Advertisement

ಎದ್ದೇಳುತ್ತಿಲ್ಲ ಏಳು ಉದ್ಯಾನಗಳ ಕಾಮಗಾರಿ: ಅಂಗೈಯಲ್ಲೇ ಆಕಾಶ ತೋರಿಸಿದ ಲಾಲ್‌ಬಾಗ್‌ ಏಜೆನ್ಸಿ

02:44 PM Jul 25, 2022 | Team Udayavani |

ಸಿಂಧನೂರು:ಇತಿಹಾಸದಲ್ಲೇ ಮೊದಲ ಬಾರಿಗೆ ನಗರ ಯೋಜನಾ ಪ್ರಾಧಿಕಾರದಿಂದ ನಗರದ 7 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು 1.99 ಕೋಟಿ ರೂ.ಗಳ ಯೋಜನೆ ಕೈಗೊಂಡು ವರ್ಷ ಗತಿಸಿದರೂ ಪ್ರಗತಿ ಸಾಧ್ಯವಾಗಿಲ್ಲ.

Advertisement

90 ದಿನಗಳ ಕಾಲಾವಕಾಶ ಟೆಂಡರ್‌ ಹಂಚಿಕೆಯಾಗಿದ್ದರೂ ಗುತ್ತಿಗೆ ವಹಿಸಿಕೊಂಡ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆ ದಿ|ನರ್ಸರಿಮೆನ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಲಾಲ್‌ಬಾಗ್‌ ಅಂಗೈನಲ್ಲೇ ಆಕಾಶ ತೋರಿಸಿದೆ. ಬಹುನಿರೀಕ್ಷಿತ ಯೋ ಜನೆಯನ್ನು 2021 ಮಾರ್ಚ್‌ 3ರಂದು ನಿರ್ವಹಿಸಲು ಕಾರ್ಯಾದೇಶ ಕೊಟ್ಟರೂ ಅನುಷ್ಠಾನಕ್ಕೆ ಬಂದಿಲ್ಲ.

ಫಿಪ್ಟಿ ಪರ್ಸೆಂಟ್ಹಣ ಡ್ರಾ: ಯೋಜನೆಗೆ ಸಂಬಂಧಿಸಿ 7 ಉದ್ಯಾನಗಳಿಗೆ ಪ್ರತ್ಯೇಕವಾಗಿ ಅಂದಾಜು ವೆಚ್ಚ ನಿಗದಿಪಡಿಸಲಾಗಿತ್ತು. ಕೆಲಸ ನಿರ್ವಹಿಸಲು ಕಾರ್ಯಾದೇಶ ಕೊಟ್ಟ ದಿನವೇ ಶೇ.50 ಮೊತ್ತ ಎಂದರೆ 98,36,279 ರೂ.ಗಳನ್ನು ಸಂಸ್ಥೆಗೆ ಪಾವತಿಸಲಾಗಿದೆ. ಕೆಲಸ ಆರಂಭಿಸುವುದಕ್ಕೆ ಸಿಕ್ಕ ಅನುದಾನ ಬಳಸಿ ಶೇ.50 ಕೆಲಸ ನಿರ್ವಹಿಸಬೇಕಾದ ಸಂಸ್ಥೆ ಕೈ ಕೊಟ್ಟಿದೆ. ಕೇವಲ 5 ಉದ್ಯಾನಗಳಲ್ಲಿ ಕಾಲಂ ಹಾಕಿ ಪಿಲ್ಲರ್‌ ಎಬ್ಬಿಸಲಾಗಿದೆ. ಕನಿಷ್ಠ ಉದ್ಯಾನದ ಜಾಗ ಕೂಡ ಸಮತಟ್ಟು ಮಾಡಿಲ್ಲ. ಆದರೆ ಮತ್ತೂಮ್ಮೆ ಇದೀಗ ಶೇ.30ಕಾಮಗಾರಿ ಎಂದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ.

ಯೋಜನೆಗೆ ಭಾರಿ ಮಹತ್ವ: ಲಾಲ್‌ಬಾಗ್‌ ಮೂಲದ ಸಂಸ್ಥೆ ನೀಡಿದ ಅಂದಾಜು ನೀಲನಕ್ಷೆ ಉದ್ಯಾನವೊಂದರ ಸಂಪೂರ್ಣ ಆಕಾರ ರೂಪಿಸುವ ಯೋಜನೆ ಒಳಗೊಂಡಿದೆ. ಮೊದಲು ಉದ್ಯಾನ ಸಮತಟ್ಟು ಮಾಡುವುದು. ನಂತರ ಗೇಟ್‌ ಅಳವಡಿಕೆ, ಸುತ್ತಲೂ ಚೈನ್‌ ಮೆಸ್‌ ಅಳವಡಿಕೆ, ಗಿಡ ಹಾಕುವುದು, ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ, ಸೋಲಾರ್‌ ಲೈಟ್‌ ಅಳವಡಿಕೆ, ವಾಯು ವಿಹಾರಿಗಳಿಗೆ ಬೆಂಚ್‌ ಹಾಕುವುದು, ಮಕ್ಕಳಿಗೆ ಆಟಿಕೆ ಸಾಮಗ್ರಿ ಹಾಕುವುದನ್ನು ಈ ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದೆ. ಅಚ್ಚರಿ ಎಂದರೆ ಪಿಲ್ಲರ್‌ ಹಾಕಿದ ವ್ಯಕ್ತಿಗಳು ವಾಪಸ್‌ ತಿರುಗಿಯೂ ನೋಡಿಲ್ಲ.

ನೋಟಿಸ್ಗಳ ಮೊರೆ: 1.99 ಕೋಟಿ ರೂ.ಗಳ ಉದ್ಯಾನ ಅಭಿವೃದ್ಧಿ ಯೋಜನೆ ಕೊಪ್ಪಳ ಸಂಸಧ ಸಂಗಣ್ಣ ಕರಡಿ, ಶಾಸಕ ವೆಂಕಟರಾವ್‌ ನಾಡಗೌಡ ಅವರ ಗಮನಕ್ಕೂ ಇದೆ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟ ಬಳಿಕ ಪಿಡಬ್ಲ್ಯೂಡಿ ಇಲಾಖೆಯಿಂದ ಆಗಿರುವ ಕೆಲಸದ ಅಂದಾಜು ಪ್ರತಿ ಪಡೆಯಲಾಗಿದೆ. ಎಇಇ ಸಿ.ಎಸ್‌. ಪಾಟೀಲ್‌ ಅವರು ದಾಸ್ತಾನು ಮಾಡಿಟ್ಟಿರುವ ಸಾಮಗ್ರಿ ಒಳಗೊಂಡು ಬಿಡುಗಡೆಯಾದ ಮೊತ್ತದಲ್ಲಿ ಶೇ.30 ಹಣ ಖರ್ಚಾಗಿದೆ ಎಂಬ ವರದಿ ಕೊಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Advertisement

ನಗರ ಯೋಜನಾ ಪ್ರಾಧಿಕಾರ ಕಾರ್ಯದರ್ಶಿ 2021 ಅಕ್ಟೋಬರ್‌ 1 ರಂದು ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಿಲ್ಲವೆಂದು ನೋಟಿಸ್‌ ಕೊಟ್ಟಿದ್ದಾರೆ. ನಂತರದಲ್ಲಿ ಪ್ರಾಧಿಕಾರದ ಎರಡು ನೋಟಿಸ್‌ ಜಾರಿಯಾಗಿವೆ. ನೋಟಿಸ್‌ ಮೇಲೆ ನೋಟಿಸ್‌ ಕೊಡುತ್ತಿರುವ ನಗರ ಯೋಜನಾ ಪ್ರಾಧಿಕಾರವೇ ಕಾಗದ ಪತ್ರದಲ್ಲಿ ತನ್ನ ಅಸ್ತಿತ್ವ ತೋರಲು ಆರಂಭಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

ಕೆಲಸಕ್ಕೂಅನುದಾನಕ್ಕೂ ತಾಳೆಯಿಲ್ಲ

ನಗರ ಯೋಜನಾ ಪ್ರಾಧಿಕಾರದಿಂದ ಅನುದಾನ ಪಡೆದಿರುವ ಏಜೆನ್ಸಿ ಇದುವರೆಗೆ ಶೇ.30 ಹಣ ಖರ್ಚು ಮಾಡಿಲ್ಲ ಎಂದು ಅಂದಾಜಿಸಲಾಗಿದೆ. ಆದರೆ ಶೇ.50 ಹಣ ಕೊಡಲಾಗಿದೆ. ಗುತ್ತಿಗೆ ವಹಿಸಿಕೊಂಡು ಮುಂದಿನ ಕೆಲಸ ಮಾಡಲು ಶೇ.30 ಅಂದರೆ, 59 ಲಕ್ಷ ರೂ. ಅನುದಾನ ಕೊಡುವಂತೆ ಬೇಡಿಕೆ ಮಂಡಿಸಿದೆ. ಪ್ರಾಧಿಕಾರದವರು ಕೆಲಸ ಆಗಿಲ್ಲವೆಂದು ಗೋಳಿಡುತ್ತಿದ್ದರೆ, ಏಜೆನ್ಸಿ ಮಾತ್ರ ಹಣ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎನ್ನುವ ಮನವಿ ಮಾಡುತ್ತಿದೆ.

ನಗರದಲ್ಲಿ 7 ಉದ್ಯಾನಗಳ ಅಭಿವೃದ್ಧಿಗೆ ಸಂಬಂಧಿಸಿ ನಾನು ಬರುವ ಮುನ್ನವೇ ಒಂದು ನೋಟಿಸ್‌ ಕೊಟ್ಟಿದ್ದಾರೆ. ನಿಯಮದ ಪ್ರಕಾರ ಮತ್ತೆ 2 ನೋಟಿಸ್‌ ಜಾರಿಯಾಗಿವೆ. ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮಧ್ವರಾಜ್ಆಚಾರ್‌, ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಸಿಂಧನೂರು

ನನಗೆ ಗೊತ್ತಿರುವ ಹಾಗೆ ನಿಗದಿತ 90 ದಿನಗಳಲ್ಲಿ ಅವರು 7 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕಿತ್ತು. ಒಪ್ಪಂದದ ಪ್ರಕಾರ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಇಲಾಖೆ ಸೂಚನೆ ಪ್ರಕಾರ ಮುಂದಿನ ಕ್ರಮ ಅನಿವಾರ್ಯ. ಶರಣಪ್ಪ, ಸದಸ್ಯ ಕಾರ್ಯದರ್ಶಿಗಳು, ನಗರ ಯೋಜನಾ ಪ್ರಾಧಿಕಾರ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next