Advertisement

ಭಾರತದ ಯೋಗಕ್ಕೆ ಜಗತ್ತು ಬಾಗಿತು…;ಜಗತ್ತಿನಾದ್ಯಂತ ಯೋಗ ದಿನ

03:45 AM Jun 22, 2017 | Harsha Rao |

ನವದೆಹಲಿ: ಭಾರತದ ಓಂಕಾರದ ಯೋಗದ ಕರೆಗೆ ಇಂದು ಜಗತ್ತೇ ಬಾಗಿತು! ಹೌದು, ಗಡಿಯಾಚೆ, ಸಾಗರದಾಚೆ, ಭಾರಿ ಗೋಡೆಗಳಾಚೆ, ವಿಭಿನ್ನ ಮನಸುಗಳಾಚೆ, ಜಾತಿ ಧರ್ಮಗಳನ್ನೂ ಮೀರಿ ಇಡೀ ವಿಶ್ವವೇ ಪಾಲ್ಗೊಂಡು ಯೋಗದ ಮಹಿಮೆಯನ್ನು ಮತ್ತೂಮ್ಮೆ ಸಾರಿತು.

Advertisement

ಇದು ಮೂರನೇ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ. ಉತ್ತರ ಪ್ರದೇಶದ ಲಕ್ನೋದಲ್ಲಿ ಸ್ಥಳೀಯ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರ ಜತೆಗೂಡಿ ವಿವಿಧ ಆಸನಗಳನ್ನು ಹಾಕಿದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿನ ಉತ್ತಮ ಆರೋಗ್ಯಕ್ಕೆ ಯೋಗ ನೀಡುತ್ತಿರುವ ಕೊಡುಗೆಯನ್ನು ಬಣ್ಣಿಸಿದರು.

ಪೇರುವಿನ ಮಚುಪಿಚುವಿನಿಂದ, ಚೀನಾದ ದಿ ಗ್ರೇಟ್‌ ವಾಲ್‌ ವರೆಗೆ ಎಲ್ಲೆಡೆ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನವೇ. ಧರ್ಮಗಳನ್ನು ಮೀರಿ ಓಂ ಎಂಬ ಉದ್ಘೋಷವೂ ಮೊಳಗಿತು. ರಾಜಕೀಯ ನೇತಾರರು, ರಾಜತಾಂತ್ರಿಕರು, ಅಧಿಕಾರಿಗಳು, ನ್ಯಾಯಾಧೀಶರು ಕೂಡ ತಾವು ಇದ್ದಲ್ಲಿಯೇ ಯೋಗ ಮಾಡಿದರು. ಇನ್ನು ಕಚೇರಿಗಳಲ್ಲೂ, ಪಾರ್ಕ್‌ಗಳಲ್ಲೂ, ಅಷ್ಟೇ ಅಲ್ಲ ರಸ್ತೆಗಳ ಮೇಲೂ ಕಂಡಿದ್ದು ಯೋಗ ಮ್ಯಾಟ್‌!

ಲಕ್ನೋದ ರಾಮಾಭಾಯಿ ಅಂಬೇಡ್ಕರ್‌ ಮೈದಾನದಲ್ಲಿ 51 ಸಾವಿರ ಯೋಗಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡಿದರು. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ, ಯೋಗದಲ್ಲಿ ಪಾಲ್ಗೊಂಡ ಜನರ ಉತ್ಸಾಹಕ್ಕೆ ಅಭಿನಂದನೆ ಹೇಳಿದ ಪ್ರಧಾನಿ, ಇಂದು ಯೋಗ ಪ್ರತಿಯೊಬ್ಬ ವ್ಯಕ್ತಿಯ ಭಾಗವಾಗಿಬಿಟ್ಟಿದೆ ಎಂದರು.

ಜಗತ್ತಿನ ವಿವಿಧ ಭಾಗಗಳ ದೇಶದ ಜನರಿಗೆ ನಮ್ಮ ಭಾಷೆ, ಧರ್ಮ, ಸಂಸ್ಕೃತಿ ಗೊತ್ತಿಲ್ಲ. ಆದರೆ ಭಾರತದ ಯೋಗ ಇವರೆಲ್ಲರನ್ನೂ ಭಾರತದತ್ತ ನೋಡುವಂತೆ ಮಾಡಿದೆ. ಈ ಅಭ್ಯಾಸ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುತ್ತದೆ. ಇದೇ ರೀತಿ ಇಡೀ ಜಗತ್ತನ್ನೇ ಒಂದು ಮಾಡುತ್ತದೆ ಎಂದು ಹೇಳಿದರು.

Advertisement

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಮುಂದಾಳತ್ವದಲ್ಲಿ 3 ಲಕ್ಷ ಮಂದಿ ಯೋಗಾಭ್ಯಾಸ ಮಾಡಿದರು. ದೆಹಲಿಯಲ್ಲಿ ಎನ್‌ಡಿಎ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್‌ ಕೋವಿಂದ್‌, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 77 ಸಾವಿರ ಮಂದಿ ಪಾಲ್ಗೊಂಡಿದ್ದ ಈ ಯೋಗ ದಿನಾಚರಣೆಗೆ ಚಾಲನೆ ಕೊಟ್ಟವರು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ. ಇನ್ನು ದೆಹಲಿಯ ವಿವಿಧ ರಾಯಭಾರ ಕಚೇರಿಗಳ ರಾಯಭಾರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪಾಲ್ಗೊಂಡಿದ್ದರು. ಇನ್ನು ಗಡಿಯಾಚೆ ಲಂಡನ್‌, ನ್ಯೂಯಾರ್ಕ್‌, ಬೀಜಿಂಗ್‌, ಪ್ಯಾರಿಸ್‌, ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ ಜಗತ್ತಿನ ಹಲವಾರು ನಗರಗಳಲ್ಲಿ ಯೋಗಭ್ಯಾಸ ನಡೆಯಿತು.

– ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
– ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಮೋದಿ ಯೋಗ
– 51 ಸಾವಿರ ಮಂದಿ ಜತೆ ಯೋಗಾಸನ ಮಾಡಿದ ಪ್ರಧಾನಿ
– ಗುಜರಾತ್‌ನ ಅಹ್ಮದಾಬಾದ್‌ನಲ್ಲಿ 3 ಲಕ್ಷ ಮಂದಿ ಭಾಗಿ
– ಬಾಬಾ ರಾಮ್‌ದೇವ್‌, ಅಮಿತ್‌ ಷಾ ಉಪಸ್ಥಿತಿ

Advertisement

Udayavani is now on Telegram. Click here to join our channel and stay updated with the latest news.

Next