ಬೆಂಗಳೂರು: ವ್ಯಕ್ತಿಯೊಬ್ಬರ ಮನೆಯ ಖಾತಾ ಪತ್ರವನ್ನು ಸಕಾರಣವಿಲ್ಲದೆ ರದ್ದುಪಡಿಸಿರುವುದು ತಪ್ಪಿನ ಕ್ರಮವಾಗಿದ್ದು, ಈ ಸಂಬಂಧ ಹೊರಡಿಸಿದ್ದ ಖಾತಾ ರದ್ದತಿ ಆದೇಶ ಹಿಂಪಡೆದಿರುವುದಾಗಿ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಎಸ್.ಕೆ ಹುಚ್ಚಯ್ಯ ಹೈಕೋರ್ಟ್‌ಗೆ ಬುಧವಾರ ಅಫಿಡವಿಟ್ ಸಲ್ಲಿದ್ದಾರೆ.
ನಿವೇಶನ ಖಾತಾ ಪತ್ರವನ್ನು ಸಹಾಯಕ ಕಂದಾಯ ಅಧಿಕಾರಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಅತ್ತಿಗುಪ್ಪೆಯ ಮೊದಲನೇ ರಸ್ತೆಯ ನಿವಾಸಿಗಳಾದ ಪಿ. ಮಹೇಶ್ ಹಾಗೂ ಜಿ. ಶ್ರೀಧರ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಈ ವೇಳೆ ಹಾಜರಿದ್ದ ಕಂದಾಯ ಅಧಿಕಾರಿ ಎಸ್.ಕೆ. ಹುಚ್ಚಯ್ಯ ಪರ ವಕೀಲರು, ಅರ್ಜಿದಾರರ ನಿವೇಶನದ ಖಾತಾ ಪತ ರದ್ದುಪಡಿಸಿರುವ ಆದೇಶ ಹಿಂಪಡೆದಿರುವುದಾಗಿ ಅಫಿಡವಿಟ್ ಸಲ್ಲಿಸಿದರು. ಜೊತೆಗೆ ಈ ಹಿಂದೆ ನ್ಯಾಯಾಲಯದ ಆದೇಶದಂತೆ 50 ಸಾವಿರ ರೂ. ಠೇವಣಿ ಇಟ್ಟಿರುವ ಹಣದ ಮೊತ್ತದಲ್ಲಿ ವಿನಾಯಿತಿ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದೇ ರೀತಿ ಅರ್ಜಿದಾರರ ನಿವೇಶನಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿಯರ್ ಪರ ವಕೀಲರೂ ಕೋರಿದರು.
ವಾದ -ಪ್ರತಿವಾದ ಆಲಿಸಿದ್ದ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳಿಗೆ ಕರ್ತವ್ಯ ಲೋಪದ ಬಗ್ಗೆ ಅರಿವಾಗಬೇಕು ಎಂದು ಎಚ್ಚರಿಸಿತು. ಜೊತೆಗೆ ಕೂಡಲೇ ಅರ್ಜಿದಾರರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶಿಸಿದ ನ್ಯಾಯಪೀಠ, ಸಹಾಯಕ ಕಂದಾಯ ಅಧಿಕಾರಿ ಹಾಗೂ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿಯರ್ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಠೇವಣಿಯಿಟ್ಟಿರುವ 50 ಸಾವಿರ ರೂ.ಗಳ ಪೈಕಿ 35 ಸಾವಿರ ರೂ.ಗಳನ್ನು ವಾಪಾಸ್ ಪಡೆದುಕೊಳ್ಳಿ ಎಂದು ಸೂಚನೆ ನೀಡಿ ರಿಟ್ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಅತ್ತಿಗುಪ್ಪೆಯ ಮೊದಲನೇ ಮುಖ್ಯರಸ್ತೆ ನಿವಾಸಿಗಳಾದ ಪಿ. ಮಹೇಶ್ ಹಾಗೂ ಜಿ. ಶ್ರೀಧರ್ ಎಂಬುವವರು, ಕಮಲಮ್ಮ ಎಂಬುವವರ ಬಳಿ ನಿವೇಶನ ಖರೀದಿಸಿ ಖಾತಾ ಮಾಡಿಸಿಕೊಂಡಿದ್ದರು. ಆದರೆ ನಿವೇಶನ ಖಾತಾ ನಿಯಮಬಾಹಿರವಾಗಿದೆ ಎಂದು ಸಹಾಯಕ ಕಂದಾಯ ಅಧಿಕಾರಿ ಮಾರ್ಚ್ 14ರಂದು ಖಾತಾ ರದ್ದುಗೊಳಿಸಿದ್ದರು. ಬಳಿಕ ಬೆಸ್ಕಾಂ ಅಧಿಕಾರಿಗಳು ಅರ್ಜಿದಾರರ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.