Advertisement

ಪ್ರತಿದಿನವೂ ಹೀಗೇ ಬದುಕುತ್ತಾಳೆ ಮುಂಬೈಯ ಮಹಿಳೆ!

12:30 AM Mar 08, 2019 | |

ಇಂದು ಮಹಿಳಾ ದಿನ ಓಕೆ; ಪುರುಷರ ದಿನವೇ ಇಲ್ಲ ಯಾಕೆ?” ಎಂದು ಕೆಲವರು ತಮಾಷೆಗೆ ಕೇಳುವುದುಂಟು. ವರ್ಷದ ಮುನ್ನೂರ ಅರವತ್ತನಾಲ್ಕು ದಿನವೂ ಪುರುಷರದೇ. ಇವತ್ತೂಂದಾದರೂ ಮಹಿಳೆಯರ ದಿನವಿರಬಾರದೇ ಎಂದು ಮಹಿಳೆಯರು ಅದೇ ಧಾಟಿಯಲ್ಲಿ ಉತ್ತರಿಸಿ ಖಡಕ್‌ ಪ್ರತಿಕ್ರಿಯೆಯನ್ನು ತೋರಿಸಿಬಿಡುತ್ತಾರೆ. ಹಿಂದಿನಂತೆ ತನಗೊಲ್ಲದ ಮಾತನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ತಮಾಷೆಯಾದರೂ ಸರಿ; ಸವಾಲಿಗೆ ತಕ್ಕ ಉತ್ತರ ನೀಡಿದರೆ ಮಾತ್ರ ಸಮಾಧಾನ. ಇಲ್ಲವಾದರೆ  ಯಾರದೋ ಮೇಲಿನ ಕೋಪ ಯಾರಿಗೋ ಎಂಬಂತೆ, ಬೇರೊಂದು ರೀತಿಯಲ್ಲಿ ವ್ಯಕ್ತವಾಗಬಹುದು.

Advertisement

“ಹೆಣ್ಣು ಮಾತನಾಡಿದ್ದು, ಮನೆಯ ಮಾಡಿನ ತುದಿಗೆ ಕೇಳಿಸಬಾರದು. ಭೂಮಿ ಅದುರದ ಹಾಗೆ ಮೆಲ್ಲನೆ ಹೆಜ್ಜೆಯಿಟ್ಟು ನಡೆಯಬೇಕು. ಒಬ್ಬಳೇ ಎಲ್ಲಿಗೂ ಹೋಗಬಾರದು. ಮನೆಗೆ ಬಂದ ನೆಂಟರ ಮುಂದೆ ಜೋರಾಗಿ ನಕ್ಕು ಮಾತನಾಡಬಾರದು. ಹಿರಿಯರಿಗೆ ಎದುರುತ್ತರ ಕೊಡಬಾರದು. ತಗ್ಗಿ ಬಗ್ಗಿ ನಡೆಯಬೇಕು. ಅಡುಗೆಮನೆಯಿಂದ ಹಿಡಿದು, ಬೇಸಾಯದವರೆಗೆ ಎಲ್ಲ ಕೆಲಸವನ್ನೂ ಹೆಣ್ಣು ಕಲಿಯಬೇಕು’- ಅನ್ನುವ ಕೆಲವೊಂದು ಕಟ್ಟುಪಾಡು ಹಾಗೂ ಶ್ರಮಸಂಸ್ಕೃತಿಯ ಹಿನ್ನೆಲೆಯಿರುವ ಕುಟುಂಬದಲ್ಲಿ ಬೆಳೆದು ಬಂದಿರುವವಳು ನಾನು. ಈಗಲೂ ಊರಿಗೆ ಹೋದಾಗ ಒಬ್ಬಳೇ ಎಲ್ಲಾದರೂ ಹೊರಟರೆ, ಮತ್ತೆ ಮನೆ ತಲುಪುವವರೆಗೆ  ಅಮ್ಮ-ಅಪ್ಪನಿಗೆ ಹಾದಿಯ ಮೇಲೆಯೇ ಕಣ್ಣು. ಅವರ ದೃಷ್ಟಿಯಲ್ಲಿ ನಾನಿನ್ನೂ ಬೆಳೆದಿಲ್ಲ, ಲೋಕಾನುಭವ ಇಲ್ಲ ಅನ್ನುವುದಕ್ಕಿಂತ, “ಹೆಣ್ಣುಮಗು, ಏನಾದರೂ ತೊಂದರೆ ಆದರೆ ಅದನ್ನು ಎದುರಿಸುವ ಸಾಮರ್ಥ್ಯ ಅವಳಲ್ಲಿ ಇರುವುದಿಲ್ಲ’ ಅನ್ನುವ ಭಾವನೆ ಅವರಲ್ಲಿ ಗಾಢವಾಗಿದೆ. ಈ ನಿಯಮಗಳ ಹಿಂದಿರುವ ಕಾಳಜಿ ಮತ್ತು ಪ್ರೀತಿಯನ್ನು ಅರ್ಥೈಸಿಕೊಂಡಿದ್ದೇನೆ.  ಹಾಗಾಗಿ, ನಡೆಹಾದಿಯಲ್ಲಿನ ಪ್ರತಿಯೊಂದು ತಿರುವುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. 

ಮಹಿಳೆಯರ ಖುಷಿಗೆ ಪುರುಷರ ಸಹಕಾರ
ಮುಂಬೈ ನಗರಿಯಲ್ಲಿ ಮಹಿಳೆಯರಿಗೆ ಸಿಗುವ ಸ್ವಾತಂತ್ರ್ಯ ಗೌರವ ಬೇರೆಲ್ಲಿಯೂ ಸಿಗಲಿಕ್ಕಿಲ್ಲ. ಇಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಬಣ್ಣ ಬಣ್ಣದ ಜರಿ ಸೀರೆ, ಮುಡಿತುಂಬ ಮಲ್ಲಿಗೆ, ಆಭರಣ, ಮದುವೆ ಮನೆಯ ವಾತಾವರಣಕ್ಕಿಂತ ಕಡಿಮೆಯೇನಿಲ್ಲ. ಸಂಸಾರದ ಜಂಜಾಟಗಳನ್ನೆಲ್ಲ  ಸ್ವಲ್ಪ$ಹೊತ್ತು ಬದಿಗಿರಿಸಿ, ಆ ದಿನ ಅವರು ಸಂಭ್ರಮಿಸುವುದನ್ನು ನೋಡುವುದೇ ಚೆಂದ. ಮಕ್ಕಳಿಂದ ಹಿಡಿದು ಅವರತ್ತು ದಾಟಿದ ಮಹಿಳೆಯರು ಕೂಡ ನೃತ್ಯ, ನಾಟಕ, ಯಕ್ಷಗಾನದಲ್ಲಿ ಭಾಗವಹಿಸುವುದನ್ನು ಕಂಡಾಗ ಎಂಥವರಿಗೂ ಜೀವನೋತ್ಸಾಹ ಮೂಡಿಸದಿರದು. ಮಹಿಳೆಯರ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುವ ಜವಾಬ್ದಾರಿಯನ್ನು ಪುರುಷರೇ ವಹಿಸಿಕೊಳ್ಳುತ್ತಾರೆ. ನಂತರ ದೂರದಲ್ಲಿ ನಿಂತು ಅವರ ಖುಷಿಯಲ್ಲಿ ಜೊತೆಯಾಗುತ್ತಾರೆ. ಮಹಿಳೆಯರನ್ನು ಗದ್ದುಗೆಯಲ್ಲಿ ಕೂರಿಸಿ, ಒಂದು ಮೂಲೆಯಲ್ಲಿ ನಿಂತು ನೋಡುವ ಅವರ ಮುಖದಲ್ಲಿ ಸಾರ್ಥಕತೆಯ ಭಾವವಿರುತ್ತದೆ. ಮಹಿಳೆಯರ ಖುಷಿಗಾಗಿ ಪುರುಷರು ಈ ಮಟ್ಟದಲ್ಲಿ ಸಹಕಾರ ನೀಡುವುದನ್ನು ನಾನು ಕಂಡಿದ್ದು ಮುಂಬೈ ನಗರಿಯಲ್ಲಿ ಮಾತ್ರ.

ಎಲ್ಲದಕ್ಕೂ ಸನ್ನದ್ಧಳಾಗಿಯೇ ಮನೆಯಿಂದ ಹೊರಡುತ್ತಾಳೆ!
 ಗೃಹಿಣಿಯ ಪಾತ್ರಕ್ಕೆ ಮಾತ್ರ ಮಹಿಳೆ ಸೀಮಿತವಾಗಿಲ್ಲ. ಅವಳು ಸಬಲೆ ಎನ್ನುವುದನ್ನು ಎಲ್ಲ ಕ್ಷೇತ್ರದಲ್ಲಿ ಸಾಬೀತು ಪಡಿಸಿದ್ದಾಳೆ. ಅವಳು ಮಾಡುವ ಕಾರ್ಯಗಳಿಗೆ ಯಾವುದೂ ತಡೆಯಾಗಲಾರದು. ಮಳೆ, ಬಿಸಿಲು, ಗಾಳಿ, ಅಪಘಾತ ಅದೇನೇ ಆದರೂ ಅವಳು ಅಂಜುವುದಿಲ್ಲ. ಎಲ್ಲದಕ್ಕೂ ಸನ್ನದ್ಧಳಾಗಿಯೇ ಮನೆಯಿಂದ ಹೊರಡುತ್ತಾಳೆ. ಅಡುಗೆಮನೆ ಕೆಲಸವೇ! ಅವಳಿಗೆ ಅದೊಂದು ಕೆಲಸವೇ ಅಲ್ಲ. ಆಫೀಸು, ಲೋಕಲ್‌ ಟ್ರೆ„ನ್‌ನಲ್ಲಿ ನಿತ್ಯ ಪ್ರಯಾಣಿಸುವ ಮಹಿಳೆಯರ ಮುಖದಲ್ಲಿ ಕಾಣುವುದು ಆಫೀಸು ಅಥವಾ ಮನೆಗೆ ಬೇಗನೆ ಹೋಗಿಬಿಡುವ  ಅವಸರ. ಆಯಾಸವಲ್ಲ.

ಒಮ್ಮೆ ಬೊರಿವಲಿಯಲ್ಲಿ ಸಹಪಾಠಿಯೊಬ್ಬನ ಮದುವೆ ಇತ್ತು. “”ನೀವೆಲ್ಲ ಮದುವೆಗೆ ಬಾರದೆ ಇದ್ದರೆ, ವಾಟ್ಸಾಪ್‌ ಗ್ರೂಪ್‌ನಿಂದ ಎಕ್ಸಿಟ್‌ ಆಗುವೆ” ಎಂಬ ಬೆದರಿಕೆಯನ್ನು  ಮದುಮಗ ಮೊದಲೇ ನೀಡಿದ್ದ.  “”ಯಾರೂ ಮದುವೆಗೆ ಬರುವುದಿಲ್ಲ ಏನು ಬೇಕಾದ್ರೂ ಮಾಡ್ಕೊà” ಎಂದು ನಾವೂ ತಿರುಗೇಟು ನೀಡಿ ಮದುವೆ ಮಂಟಪಕ್ಕೆ ತಲುಪುವವರೆಗೂ ಗೌಪ್ಯವನ್ನು ಕಾಯ್ದುಕೊಂಡಿದ್ದೆವು. ಒಂದೇ ಕ್ಲಾಸಿನಲ್ಲಿ ಕುಳಿತು ಓದಿದ ಐದಾರು ಮಂದಿ ಗೆಳತಿಯರು ಅಂದು ಜೊತೆ ಸೇರಿದ ಸಂಭ್ರಮ. ನಮ್ಮಲ್ಲಿ ಸುನೀತಾ ಅನ್ನುವವಳು ನಿತ್ಯ ಹೊರಗಡೆ ಕೆಲಸಕ್ಕೆ ಹೋಗುವವಳು. ನಗರದ ಬದುಕಿಗೆ ಚೆನ್ನಾಗಿ ಹೊಂದಿಕೊಂಡವಳು. ಅಂದು, ಮದುವೆ ಮನೆಗೆ ಬರುವಾಗ “ಇಷ್ಟು ದೊಡ್ಡ ಬ್ಯಾಗ್‌ ಹಿಡ್ಕೊಂಡಿದ್ದೀಯಲ್ಲ…!’ ಎಂದು ನಾನು ಸುನೀತಾಳಿಗೆ ತಮಾಷೆ ಮಾಡಿದರೆ, “ಸಣ್ಣ ಪರ್ಸ್‌ ಹಿಡ್ಕೊಂಡು ಬಂದಿದ್ದೀಯಲ್ಲ’ ಅಂತ ಅವಳು ನನಗೇ  ತಮಾಷೆ ಮಾಡಿದಳು. ಅಂದು ಶಾಲಾ ದಿನಗಳ ನೆನಪು ಮತ್ತೆ ಮರುಕಳಿಸಿತ್ತು. ಮದುವೆ ಸಮಾರಂಭ ರಾತ್ರಿ ಇದ್ದಿದ್ದರಿಂದ ಎಲ್ಲ ಮುಗಿಯುವಾಗ 11.30 ದಾಟಿತ್ತು. ಅಲ್ಲಿಂದ ಡೊಂಬಿವಲಿಗೆ ಬರಲು ಕಡಿಮೆಯೆಂದರೂ ಮೂರುಗಂಟೆಯ ಹಾದಿ. ಹೊರಟರೂ ಕೊನೆಯ ಲೋಕಲ್‌ ಟ್ರೆ„ನ್‌ ಸಿಗುವ ಸಾಧ್ಯತೆಯೂ ಇರಲಿಲ್ಲ. ಮತ್ತೋರ್ವ ಗೆಳತಿ ಐರಿನ್‌ ಗೋರೆಗಾಂವ್‌ನಲ್ಲಿ ಎರಡು ಮಹಡಿಯ ಸ್ವಂತ ಬಂಗಲೆಯಲ್ಲಿ ವಾಸವಾಗಿರುವ ಶ್ರೀಮಂತೆ. ಆ ರಾತ್ರಿ ಅವಳ ಮನೆಯಲ್ಲಿಯೇ  ಕಳೆಯುವುದೆಂದು ತೀರ್ಮಾನಿಸಿದೆವು. ಅಲ್ಲಿ ಹೋದ ಮೇಲೆ ಸುನೀತಾ ಅವಳ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ವಸ್ತುಗಳನ್ನು ಒಂದೊಂದೇ ತೆಗೆಯಲಾರಂಭಿಸಿದಳು. ನಿತ್ಯದ ಅಗತ್ಯಗಳಿಗೆ ಬೇಕಾದ ಎಲ್ಲ ವಸ್ತುಗಳೂ ಅವಳ ಬ್ಯಾಗಿನಲ್ಲಿದ್ದವು.  “”ನೋಡು, ನಮಗೆ ಇವತ್ತು ಮನೆಗೆ ಹೋಗಲು ಆಗ್ಲಿಲ್ಲ. ನಾನು ಎಲ್ಲ ವ್ಯವಸ್ಥೆ ಮಾಡ್ಕೊಂಡೇ ಬಂದಿದ್ದೀನಿ. ಆದ್ರೆ ನೀನು! ಒಂದು ವೇಳೆ ಟ್ರೆ„ನ್‌ ತಡವಾಗಿ, ಎಲ್ಲಾದರೂ ಇರಬೇಕಾದ ಸಂದರ್ಭ ಬಂದರೆ! ಇಲ್ಲಿ ಯಾವ ಕ್ಷಣವೂ ಏನೂ ಆಗಬಹುದು. ಎಲ್ಲದಕ್ಕೂ ನಾವು ಸಿದ್ಧರಾಗಿರಬೇಕು” ಅಂದಾಗ ಅವಳ ಮಾತು ನನಗೂ ಸರಿಯೆನಿಸಿತು.

Advertisement

ಮದುವೆಯಾಗಿ ಮನೆಯ ಗೃಹಣಿಯಾಗಿ ಮುಂಬೈ ನಗರಿಗೆ ಕಾಲಿಟ್ಟವಳು ನಾನಾದರೆ, ಕೆಲಸವನ್ನು ಅರಸಿಕೊಂಡು ಮುಂಬೈಗೆ ಬಂದು, ಎನ್‌ಜಿಓ ಸಂಸ್ಥೆಯ ಮುಖಾಂತರ ಸಮಾಜಸೇವೆ ಯಂತಹ ಕಾರ್ಯದಲ್ಲಿ ನಿರತಳಾದವಳು ಸುನೀತಾ. ಆನಂತರ ಮದುವೆಯಾಗಿ ಇಲ್ಲೇ ಜೀವನವನ್ನು ರೂಪಿಸಿಕೊಂಡವಳು. ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ದುಡಿಯುವ ಕಾರ್ಮಿಕರ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣವನ್ನು ನೀಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದ್ದೆ. ಹಾಗಾಗಿ, ಮುಂಬೈ ನಗರದಾದ್ಯಂತ ಎಲ್ಲೆಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುತ್ತವೆಯೋ ಅಲ್ಲೆಲ್ಲ ಅವಳಿಗೆ ಹೋಗಬೇಕಾಗುತ್ತದೆ. ದಿನವಿಡೀ ಲೋಕಲ್‌ ಟ್ರೆ„ನಲ್ಲಿ ಪ್ರಯಾಣ ಸುನೀತಾಳಿಗೆ ಸಲೀಸು.  ಈ ನಗರಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ, ಹ‌ಠಾತ್ತನೆ ಬಂದೆರಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂಬುದನ್ನು ಕೂಡ ಅವಳು ಕಲಿತಿದ್ದಾಳೆ. ಅವಳು ಮಾತ್ರವಲ್ಲ, ನಿತ್ಯ ದುಡಿಯಲೆಂದು ಮನೆಯಿಂದ ಹೊರ ನಡೆಯುವ ಪ್ರತಿಯೊಬ್ಬ ಮಹಿಳೆಯರೂ ಕಲಿತಿದ್ದಾರೆ ಎನ್ನಬಹುದು.

ಮರಾಠಿ ಮಣ್ಣಿನ ಗುಣ
ಮದುವೆಯಾಗಿ ಪತಿಯ ಜೊತೆಗೆ ಊರಿನಿಂದ ಮುಂಬೈಗೆ ಬಂದ ಮಹಿಳೆಯರಲ್ಲಿ, ಇನ್ನೂ ಹಿಂದಿ ಬಾರದವರು, ನಾಲ್ಕು ಗೋಡೆಗಳ ನಡುವೆ ಪತಿ ಮತ್ತು ಮಕ್ಕಳ ನೆರಳಲ್ಲಿಯೇ ಬದುಕುವವರೂ ಇದ್ದಾರೆ. ಇಂಥ ಕೆಲವರು ವಿಧವೆಯರಾದಾಗ ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಮಕ್ಕಳ ಓದು ಮತ್ತು ಸಂಸಾರದ ನಿರ್ವಹಣೆಗಾಗಿ ಮನೆಯಲ್ಲಿ ಅಡುಗೆ ಮಾಡುವ ಕೆಲಸ, ಹೊಟೇಲಿಗೆ ಚಪಾತಿ ಮಾಡುವ ಕೆಲಸ, ಕೈಬಳೆ, ಸರ, ಪ್ಲಾಸ್ಟಿಕ್‌ ಹೂವು ನೇಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸಬೇಕಾದ ಪರಿಸ್ಥಿತಿಯನ್ನು ಅದೆಷ್ಟೋ ಮಹಿಳೆಯರು ಎದುರಿಸುತ್ತಿದ್ದಾರೆ. ಅಂಥ ಪರಿಸ್ಥಿತಿಯಲ್ಲಿ ಸಂಬಂಧಿಕರೆಲ್ಲ ದೂರವಿರುವುದೇ ಹೆಚ್ಚು. ವಿಧಿ ಕೊಟ್ಟ ಏಟಿಗೆ ಮೊದಲಿಗೆ ಕಂಗಾಲಾದರೂ ಈ ನಗರಿ ಮಾತ್ರ ಅವರ ಕೈಬಿಡುವುದಿಲ್ಲ. ಯಾರನ್ನೂ ಬರಿ ಹೊಟ್ಟೆಯಲ್ಲಿ ಮಲಗಿಸುವುದು ಈ ಮರಾಠಿ ಮಣ್ಣಿನ ಗುಣವಲ್ಲ. ಏನೇ ಬರಲಿ, ಎದುರಿಸುವ ಸಾಮರ್ಥ್ಯ ಮತ್ತು ಮುನ್ನಡೆಯುವ ಛಲಕ್ಕೆ ಬೆಂಗಾವಲಾಗಿರುತ್ತದೆ. ಬದುಕುವುದಕ್ಕೆ ಮೃಷ್ಟಾನ್ನವೇ ಬೇಕಿಲ್ಲ. ಇಲ್ಲಿ ಸಿಗುವ ಒಂದು ವಡಾಪಾವ್‌ ಕೂಡ ದಿನವಿಡೀ ಹೊಟ್ಟೆಯನ್ನು ತಣ್ಣಗಿರಿಸಬಲ್ಲದು. ಅತಿ ಕಡಿಮೆ ಬೆಲೆಗೆ ಸಿಗುವ ನೆಲಗಡಲೆ ಬಾದಾಮಿಯಷ್ಟೆ ಪೌಷ್ಟಿಕತೆಯನ್ನು ನೀಡಬಲ್ಲದು. ಹಾಗಾಗಿ, ಎಂಥ ಪರಿಸ್ಥಿತಿ ಬಂದೊದಗಿದರೂ ತಮ್ಮ ಮಕ್ಕಳು ಬೆಳೆದು ತಮ್ಮ ಹಾದಿಯನ್ನು ಕಂಡುಕೊಳ್ಳುವವರೆಗಾದರೂ ಮಹಿಳೆಯರು ಈ ನಗರಿಯನ್ನು ತೊರೆಯುವುದಿಲ್ಲ. ಕಷ್ಟದ ಸ್ಥಿತಿಯಲ್ಲಿ ಊರಿಗಿಂತ ಮುಂಬೈಯೇ ವಾಸಿ ಎಂಬುದು ಎಲ್ಲರಿಗೂ ತಿಳಿದಿದೆ.

ಅನಿತಾ ಪಿ. ತಾಕೊಡೆ

Advertisement

Udayavani is now on Telegram. Click here to join our channel and stay updated with the latest news.

Next