ಹಾವೇರಿ: ಪ್ರಸಕ್ತ ವರ್ಷ ಮುಂಗಾರು ಅವಧಿಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಬೆಳೆಗಳು ನೆಲಕಚ್ಚಿ ರೈತರು ನಷ್ಟ ಅನುಭವಿಸಿದ್ದು ಒಂದಡೆಯಾದರೆ, ಸದ್ಯ ಹಿಂಗಾರು ಹಂಗಾಮು ಆರಂಭಗೊಂಡಿದ್ದರೂ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಹಿಂಗಾರು ಬಿತ್ತನೆಗೂ ಹಿನ್ನಡೆಯಾಗುತ್ತಿದೆ. ಹೀಗಾಗಿ, ರೈತರು ಎರಡೂ ಹಂಗಾಮಿನ ಬೆಳೆ ಕಳೆದುಕೊಳ್ಳುವ ಆತಂಕದ ಸ್ಥಿತಿ ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅದರಲ್ಲೂ ಕಳೆದ ಎರಡು ತಿಂಗಳಲ್ಲಿ ನಿರಂತರವಾಗಿ ಮಳೆಯಾಗುತ್ತಲೇ ಇದ್ದು, ಸುಮಾರು ಒಂದು ಲಕÒ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಮಳೆಯಾಗುತ್ತಲೇ ಇದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ, ಸೋಯಾ, ಶೇಂಗಾ ಇತ್ಯಾದಿ ಬೆಳೆ ಕಟಾವು ಇನ್ನೂ ಮುಗಿದಿಲ್ಲ. ವಾಡಿಕೆಯಂತೆ ಈಗ ಹಿಂಗಾರು ಬಿತ್ತನೆ ಶುರುವಾಗಬೇಕಿತ್ತು. ಆದರೆ, ಮಳೆ ಬಿಡದೇ ಸುರಿಯುತ್ತಿರುವುದರಿಂದ ಹಿಂಗಾರು ಬಿತ್ತನೆ ವಿಳಂಬವಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
70 ಸಾವಿರ ಹೆಕ್ಟೇರ್ ಗುರಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 70 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದೆ. ಈಗಾಗಲೇ ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ಮೂಲಕ ವಿತರಿಸಲಾಗುತ್ತಿದೆ. ಹಿಂಗಾರಿ ಜೋಳ, ಶೇಂಗಾ, ಕಡಲೆ, ಹೆಸರು, ಗೋವಿನಜೋಳ ಬಿತ್ತನೆ ಶುರುವಾಗಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಜೋವಿನಜೋಳ ಕಟಾವಿಗೆ ಸಾಧ್ಯವಾಗುತ್ತಿಲ್ಲ. ನಿರಂತರ ಮಳೆಯಿಂದ ರೈತರು ಜೋಳ ಕಟಾವು ಮಾಡಿಲ್ಲ. ಅಲ್ಲದೇ ಹೊಲಗಳಲ್ಲಿ ನೀರು ನಿಂತು, ತೇವಾಂಶ ಅಧಿಕವಾಗಿ ಕಾಲಿಡಲೂ ಸಾಧ್ಯವಾಗದ ಪರಿಸ್ಥಿತಿಯಿದೆ. ಇದರಿಂದ ಹೊಸದಾಗಿ ಬಿತ್ತನೆ ಆರಂಭಿಸುವುದು ಸಾಧ್ಯವಿಲ್ಲ. ಒಂದು ವಾರ ಬಿಸಿಲು ಬಿದ್ದರಷ್ಟೇ ಹೊಲಗಳ ತೇವಾಂಶ ಕಡಿಮೆಯಾಗಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಆರಂಭಿಸಬಹುದಾಗಿದೆ. ಇನ್ನೂ ಮಳೆ ಮುಂದುವರಿದರೆ ಹಿಂಗಾರು ಹಂಗಾಮು ಆರಂಭವೇ ವಿಳಂಬವಾಗಲಿದೆ.
ಹೊಲದಲ್ಲಿ ಹೆಚ್ಚುತ್ತಿರುವ ಕಳೆ: ನಿರಂತರ ಸುರಿದ ಮಳೆಯಿಂದ ಹೊಲಗಳಲ್ಲಿ ಕಳೆ ವ್ಯಾಪಕವಾಗಿ ಬೆಳೆದಿದೆ. ಬೆಳೆಗಳ ಮಧ್ಯೆ ಬೆಳೆದಿದ್ದ ಕಳೆ ಕೀಳಲು ಸಹ ರೈತರಿಂದ ಆಗಿರಲಿಲ್ಲ. ಈಗ ಅದು ದೊಡ್ಡದಾಗಿ ಬೆಳೆದಿದ್ದು, ಕಳೆ ನಾಶಪಡಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಮುಂಗಾರು ಹಂಗಾಮಿನ ಬೆಳೆ ಕೈಗೆ ಸಿಗದೇ ರೈತರು ಸಂಕಷ್ಟದಲ್ಲಿದ್ದಾರೆ. ಅಳಿದುಳಿದ ಬೆಳೆಯನ್ನೂ ಕಟಾವು ಮಾಡಲಾಗದೇ ರೈತರು ಪರಿತಪಿಸುತ್ತಿದ್ದಾರೆ. ಸಾಲಸೂಲ ಮಾಡಿ ಹಾಕಿದ್ದ ಗೊಬ್ಬರ, ಬಿತ್ತನೆ ಬೀಜದ ಖರ್ಚು ಕೂಡ ರೈತರಿಗೆ ಸಿಗುವ ಸಾಧ್ಯತೆ ಕಡಿಮೆಯಿದೆ. ಈಗ ಕಳೆ ಕೀಳಲು ಕೂಲಿ ಕೊಡುವ ಶಕ್ತಿ ಕೂಡ ರೈತರಿಗಿಲ್ಲ. ಮುಂಗಾರು ಹಂಗಾಮಿನ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ಹಿಂಗಾರು ಬೆಳೆಯನ್ನಾದರೂ ಬೆಳೆಯಬೇಕೆಂದರೆ ಮಳೆ ಬಿಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಹೊಲಗದ್ದೆಗಳಲ್ಲಿ ಅಧಿಕ ತೇವಾಂಶವಿದ್ದು, ಈಗಲೇ ಬಿತ್ತನೆ ಆರಂಭಿಸುವುದು ಸೂಕ್ತವಲ್ಲ. ಇದರಿಂದ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯುವುದು ಕಷ್ಟ. ಅಲ್ಲದೇ, ಕೀಟ ಹಾಗೂ ರೋಗ ಬಾಧೆಯೂ ಅ ಧಿಕವಾಗುವ ಸಾಧ್ಯತೆಯಿದೆ. ಮುಂಗಾರು ಬೆಳೆ ಕಳೆದುಕೊಂಡಿರುವ ರೈತರು ಈಗ ಅವಸರ ಮಾಡಿದೇ ಒಂದೆರಡು ವಾರ ಕಾದು ನೋಡಿ ಬಿತ್ತನೆಗೆ ಮುಂದಾಗಬೇಕು. –
ಅಶೋಕ ಪಿ., ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ
ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಬೆಳೆಗಳು ಹಾನಿಗೊಂಡು ಅಪಾರ ನಷ್ಟ ಅನುಭವಿಸುವಂತಾಗಿದೆ. ಅಳೆದುಳಿದ ಬೆಳೆಗಳನ್ನು ಕಟಾವು ಮಾಡಿಕೊಳ್ಳಲು ಸಹ ಮಳೆ ಬಿಡುವು ನೀಡುತ್ತಿಲ್ಲ. ಅಲ್ಲದೇ, ಸದ್ಯ ಹಿಂಗಾರು ಹಂಗಾಮು ಶುರುವಾಗಿದ್ದರೂ ಹೊಲಗಳನ್ನು ಸ್ವತ್ಛಗೊಳಿಸಲು ಸಾಧ್ಯವಾಗಿಲ್ಲ. ನಿರಂತರ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಹಿಂಗಾರು ಬಿತ್ತನೆ ಸಹ ಸಾಧ್ಯವಾಗಿಲ್ಲ. –
ಶಿವಪ್ಪ ಅರಳಿ, ರೈತರು