ಬ್ರಹ್ಮನು ತಾನು ಸೃಷ್ಟಿಸಿದ ಚೆಲುವಾದ ವಸ್ತುವನ್ನು ಕಂಡು ಮೈಮರೆತು ಹೂ ಎಂದು ಉಸಿರಲ್ಲೇ ಉದ್ಗರಿಸಿದನಂತೆ. ಅದಕ್ಕೇ ಹೂವೆಂಬ ಹೆಸರಾಯಿತಂತೆ. ಹೀಗೆಂದವರು ನಾದಕವಿ ಬೇಂದ್ರೆಯವರು. ಅದಕ್ಕೇ ಕನ್ನಡದ ಹೂವು ಇಂಗ್ಲಿಷಿನ ಫ್ಲವರಿನಷ್ಟು ಭಾರವಿಲ್ಲವೋ ಏನೋ! ಜಿ. ಎಸ್. ಶಿವರುದ್ರಪ್ಪನವರ ನೋಡು ಇದೋ ಇಲ್ಲರಳಿ ನಗುತ್ತಿದೆ ಏಳು ಸುತ್ತಿನ ಮಲ್ಲಿಗೆ, ಇಷ್ಟು ಹಚ್ಚನೆ ಹಸಿರ ಗಿಡದಿ ಎಂತು ಮೂಡಿತೋ ಬೆಳ್ಳಗೆ ಕವನದ ಕಲ್ಪನೆಯಲ್ಲಿ ಧ್ಯಾನ ಮೌನವೇ ಅರಳಿದಂತೆ ನಗುವ ಮಲ್ಲಿಗೆಯ ಪಕಳೆಗಳ ದೈವಿಕ ಪರಿಮಳ ಶಾಶ್ವತವಾದುದು. ಬೇಂದ್ರೆಯವರ ಹುಡಿಯು ಅರಳಿ ಹೂವು ಆಗಿ ಚಿಟ್ಟೆಯಂತೆ ಕಾಂಬುದೋ ಕುಣಿದು ದಣಿದ ಚಿಟ್ಟೆ ಪಕ್ಕ ಹೂವು ಅನಿಸಿಕೊಂಬುದೋ ಎಂಬ ಸಾಲುಗಳಲ್ಲಿ ಗಿಡದಲ್ಲಿ ಕುಳಿತು ಕುಳಿತು ಸಾಕಾಗಿ ಹಾರಿ ಹೂವೇ ಚಿಟ್ಟೆಯಾಯಿತಾ! ಅಲ್ಲಾ, ಕುಣಿದು ಕುಣಿದು ಸಾಕಾಗಿ ಚಿಟ್ಟೆಯೇ ಗಿಡದಲ್ಲಿ ಕುಳಿತು ಹೂವಾಯಿತಾ! ಎಂಬಲ್ಲಿ ಒಂದರಲ್ಲಿ ಇನ್ನೊಂದನ್ನು ಕಾಣುವ ಅದ್ಭುತವಾದ ಕಲ್ಪನೆಯ ಒಳಗಣ್ಣ ಮಿಂಚಿದೆ.
ಕನ್ನಡ ಸಾಹಿತ್ಯ ಹಾದಿಯ ತುಂಬ ಹೂಗಳದ್ದೇ ಸುಗಂಧ. ಹೆಣ್ಣು ಹಾಗೂ ಹೂವಿನದ್ದು ಬಿಡಲಾಗದ ಬಂಧ. ಪಂಪನ ಆದಿಪುರಾಣದ ಹನ್ನೊಂದನೆಯ ಆಶ್ವಾಸದ ಭರತನ ದಿಗ್ವಿಜಯ ಯಾತ್ರೆಯು ಹೂಬಾಣಪಾಣಿ ಮನ್ಮಥನ ಪುಷ್ಪ ಮೆರವಣಿಗೆಯ ರಾಗಯಾತ್ರೆ. ದಿಗ್ವಿಜಯಕೆ ಹೊರಟ ಸೇನೆಯು ಪುಷೊದ್ಯಾನದ ಬಳಿ ಚಲನೆ ಮರೆತು ನಿಂತುಬಿಡುತ್ತದೆ. ಆರೂ ಋತುಗಳು ಏಕಕಾಲದಲ್ಲೇ ಮೇಳೈಸಿದಂಥ ಹೂತೋಟದಲಿ ಅಳಿ-ಗಿಳಿ-ಕೋಗಿಲೆಗಳ ಭೋಗರಾಗ. ಮೌನದಲ್ಲೇ ಅರಳಿದ ಸಂಪಗೆ, ಕೇದಗೆ, ಕೆನ್ನೈದಿಲೆ, ಸುರಹೊನ್ನೆ ಅಸಂಖ್ಯಾತ ಹೂಗಳು ಭರತನ ಲಲನಾಮಣಿಯರ ಕಾಲ್ಗೆಜ್ಜೆಯ ಝಣತ್ಕಾರದಲ್ಲಿ ಅವರ ಅಲಂಕಾರ ವಿಲಾಸದ ಸಡಗರಕ್ಕೆ ನಲುಗಿ ಹೋಗುತ್ತವೆ. ಇದು ರಾಜಪ್ರಭುತ್ವ ಕಾಲದ ಸ್ತ್ರೀಯರ ಸ್ಥಿತಿಗೆ ಹಿಡಿದ ಚಾರಿತ್ರಿಕ ಕೈಗನ್ನಡಿಯೂ ಹೌದು. ಪ್ರತಿಹಾರಿಯು ತಂದ ಕಮಲವನ್ನು ಬಿಡಿಸಿದಾಗ ನಿನ್ನೆ ಸೂರ್ಯಾಸ್ತ ಕಾಲದಲಿ ಮುಚ್ಚಿ ಅದರೊಳಗೆ ಸಿಕ್ಕು ಉಸಿರುಕಟ್ಟಿ ಸತ್ತ ದುಂಬಿಯ ಹೆಣವು ಕೆಳಗುರುಳಿದುದೇ ವಜ್ರಬಾಹು ರಾಜನ ವಿರಕ್ತಿಗೆ ಕಾರಣವಾಗುತ್ತದೆ. ಇನ್ನು ಹರಿಹರನ ಪುಷ್ಪ ರಗಳೆಯಂತೂ ಹಂಪೆಯ ವಿರೂಪಾಕ್ಷನ ಸಿರಿಮುಡಿಯ ಸಿಂಗಾರಕ್ಕಾಗಿಯೇ ಹೂಬಿಟ್ಟ ಶಾಂತ ಅಧ್ಯಾತ್ಮವನ.
ಬೆಳ್ಳಿಮುಖದವಳು, ಬಂಗಾರ ಮೂಗವಳು, ಕೆಂಪು ಜಡೆಯವಳು ನಾನ್ಯಾರು? ಒಗಟಿನ ಮೊಗ್ಗು ತುಟಿದೆರೆದು ನಗುತ ಘಮಘಮ ಘಮಲಲ್ಲಿ ಎದೆಗೆ ಗಮಿಸುವ ದಿವ್ಯಚೆಲುವೆಯಲ್ಲವೇ ಪಾರಿಜಾತ? “ಪಾರಿಜಾತವೇ ಅರಳರಳು ಸಂಜೆ ಸಮೀಪಿಸಿತು. ಹವಳದ ಬತ್ತಿಯ ಮುತ್ತಿನ ಜ್ಯೋತಿಯ ಪರಿಮಳ ದೀಪಂಗಳ ಬೆಳಗು’ ಕವಿ ಸೇಡಿಯಾಪು ಅವರ ಎದೆಯಲ್ಲಿ ಬೆಳಗಿದ ಪಾರಿಜಾತ ಸಾಲುಗಳಿವು.
ಒಮ್ಮೆ ಸತ್ಯಭಾಮೆಯು ಕೃಷ್ಣನೊಡನೆ ಇಂದ್ರನ ನಂದನವನದಲ್ಲಿ ಸುತ್ತಾಡುತ್ತಿರುತ್ತಾಳೆ. ಭೂಮಿಗಿದೇ ಮಳೆಬಿಲ್ಲೋ! ಎಂಬಂತೆ ಮೇಲಿನ ಲೋಕದಲ್ಲಿ ಬಣ್ಣಬಣ್ಣದ ಹೂಗಳು. ಎಲ್ಲವನ್ನೂ ಮೀರಿ ಹೃದಯಕ್ಕಂಟಿಕೊಳ್ಳುತ್ತಿರುವ ದಿವ್ಯವಾದ ಪರಿಮಳ ಬಂದುದಾದರೂ ಎಲ್ಲಿಂದ? ಎಂದು ನೋಡಿದರೆ ತಂಗಾಳಿಕೈಗಳು ಅಂಗೈಯಗಲದ ಹೂಗಳನ್ನು ಮರಗಳ ಮೈಯಿಂದ ಬಿಡಿಸಿ ಬೊಗಸೆಯಲಿ ತುಂಬಿ ಕೆಳಗೆಸೆಯುತ್ತಿವೆ! ಅತಿ ಉತ್ಕೃಷ್ಟವಾದ ಹೂವು ತನಗೇ ಬೇಕೆಂಬ ಆಸೆಯಾಯಿತು ಹೆಣ್ಣಿಗೆ. ಬೇರುಸಮೇತ ಕಿತ್ತು ಗರುಡನ ಮೇಲೆ ಹೊತ್ತೂಯ್ಯುವಾಗ “ನೀ ಕೊಡೆ ನಾ ಬಿಡೆ’ ಯುದ್ಧ ನಡೆದು ಕೊನೆಗೂ ಇಂದ್ರ- ಶಚಿಯರು ಸೋತು ತಲೆಬಾಗಲೇಬೇಕಾಯಿತು. ಸತ್ಯಭಾಮೆಯು ಗಿಡವನ್ನು ದ್ವಾರಕೆಗೆ ತಂದು ಮನೆಯಂಗಳದಲ್ಲಿ ನೆಟ್ಟು, ನಿತ್ಯಹೂಕೊಯ್ದು ಹೆಣೆದು ಮುಡಿದುಕೊಳ್ಳುತ್ತಾಳೆ. ರುಕ್ಮಿಣಿಗೆ ಇದರ ಮಾಲೆಯನ್ನು ಕೊಟ್ಟು ಹೊಟ್ಟೆಯುರಿಸಲೇಬೇಕೆಂಬ ತವಕದಲ್ಲೊಮ್ಮೆ ಅವಳ ಮನೆಗೆ ಹೋದರೆ ಆಕೆಯ ತಲೆಯಲ್ಲೂ ಬಿದ್ದುಬಿದ್ದು ನಗುತ್ತಿದೆ ಪಾರಿಜಾತಮಾಲೆ! ಇದೇನಾಶ್ಚರ್ಯ! ಎಂದು ನೋಡಿದರೆ ಈಚೆ ಅಂಗಳದಲ್ಲಿ ನೆಟ್ಟ ಪಾರಿಜಾತ ಗಿಡವು ಆಚೆ ಬಾಗಿ ಹೂವು ಸುರಿಸಿದೆ, ಹೊಕ್ಕಮನೆಯನ್ನೇ ಉದ್ಧಾರ ಮಾಡುವ ಹೆಣ್ಣುಮಗಳಂತೆ. ಹೆಣ್ಣಿನಲ್ಲಿ ಮತ್ಸರವೆದ್ದರೆ ಉಳಿಗಾಲವುಂಟೆ? ಕೈಯಲ್ಲಿದ್ದ ಹೂಮಾಲೆಯನ್ನು ಸತ್ಯಭಾಮೆಯು ಹೊಸಕಿಬಿಟ್ಟಳು. ಅಂಗೈಯಗಲವಿದ್ದ ಹೂವುಗಳಿಗೀಗ ಉಗುರುಗಾತ್ರ. ಹೂಮುಂಜಾನೆಯ ಬಳಿಕ ಬಿಸಿನೀರಿಗೆ ಹಾಕಿದಂತೆ ಬಾಡಿ ನಲುಗುತ್ತವೆ, ಮಾಲೆ ಕಟ್ಟಲಾಗದು. ಕ್ಷೀರಸಾಗರದಿಂದೆದ್ದ ಪಾರಿಜಾತ ಪುರಾಣವಿದು. ಮಹಾಭಾರತದ ಅರಣ್ಯಪರ್ವದಲ್ಲಿ ತನ್ನೊಲವಿನ ದ್ರೌಪದಿ ಆಸೆಪಟ್ಟಳೆಂದು ಪುಷ್ಪ ತರಲು ಕುಬೇರನವನಕ್ಕೆ ಹೋಗುವಾಗ ಭೀಮನು ದಾರಿಗೆ ಅಡ್ಡವಾಗಿದ್ದ ಹನುಮಂತನ (ಅಣ್ಣನ) ಬಾಲವನ್ನು ಎತ್ತಲಾಗದೆ ಸೋಲುವ ಸ್ವಾರಸ್ಯದ ಕತೆ ಸೌಗಂಧಿಕಾಪುಷ್ಪಹರಣ.
“ಪುತ್ತಕ್ಕ’ ಎಂಬ ತುಳುಪಾಡ್ದನದಲ್ಲಿ ಏಳು ಅರಸುಕುವರರು ತಮ್ಮ ಮುದ್ದಿನ ತಂಗಿ ಪುತ್ತಕ್ಕಳಿಗೆ ಮುತ್ತಿನ ಜಡೆಜಲ್ಲಿ ಹಾಕಲೆಂದು ಏಳು ಕಡಲಿನಾಚೆ ಹೋಗುತ್ತಾರೆ. ಆಗ ಕೊಡಬಾರದಷ್ಟು ಪೀಡೆ ಕೊಟ್ಟ ಅತ್ತಿಗೆಯರು ತಮ್ಮ ಗಂಡಂದಿರು ಬರುವಾಗ ಸಿಂಗರಿಸಿಕೊಳ್ಳಬೇಕೆಂದು ಪುತ್ತಕ್ಕನನ್ನು ಮುಂದೆಮಾಡಿಕೊಂಡು ಮಲೆಕಾಡಿಗೆ ಹೋಗುತ್ತಾರೆ. ಜಾತಿಸಂಪಗೆ ನೀತಿಕೇದಗೆಯ ಆಗಸದೆತ್ತರದ ಮರಕ್ಕೆ ಕಂಚಿನ ಏಣಿ ಇಟ್ಟು ಪುತ್ತಕ್ಕನನ್ನು ಹತ್ತಿಸುತ್ತಾರೆ. ಏಳು ಬೆಳ್ಳಿಯ ಹೂಬುಟ್ಟಿ ತುಂಬ ಹೂಕೊಯ್ದು ತನಗೊಂದು ಬುಟ್ಟಿ ಬೇಕೆನ್ನುವಾಗ ಅತ್ತಿಗೆಯರು ಏಣಿಸಮೇತ ಹೊರಟು ಹೋಗುತ್ತಾರೆ. ಪುತ್ತಕ್ಕನ ಕಣ್ಣೀರ ಹುಳಿರುಚಿಗೆ ಮರುಳಾದ ಎರಡು ಹುಲಿಗಳು ಅವಳನ್ನು ಎಳೆದು ಹಾಕಿ ತಿನ್ನುವಾಗ ತನ್ನ ಬಲದ ಕಿರುಬೆರಳನ್ನು ಬಿಟ್ಟುಬಿಡೆಂದು ಬೇಡುತ್ತಾಳೆ. ಆ ಕಿರುಬೆರಳನ್ನು ಅರಸಿನದ ಕೋಡೆಂದುಕೊಂಡು ಬ್ಯಾಡಜ್ಜಿಯೊಬ್ಬಳು ಒಯ್ದು ಒಡೆದ ಮಡಕೆಯಲ್ಲಿಡುತ್ತಾಳೆ. ಕಿರುಬೆರಳ ಉಗುರೊಡೆದು ಪುತ್ತಕ್ಕ ಉದಯವಾಗುತ್ತಾಳೆ. ಮುತ್ತಿನ ಜಡೆಜಲ್ಲಿಗಾಗಿಯೇ ಹುಟ್ಟುವ ಮುತ್ತುಗದ ಕತೆ ಮರದ ಮೈತುಂಬ ಹೂಗಳು ಹಕ್ಕಿಯಂತೆ ರೆಕ್ಕೆಬಿಚ್ಚಿಕೊಳ್ಳುತ್ತವೆ. ಜನಪದ ಕತೆಯೊಂದರಲ್ಲಿ ತನ್ನ ಹಿಂಸೆಯಿಂದ ಸಾಯುವ ಚೆಲುವೆಯ ಹೆಣವು ಹೂತ ಜಾಗದಲ್ಲಿ ಕುಂಬಳಬಳ್ಳಿಯಾಗಿ ಮಾತಾಡಿದಾಗ ಹೆದರಿದ ಮಲತಾಯಿಯು ಕಿತ್ತೆಸೆಯುತ್ತಾಳೆ. ಅದು ಮೆಣಸಿನ ಗಿಡವಾಗಿ ಉರಿಮಾತಾಡಿದಾಗ ನದಿಗೆಸೆಯುತ್ತಾಳೆ. ನಾವೆಯಲ್ಲಿ ಬರುತ್ತಿದ್ದ ತಂದೆಯ ಕಣ್ಣಿಗೆ ಬಿದ್ದ ಕಮಲದ ಹೂವು ತಾನೇ ಅವನ ಮಗಳೆನ್ನುತ್ತದೆ, ಸುಖಾಂತ್ಯವಾಗುತ್ತದೆ. ಚಂದ್ರಶೇಖರ ಕಂಬಾರರ ಪುಷ್ಪರಾಣಿ ನಾಟಕದಲ್ಲಂತೂ ಹೆಣ್ಣು ಮರವಾಗಿ ಮೈತುಂಬ ಹೂಬಿಡುವ ಕಾವ್ಯಮಯ ಚೆಲುವಿಗೆ ಮೈಜುಮ್ಮೆಂದು ಮನವರಳುತ್ತದೆ.
“ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲಿಗೆ ಒಪ್ಪಿಸಲು ಬಂದಿರುವೆವು. ಕೊಳ್ಳಿರೀ ಮಗಳನ್ನು ನಮ್ಮ ಮನೆ ಬೆಳಕನ್ನು’ ಎಂದಿದ್ದಾರೆ ವಿ.ಸೀ.ಯವರು. ಅರಳಿ ಪುಷ್ಪವತಿಯರಾಗಿ ಇನ್ನೊಂದು ಮನೆ ಸೇರಿ ಬಳ್ಳಿ ಒಡಲಿನಲ್ಲಿ ಹೂಬಿಟ್ಟು ಕಾಯಿ ಹಣ್ಣಾಗಿ ಮಾಗುವ ಜೀವನಯಾನ ಹೆಣ್ಣಿನದ್ದು. ಅರೆಗಳಿಗೆ ಬಾಳಾದರೂ ಅರಳಿ ಬಾಡುವ ತನಕ ಕಾಣದ ಆಚೆಯ ಪರಿಮಳವನ್ನು ಈಚೆಗೆ ಸೂಸುವ ದೈವಿಕವಾದ ಹೂವುಗಳಂತೆ ಕ್ಷಣಿಕ ಯವ್ವನವಾದರೂ ನಿಸ್ವಾರ್ಥ ಬಾಳು. ಕೊನೆಗೆ ದೇವರ ಪಾದ. ಹೆಣ್ಣಿಲ್ಲದ ಮನೆ ಕಣ್ಣಿಲ್ಲದ ತನು. ಬಾಳೆಮೂತಿಯರಳಿ ಗೊನೆಬಿಟ್ಟ ಮೇಲೆ ಬಾಳೆ ಸಾಯುತ್ತದೆ. ಹೂವೆಂಬುದು ಬಾಳೆಯ ಹುಟ್ಟು ಬದುಕು ಸಾವಿನ ಸಂಕೇತವೂ ಆಗುತ್ತದೆ. ಜನಪದ ಸಾಹಿತ್ಯವಿರಲಿ ಶಿಷ್ಟ ಸಾಹಿತ್ಯವೇ ಇರಲಿ, ಹೆಣ್ಣಿನ ದೇಹವನ್ನು , ಮನಸ್ಸನ್ನು ಹೂವಿಗೆ ಹೋಲಿಸಿದೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಕವಿಪರಂಪರೆಯು ಶಿವನು ಗಂಗೆಯನು ತಲೆಯಲಿ ಹೊತ್ತಂತೆ ಹೂವು-ಹೆಣ್ಣುಗಳನ್ನು ಕಲಾತ್ಮಕವಾದ ಕವನಮೇನೆಯಲಿ ಹೊತ್ತು ಲೌಕಿಕದಿಂದ ಅಲೌಕಿಕ್ಕೆ ಸಾಗುತ್ತಲೇ ಇದೆ.
ಕಾತ್ಯಾಯಿನಿ ಕುಂಜಿಬೆಟ್ಟು