Advertisement

ಜಿಲ್ಲೆಯಲ್ಲಿ ಕಾರ್ಯಕರ್ತರೇ ಸೈನಿಕರು: ನಿಖಿಲ್‌

07:23 AM Mar 20, 2019 | |

ಮಳವಳ್ಳಿ: ಜಿಲ್ಲೆಯಲ್ಲಿ ಕಾರ್ಯಕರ್ತರೇ ನಮ್ಮ ಸೈನಿಕರು. ಹಾಗಾಗಿ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಅವರು ಬಂದು ಪ್ರಚಾರ ಮಾಡಿದರೂ ನನಗೆ ಭಯ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಲತಾ ಅವರ ಪರ ಯಾರೇ ಬಂದು ಪ್ರಚಾರ ಮಾಡಿದರೂ ನಾನು ಹೆದರೋಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು.

ಕಾಂಗ್ರೆಸ್‌ ನಾಯಕರು ನಮ್ಮ ಪರ: ಚುನಾವಣೆಯಲ್ಲಿ ಸುಮಲತಾಗೆ ಕಾಂಗ್ರೆಸ್‌ ನಾಯಕರು ಬೆಂಬಲ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ನಿಖಿಲ್‌, ಈಗಾಗಲೇ ನಾನೂ ಎಲ್ಲಾ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರ ಬೆಂಬಲವನ್ನೂ ಕೋರಿದ್ದೇನೆ. ಎಲ್ಲರೂ ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ. ಎಲ್ಲಾ ಕಾಂಗ್ರೆಸ್‌ ನಾಯಕರು ನಮ್ಮ ಪರ ಇದ್ದಾರೆ.

ಆ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಮೈತ್ರಿ ಧರ್ಮ ಪಾಲಿಸಬೇಕಿರುವುದರಿಂದ ಮುಂದೆ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲುವರೆಂಬ ವಿಶ್ವಾಸವಿದೆ ಎಂದು ಉತ್ತರಿಸಿದರು. ಸಾಮಾಜಿಕ ಜಾಲ ತಾಣದಲ್ಲಿ ಸುಮಲತಾ ಪರವಾಗಿ ನಿಂತಿರುವ ದರ್ಶನ್‌-ಯಶ್‌ಗೆ ಜೆಡಿಎಸ್‌ ಕಾರ್ಯಕರ್ತರು ಗೋ ಬ್ಯಾಕ್‌ ಎನ್ನುತ್ತಿರುವ ಬಗ್ಗೆ ಗೋ ಬ್ಯಾಕ್‌ ವಿಚಾರ ಅಭಿಯಾನದ ರೀತಿ ಇತ್ತೀಚೆಗೆ ಆರಂಭವಾಗಿದೆ.

ಜಾಲತಾಣದಲ್ಲಿರೋ ನಾಲ್ಕು ಜನ ಗೋ ಬ್ಯಾಕ್‌ ಎಂದರೆ ಚಿತ್ರಣ ಬದಲಾಗೋಲ್ಲ. ಹಾಗಾಗಿ ಯಾರೂ ಯಾರಿಗೂ ಗೋ ಬ್ಯಾಕ್‌ ಅನ್ನೋದು ಸರಿಯಲ್ಲ. ಜಿಲ್ಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಗೋ-ಬ್ಯಾಕ್‌ ಘೋಷಣೆ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿರುವ ಸುಮಲತಾ ಪರ ನಿಂತಿರುವ ದರ್ಶನ್‌ ಹಾಗೂ ಯಶ್‌ ಅವರ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು ಗೋ-ಬ್ಯಾಕ್‌ ಘೋಷಣೆ ಕೂಗಿದರು. ನಿಖಿಲ್‌ ಎದುರಿನಲ್ಲೇ ನಟರಿಗೆ ಗೋ-ಬ್ಯಾಕ್‌ ಘೋಷಣೆ ಕೂಗಿ ಹೊಸ ಅಭಿಯಾನ ನಡೆಸಿದರು. 

ಕಲಾ ತಂಡಗಳ ಮೆರುಗು: ಹಲಗೂರಿನಲ್ಲಿ ನಡೆದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ರೋಡ್‌ ಷೋಗೆ ಕಲಾತಂಡಗಳು ಸಾಥ್‌ ನೀಡಿದವು. ನೂರಾರು ಬೈಕ್‌ ರ್ಯಾಲಿ ಜೊತೆಗೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಿದವು.

ದೇವೇಗೌಡರೇ ನಿಜವಾದ ಹೀರೋ: ಡಾ.ಕೆ.ಅನ್ನದಾನಿ
ಮಳವಳ್ಳಿ:
ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೋ, ದೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ದೊಡ್ಡ ಮತ್ತು ನಿಜವಾದ ಹೀರೋ ಎಂದು ಶಾಸಕ ಡಾ.ಕೆ.ಅನ್ನದಾನಿ ಬಣ್ಣಿಸಿದರು. ತಾಲೂಕಿನ ದಳವಾಯಿ ಕೋಡಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿ, ಸಿನಿಮಾ ನಟರು ಎಂದಿಗೂ ನಿಜಜೀವನದ ಹೀರೋಗಳಲ್ಲ.

ವಾಸ್ತವ ಬದುಕಿನಲ್ಲಿ ನಿಜವಾಗಿ ದೇವೇಗೌಡರೇ ಹೀರೋ. ಅದು ರೈತರ ಹೀರೋ. ಹಾಗಾಗಿ ಜಿಲ್ಲೆಗೆ ಯಾವುದೇ ಹೀರೊಗಳು ಬಂದರೂ ಏನೂ ಆಗೋದಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡರು ಮೈತ್ರಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳಲಿದ್ದಾರೆ ಅನ್ನೋ ವಿಶ್ವಾಸ ಇದೆ. ನಾವು ಎಚ್ಚರಿಕೆಯಿಂದ ಚುನಾವಣೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

ತಂದೆ, ತಾತನ ಹೆಸರಲ್ಲಿ ನಿಖಿಲಗ ಮತಯಾಚನೆ
ಮಳವಳ್ಳಿ:
ನನಗೊಂದು ಅವಕಾಶ ಕೊಡಿ. ನನ್ನ ತಾತ ದೇವೇಗೌಡರು ಹಾಗೂ ತಂದೆ ಕುಮಾರಸ್ವಾಮಿ ಅವರ ಹಾದಿಯಲ್ಲೇ ನಾನೂ ನಡೆಯುತ್ತೇನೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಹಲಗೂರಿನಲ್ಲಿ ಮತಯಾಚಿಸಿ ಮಾತನಾಡಿ, ನನ್ನ ಸ್ವಾರ್ಥಕ್ಕಾಗಿ ರಾಜಕೀಯ ಪ್ರವೇಶ ಮಾಡಿಲ್ಲ. ನಮ್ಮ ಪಕ್ಷದ ಮುಖಂಡರು ತೆಗೆದುಕೊಂಡ ತೀರ್ಮಾನಕ್ಕೆ ಬೆಲೆ ಕೊಟ್ಟು ಅಭ್ಯರ್ಥಿ ಆಗಿದ್ದೇನೆ. ಜನರ ಮಧ್ಯೆ ಇದ್ದು ಅವರ ಪ್ರೀತಿ-ವಿಶ್ವಾಸ ಸಂಪಾದಿಸಲು ಬಂದಿದ್ದೇನೆ. ಜಿಲ್ಲೆಯ ಜನರ ಋಣ ನಮ್ಮ ಕುಟುಂಬದ ಮೇಲಿದೆ. ನನ್ನ ತಾತ ಹಾಗೂ ತಂದೆಯವರ ಹಾದಿಯಲ್ಲಿ ನಡೆದು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ಕುಮಾರಸ್ವಾಮಿ ಮಗ ಅಂತ ಮತ ಕೊಡಿ. ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನನ್ನ ತಂದೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮಂಡ್ಯ ಜನರು ಏಳಕ್ಕೆ ಏಳು ಸ್ಥಾನ ಕೊಟ್ರಿ. 2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಕುಮಾರಸ್ವಾಮಿಗೆ ಮಳವಳ್ಳಿ ಜನ ದೇವೇಗೌಡರ ಮಗ ಅಂತ ಮತ ಕೊಟ್ರಿ. ಈಗ ಕುಮಾರಸ್ವಾಮಿ ಮಗ ಅಂತ ನನಗೆ ಜಿಲ್ಲೆಯ ಮತದಾರರು ಮತ ಕೊಡುವಂತೆ ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next