ಬೆಂಗಳೂರು: ಮಹಿಳೆಯರ ದೌರ್ಜನ್ಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಸತ್ತಿನವರೆಗೂ ಮಹಿಳಾ ಹೋರಾಟವನ್ನು ಕೊಂಡೊಯ್ಯಲಾಗುವುದು ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು. ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ವಿಮೆನ್ಸ್ ವಾಯ್ಸ ವತಿಯಿಂದ ಶನಿವಾರ ಪುರಭವನದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಾಕಷ್ಟು ಹೋರಾಟ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳಲಾಗಿದ್ದರೂ ಇಂದಿಗೂ ಅದು ಮುಂದುವರಿಯುತ್ತಿದೆ. ಮಹಿಳೆಯರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ನಮ್ಮ ಹೋರಾಟವನ್ನು ಸಂಸತ್ತಿನವರೆಗೂ ಕೊಂಡೊಯ್ಯಲಾಗುವುದು. ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಸಂವಿಧಾನ ರಕ್ಷಣೆಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ವಿವಿಧ ಮಹಿಳಾ ಸಂಘಟನೆಗಳು ಕೈಗೊಳ್ಳುವ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು. ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ವಿಧಾನಸಭೆಯಲ್ಲಿ ಕೇವಲ 4 ಮಹಿಳೆಯರು ರಾಜ್ಯದ ಕೋಟ್ಯಾಂತರ ಮಹಿಳೆಯರ ಪ್ರತಿನಿಧಿಯಾಗಿದ್ದಾರೆ.
ಮಹಿಳೆಯರ ಪರವಾಗಿ ಅನುಷ್ಠಾನಗೊಂಡಿರುವ ಕಾನೂನುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿಮೆನ್ಸ್ ವಾಯ್ಸನ ಪ್ರಧಾನ ಕಾರ್ಯದರ್ಶಿ ಡಾ.ರುತ್ ಮನೋರಮಾ ಮಾತನಾಡಿ, ಇಂದಿಗೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಶೋಷಿತ ಸಮುದಾಯದವರನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದ್ದು, ಇದರಿಂದ ಅನೇಕ ಮಹಿಳೆಯರು ಅವರ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ದಿನ ಮಹಿಳೆಯರು ಮತ್ತು ಶೋಷಿತ ವರ್ಗದವರ ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಗಗನಕ್ಕೇರುತ್ತಿರುವುದು ವಿಷಾದನೀಯ. ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸಾಚಾರಗಳು, ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗದ ಶೋಷಣೆ ಪ್ರತಿ ನಿಮಿಷ ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.