Advertisement

ಇಡೀ ದಿನ ಜಡಿ ಮಳೆ…ಮಸುಕಾದ ಇಳೆ…

10:10 AM Nov 12, 2021 | Team Udayavani |

ಬೆಂಗಳೂರು: ಒಂದೆಡೆ ನಿರಂತರವಾಗಿ ಸುರಿಯುವ ಸೋನೆ ಮಳೆ, ಮತ್ತೂಂದೆಡೆ ಮೈಗೆ ಆಗಾಗ್ಗೆ ಬಂದು ತಾಗುವ ತಂಪುಗಾಳಿ. ಪರಿಣಾಮ ಷೇರು ಮಾರುಕಟ್ಟೆಯಂತೆ ಸರ್ರನೇ ಕುಸಿದ ತಾಪಮಾನ. ಇದೆಲ್ಲದರಿಂದ ಸಾಮಾನ್ಯ ಜನ ಒತ್ತಟ್ಟಿಗಿರಲಿ, ಸೂರ್ಯನೇ ಇಡೀ ದಿನ ಬೆಚ್ಚಗೆ ಹೊದ್ದು ಮಲಗಿಬಿಟ್ಟ! ಇಡೀ ನಗರ ಗುರುವಾರ ಮುಸುಕು ಹೊದ್ದು ಮಲಗಿತ್ತು.

Advertisement

ಬುಧವಾರ ಮಧ್ಯರಾತ್ರಿಯಿಂದಲೇ ಶುರುವಾದ ಜಡಿಮಳೆ ಬೆಳಗಾದರೂ ವಿರಾಮ ನೀಡಿರಲಿಲ್ಲ. ಆಗಾಗ್ಗೆ ಬಿಡುವು ನೀಡಿದಂತೆ ಕಂಡುಬರುತ್ತಿತ್ತು. ಹಾಗಂತ, ಹೊರಗೆ ಕಾಲಿಟ್ಟವರಿಗೆ ವರುಣನ ಅಭಿಷೇಕ ಆಗುತ್ತಿತ್ತು. ಹಾಗಾಗಿ, ಬೆಳಗ್ಗೆ ಹಾಲು-ಪತ್ರಿಕೆ ಹಾಕು ವವರು, ವಾಯು ವಿಹಾರಕ್ಕೆ ತೆರಳುವವರು, ಕೆಲಸಕ್ಕೆ ಧಾವಿಸುವ ಕಾರ್ಮಿ ಕರು, ಉದ್ಯೋಗಿಗಳಿಂದ ಹಿಡಿದು ಎಲ್ಲರೂ ಮೈಕೊರೆ ಯುವ ಚಳಿ ಇದ್ದರೂ ಮಳೆಯಲ್ಲಿ ಮಿಂದೆದ್ದರು.

ಇದನ್ನೂ ಓದಿ:- ಕುಶಾಲನಗರ ಕಳ್ಳತನ ಪ್ರಕರಣ : ಚಿನ್ನಾಭರಣ, ದ್ವಿಚಕ್ರ ವಾಹನ ವಶ

ಮುಗಿಲ ತುಂಬಾ ರಂಧ್ರಗಳನ್ನು ಕೊರೆದಂತಿತ್ತು ವರುಣನ ಆಟಾಟೋಪ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ದಾಳಿ ಇಟ್ಟಿದ್ದರಿಂದ ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವಂತೆ ಚಳಿ ಆಗುತ್ತಿತ್ತು. ಇದರಿಂದ ಕೆಲ ದಿನಗಳ ಮಟ್ಟಿಗೆ ಮೂಲೆ ಸೇರಿದ್ದ ಕೊಡೆ, ಜಾಕೆಟ್‌ಗಳು ಕಾಣಸಿಕೊಂಡವು. ಒಲ್ಲದ ಮನಸ್ಸಿನಿಂದಲೇ ಜನ ಹೊರಗೆ ಕಾಲಿಟ್ಟರು.

ಅದೇ ರೀತಿ, ಸಂಜೆ ಕೆಲಸದಿಂದ ವಾಪಸ್ಸಾಗುವಾಗಲೂ ಇದು ಪುನರಾವರ್ತನೆ ಆಯಿತು. ಬಸ್‌ಗಳಿಗಾಗಿ ಕಾಯದೆ, ಜನ ಆಟೋ, ಟ್ಯಾಕ್ಸಿಗಳ ಮೊರೆಹೋದರು. ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬದಿಗೊತ್ತಿ, ಆಟೋ ಏರಿದ್ದು ಕಂಡುಬಂತು. ಈ ಮಧ್ಯೆ ಸೂರ್ಯ ರಜೆ ಹಾಕಿದ ಬೆನ್ನಲ್ಲೇ ಚಂದ್ರನು ಕೂಡ ನಾಪತ್ತೆಯಾಗಿಬಿಟ್ಟಿದ್ದ. ಇನ್ನು ಕೆಲವೆಡೆ ಮಳೆ ಮತ್ತು ಚಳಿಯು ಶಾಲಾ-ಕಾಲೇಜು, ಕಚೇರಿಗೆ ತೆರಳುವ ಉತ್ಸಾಹಕ್ಕೆ ತಣ್ಣೀರೆರಚಿತು. ರಜೆ ಹಾಕಿ ಮನೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟರು. ಚಳಿಯಿಂದ ಪಾರಾಗಲು ಜನರು ಸ್ವೇಟರ್‌, ದಪ್ಪನೆಯ ಬಟ್ಟೆ ಧರಿಸುವುದರ ಜತೆಗೆ ಕಾಫಿ, ಚಹಾ ಮತ್ತು ಕುರುಕಲು ತಿಂಡಿಯ ಮೊರೆಹೋದರು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ “ಪೀಕ್‌ ಅವರ್‌’ನಲ್ಲಿ ಕೂಡ ವಾಹನದಟ್ಟಣೆ ಕಡಿಮೆ ಇತ್ತು.

Advertisement

ಮೂರೂ ಹೊತ್ತು ಒಂದೇ ತಾಪಮಾನ!

ಈ ಎಲ್ಲ ಬೆಳವಣಿಗೆಗಳಿಂದಾಗಿ ನಗರದ ತಾಪಮಾನ ಮೂರೂ ಹೊತ್ತು ಒಂದೇ ರೀತಿ ಇತ್ತು! ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಂಕಿ-ಅಂಶಗಳ ಪ್ರಕಾರ ನಗರದ ಗರಿಷ್ಠ ಉಷ್ಣಾಂಶ 19.8 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 20 ಡಿಗ್ರಿ ಮತ್ತು 17.8 ಡಿಗ್ರಿ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 19.9 ಡಿಗ್ರಿ ಮತ್ತು 16.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಸಾಮಾನ್ಯವಾಗಿ ನಗರದಲ್ಲಿ ನವೆಂಬರ್‌ನಲ್ಲಿ ಗರಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆ ದಾಖಲಾಗುವುದು ತುಂಬಾ ವಿರಳ. ಹಾಗಂತ, ಗುರುವಾರ ನಗರದ ಅತ್ಯಂತ ತಣ್ಣನೆಯ ದಿನ ಎಂದು ಹೇಳುವಂತಿಲ್ಲ. ಯಾಕೆಂದರೆ, ಈ ಬಗ್ಗೆ ನಿಖರ ದಾಖಲೆಗಳಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಇನ್ನೂ ಎರಡು ದಿನ ಮಳೆ?

ನಗರದಲ್ಲಿ ಇನ್ನೂ ಎರಡು ದಿನ ಮೋಡಕವಿದ ವಾತಾವರಣ ಹಾಗೂ ಆಗಾಗ್ಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನ. 15ರವರೆಗೆ ಮಳೆ ಮತ್ತು ಮೋಡಕವಿದ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿ ಕೂಡ ಇದು ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next