ್ರಕಲೆ, ಚಿಹ್ನೆ ಮೂಡಿಸಿ, ಸಾಂಪ್ರದಾಯಿಕ ಉಡುಗೆಯಾಗಿ ಮಾರ್ಪಾಡು ಮಾಡಬಹುದು.
ನೀವೇ ಜಾಕೆಟ್ ಹೊಲಿಯಿರಿ: ಡೆನಿಮ್, ಅಂದರೆ ಜೀನ್ಸ್ ಜಾಕೆಟ್‌ಗಳನ್ನು ಖಾದಿ ಉಡುಗೆಯ ಜೊತೆ, ಪ್ಯಾಂಟ್- ಶರ್ಟ್, ಶಾರ್ಟ್ಸ್, ಸ್ಕರ್ಟ್ಸ್ ಜೊತೆ ಉಡಬಹುದು. ಡೆನಿಮ್‌ಗಿರುವ ಮೆರಗು, ಪ್ಲೆ„ನ್ ಬಟ್ಟೆಗಳ ಜೊತೆ ಎದ್ದು ಕಾಣುತ್ತದೆ. ನೋಡಲು ಒಂದರ ಮೇಲೊಂದು ಕೋಟ್ ತೊಟ್ಟಂತೆ ಕಾಣುವ ಲೇಯರ್ಡ್ ಜಾಕೆಟ್, (ಒಂದೇ ಜಾಕೆಟ್‌ನಲ್ಲಿ ಎರಡು ಅಥವಾ ಹೆಚ್ಚು ಪದರಗಳಿರುವ ಕಾರಣ, ಅವನ್ನು ಲೇಯರ್ಡ್ ಜಾಕೆಟ್ ಎನ್ನುವರು) ನೋಡಲು ಗ್ರಾಂಡ್ ಆಗಿ ಕಾಣುತ್ತದೆ. ಹೊಲಿಗೆ ಗೊತ್ತಿದ್ದವರು, ಹಳೆಯ ಸೀರೆ, ಶಾಲು ಅಥವಾ ಇನ್ನಿತರ ಬಟ್ಟೆಯಿಂದ ಜಾಕೆಟ್‌ಗಳನ್ನು ಹೊಲಿಯಬಹು ದು. ಈಗ ಹೇಗಿದ್ದರೂ ಬಿಡುವು ಇರುವ ಕಾರಣ, ಈ ಪ್ರಯೋಗಕ್ಕೆ ನೀವೂ ಕೈ ಹಾಕಬಹುದು.
* ಅದಿತಿಮಾನಸ ಟಿ.ಎಸ್.