‘ತಾಯಿಯಂತೆ ಮಗಳು ನೂಲಿನಂತೆ ಸೀರೆ’ ಎಂಬಂತೆ ತಾಯಿಯ ಹಲವು ಗುಣಗಳು ನನಗೆ ರಕ್ತದಲ್ಲಿ ಬಂದಿವೆ.
ನನ್ನಮ್ಮ ಬಾಲ್ಯದಲ್ಲಿ ನನಗೆ ಮನೆಕೆಲಸಗಳನ್ನು ಮಾಡಲು ಕಲಿಸಿದನು. ಉದಾಸೀನ ತೋರದೆ ಮಾಡಿದ್ದರಿಂದ ಇವತ್ತು ನನಗೆ ಆ ಕೆಲಸಗಳನ್ನು ಮಾಡಲು ಕಷ್ಟವಾಗದು.
ಮದುವೆಗೆ ಮುಂಚೆ ಬೇಕಾದ ಎಲ್ಲಾ ಅಡುಗೆಗಳನ್ನು ಕಲಿಸಿದಳು ಇವತ್ತು 50 ಜನರಿಗೆ ಬೇಕಾದರೂ ಅಡುಗೆ ಮಾಡಬಲ್ಲೆ ಎಂಬ ಧೈರ್ಯ ನನಗಿದೆ. ಇದಕ್ಕೆ ಸ್ಫೂರ್ತಿ ನನ್ನಮ್ಮ. ಸಂಸಾರದಲ್ಲಿ ಸಮಸ್ಯೆಗಳು ಎದುರಾದಾಗ ಧೈರ್ಯ ತುಂಬಿ ಸಮಾಧಾನ ಪಡಿಸುವಳು.
ಐದು ವರ್ಷಗಳ ಹಿಂದೆ ನಾನು ಅವಳಿಗೋಸ್ಕರ ಅಮ್ಮ ನಿನ್ನ ಎದೆಯಾಳದಲ್ಲಿ ಎಂಬ ಹಾಡನ್ನು ಹಾಡಿ ಆಡಿಯೋ ರೆಕಾರ್ಡಿಂಗ್ ಮಾಡಿಸಿದೆ ಅದು ಅವಳಿಗೆ ಬಹಳ ಸಂತಸ ನೀಡಿದೆ. ನನ್ನಂತೆ ಮಗಳು ಕೂಡ ಹವ್ಯಾಸಿ ಹಾಡುಗಾರ್ತಿ ಆದಳಲ್ಲಾ ಎಂಬ ಹೆಮ್ಮೆ ಅವಳಿಗೆ.
ಕಳೆದ ವರ್ಷ ಅವಳ 70ನೇ ಹುಟ್ಟುಹಬ್ಬಕ್ಕೆ ಚಿನ್ನದ ಪದಕ ಉಡುಗೊರೆ ನೀಡಿದೆ. ಅದು ಅವಳಿಗೆ ಅತೀವ ಆನಂದವನ್ನುಂಟು ಮಾಡಿದೆ ಯಾಕೆಂದರೆ ಅಕ್ಷಯ ತೃತೀಯದ ದಿವಸ ಚಿನ್ನ ತೆಗೆಯಬೇಕೆಂಬುದು ಅವಳ ಬಹುವರ್ಷಗಳ ಕನಸಾಗಿತ್ತು
ಅವಳ ಹುಟ್ಟಿದ ದಿನ ಅದೇ ದಿನ ಬಂದದ್ದರಿಂದ ಅವಳ ಕನಸನ್ನು ನಾನು ನನಸು ಮಾಡಿದೆ. ಅವಳ ಆಸೆ ಪೂರೈಸಿದ ತೃಪ್ತಿ ನನ್ನದು.
ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ…. ‘ಮಾತೃದೇವೋಭವ’
– ಮಮತಾ ಕಿರಣ್, ಶಾಂತಿಗೃಹ, ಜೋಡು ಮಾರ್ಗ, ಬಂಟ್ವಾಳ.