ಮೈಸೂರು: ಒಂದು ಭಾಷೆಯಲ್ಲಿನ ಪದ ಪದವಾಗಿ ಉಳಿಯದೇ ಅದು ಪಾರಿಭಾಷಿಕವಾಗಿ ಇರಬೇಕು ಎಂದು ಹಿರಿಯ ವಿದ್ವಾಂಸ ಪ್ರೊ.ಆರ್.ವಿ.ಎಸ್.ಸುಂದರಂ ಹೇಳಿದರು. ಭಾರತೀಯ ಭಾಷಾ ಸಂಸ್ಥೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಮಾನಸ ಗಂಗೋತ್ರಿ ಆವರಣದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೀರ್ತನ ಸಾಹಿತ್ಯ: ಮಾರ್ಗ ಮತ್ತು ದೇಸಿ ಕುರಿತು 5 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮ್ಮತನ ಕಾಪಾಡಿ: ಮಾರ್ಗ ಮತ್ತು ದೇಸಿ ಎಂಬ ಪದ ಕೇವಲ ಕೀರ್ತನ ಸಾಹಿತ್ಯಕ್ಕೇ ಅರ್ಥೈಸುವಂತದ್ದಲ್ಲ. ಇಡೀ ಕನ್ನಡ ಸಾಹಿತ್ಯಕ್ಕೆ ಅರ್ಥೈಸುವಂತಹದ್ದು. ಶೆರ್ಡನ್ ಪೊಲಾಕ್ ಹೇಳಿದಂತೆ ತಮಿಳಿಗರು ತಮಿಳಿಗಾಗಿ ಸಾಹಿತ್ಯ ಬರೆಯುತ್ತಾರೆ. ಆದರೆ, ಕನ್ನಡಿಗರು ಕನ್ನಡಕ್ಕಾಗಿ ಬರೆಯುವುದಿಲ್ಲ. ಹೀಗಾಗಿ, ನಾವು ನಮ್ಮ ತನವನ್ನು ಕಾಪಾಡಿಕೊಂಡು, ಅದರೊಂದಿಗೆ ಭಾರತೀಯ ಸಿದ್ಧಾಂತ ಸಮನ್ವಯಗೊಳಿಸಬೇಕು ಎಂದರು.
ಕವಿರಾಜಮಾರ್ಗ ಉತ್ತಮ ಕೃತಿ: ನಮಗೂ ಭಾರತೀಯತೆಗೂ ಕೊಡುಗೆಯಾಗುವ ಸಾಹಿತ್ಯ ಕೃತಿ ರಚಿಸಬೇಕು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕವಿರಾಜ ಮಾರ್ಗ ಕೃತಿ. 9ನೇ ಶತಮಾನದಲ್ಲಿ ಪ್ರಪಂಚದ ಯಾವುದೇ ಭಾಷೆಗಳಲ್ಲಿ ಕವಿರಾಜ ಮಾರ್ಗದಂತಹ ಮತ್ತೂಂದು ಕೃತಿ ಹೊರಬಂದಿಲ್ಲ. ಇದನ್ನು ಗಮನಿಸಿದರೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಇರುವ ಪ್ರಾಚೀನತೆ ಮತ್ತು ವೈಶಿಷ್ಟ ತಿಳಿಯಬಹುದಾಗಿದೆ ಎಂದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್, ಇಂದಿನ ತಲೆಮಾರು ಪ್ರಾಚಿನ ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಕನ್ನಡ ಭಾಷೆಯ ಶಾಸ್ತ್ರೀಯ ಅಧ್ಯಯನ ತೀರ ಕಡಿಮೆಯಾಗಿದೆ. ಪ್ರಾಚೀನ ಸಾಹಿತ್ಯ ಅಧ್ಯಯನ ಮಾಡುವುದು ನಿಷ್ಪ್ರಯೋಜಕ ಎಂದು ಭಾವಿಸಲಾಗಿದೆ. ಕನ್ನಡವನ್ನು ಶಾಸ್ತ್ರೀಯ ಕ್ರಮದಲ್ಲಿ ಅಭ್ಯಾಸ ಮಾಡುವ ಕೆಲಸವಾಗಬೇಕೆಂದರು.
ನಂತರ “ಕೀರ್ತನ ಸಾಹಿತ್ಯ: ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ’ ಕುರಿತು ಪ್ರೊ.ತಾಳ್ತಜೆ ವಸಂತಕುಮಾರ್, “ವ್ಯಾಸಕೂಟ ಮತ್ತು ದಾಸಕೂಟ’ ಕುರಿತು ಪ್ರೊ.ಕೇಶವ ಶರ್ಮ ಮಾತನಾಡಿದರು. ಭಾರತೀಯ ಭಾಷಾ ಸಂಸ್ಥಾನದ ಮುಖ್ಯಸ್ಥ ಫರ್ನಾಂಡಿಸ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್, ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ್‌ಕುಮಾರ್ ಇದ್ದರು.