Advertisement

The West Indies ಪ್ರವಾಸ: ಭಾರತದ ಕ್ರಿಕೆಟಿಗರಿಗೆ ಅಭ್ಯಾಸ ಶಿಬಿರ

10:52 PM Jun 25, 2023 | Team Udayavani |

ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿರುವ ಭಾರತದ ಕ್ರಿಕೆಟ್‌ ತಂಡಕ್ಕೆ ಒಂದು ವಾರದ ಅಭ್ಯಾಸ ಶಿಬಿರವನ್ನು ಆಯೋಜಿಸಲಾಗಿದೆ. ಇದು ಬ್ರಿಜ್‌ಟೌನ್‌ನ “ಕೆನ್ನಿಂಗ್ಸ್‌ಟನ್‌ ಓವಲ್‌” ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

Advertisement

ವಿಂಡೀಸ್‌ ಪ್ರವಾಸದ ವೇಳೆ ಯಾವುದೇ ಅಧಿಕೃತ ಅಭ್ಯಾಸ ಪಂದ್ಯವಿಲ್ಲದ ಕಾರಣ, ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಈ ಅಭ್ಯಾಸ ಶಿಬಿರ ಅತ್ಯಂತ ಉಪಯುಕ್ತವಾಗಿ ಪರಿಣಮಿಸಲಿದೆ ಎಂದು ಬಿಸಿಸಿಐ ತಿಳಿಸಿದೆ. ಮೊದಲ ಟೆಸ್ಟ್‌ ಜು. 12ರಂದು ಡೊಮಿನಿಕಾದ ರೊಸೇಯೂನಲ್ಲಿ ಆರಂಭವಾಗಲಿದೆ.

ಭಾರತದ ಕ್ರಿಕೆಟಿಗರು ಜು. 1-2ರಂದು ಬ್ರಿಜ್‌ಟೌನ್‌ಗೆ ಆಗಮಿಸಲಿದ್ದಾರೆ. ಜು. 8-9ರ ತನಕ ಇಲ್ಲಿಯೇ ಉಳಿದು ಅಭ್ಯಾಸ ನಡೆಸಿ ಬಳಿಕ ಡೊಮಿನಿಕಾಕ್ಕೆ ತೆರಳುವುದು ಬಿಸಿಸಿಐ ರೂಪಿಸಿರುವ ಯೋಜನೆ.

ಬಿಸಿಸಿಐ ಕೋರಿಕೆ ಮೇರೆಗೆ ಅಭ್ಯಾಸ ಶಿಬಿರದ ವೇಳೆ ಒಂದೆರಡು ಅಭ್ಯಾಸ ಪಂದ್ಯಗಳನ್ನೂ ಆಡಲಾಗುವುದು. ಆದರೆ ಇದಕ್ಕೆ ಪ್ರಥಮ ದರ್ಜೆಯ ಮಾನ್ಯತೆ ಇರುವುದಿಲ್ಲ. ಸ್ಥಳೀಯ ಕ್ರಿಕೆಟಿಗರನ್ನು ಬಳಸಿಕೊಂಡು ಈ ಪಂದ್ಯವನ್ನು ಆಡಲು ನಿರ್ಧರಿಸಲಾಗಿದೆ. ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಮತ್ತು ಕ್ರಿಕೆಟ್‌ ಬಾರ್ಬಡಾಸ್‌ ಈ ಪಂದ್ಯಗಳನ್ನು ಆಯೋಜಿಸುವ ಹೊಣೆ ಹೊತ್ತಿವೆ.

ಇದೇ ವೇಳೆ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ಆ್ಯಂಟಿಗುವಾದ “ಕೂಲಿಜ್‌ ಕ್ರಿಕೆಟ್‌ ಗ್ರೌಂಡ್‌”ನಲ್ಲಿ ಅಭ್ಯಾಸ ನಡೆಸಿ ಬಳಿಕ ಡೊಮಿನಿಕಾಕ್ಕೆ ಆಗಮಿಸಲಿದ್ದಾರೆ.
ಸೀಮಿತ ವಿಮಾನ ಟಿಕೆಟ್‌ ಲಭ್ಯ ಇರುವುದರಿಂದ ಭಾರತದ ಆಟಗಾರರು ಮತ್ತು ಸಹಾಯಕ ಸಿಬಂದಿ ಬೇರೆ ಬೇರೆ ತಂಡವಾಗಿ ಗಯಾನಾದ ಜಾರ್ಜ್‌ ಟೌನ್‌ಗೆ ಪ್ರಯಾಣಿಸಬೇಕಾಗುತ್ತದೆ.

Advertisement

2011ರ ಬಳಿಕ…
ಭಾರತ ತಂಡ ಡೊಮಿನಿಕಾದ ರೊಸೇಯೂನಲ್ಲಿನ “ವಿಂಡ್ಸರ್‌ ಪಾರ್ಕ್‌” ಅಂಗಳದಲ್ಲಿ ಕೊನೆಯ ಸಲ ಟೆಸ್ಟ್‌ ಆಡಿದ್ದು 2011ರಲ್ಲಿ. ಇದು ರೊಸೇಯೂನಲ್ಲಿ ಆಡಲಾದ ಪ್ರಪ್ರಥಮ ಟೆಸ್ಟ್‌ ಪಂದ್ಯವೂ ಆಗಿತ್ತು. ಈಗಿನ ತಂಡದಲ್ಲಿರುವ ಅಂದಿನ ಏಕೈಕ ಆಟಗಾರನೆಂದರೆ ವಿರಾಟ್‌ ಕೊಹ್ಲಿ. ಅಂದು ಭಾರತ ಚೇಸಿಂಗ್‌ ವೇಳೆ ಗೆಲ್ಲುವ ಪ್ರಯತ್ನವನ್ನು ಮಾಡದೆ ಪಂದ್ಯ ವನ್ನು ಡ್ರಾಗೊಳಿಸಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ಭಾರತ 47 ಓವರ್‌ಗಳ ಆಟದಲ್ಲಿ 180 ರನ್‌ ಗಳಿಸುವ ಸುಲಭ ಸವಾಲು ಪಡೆದಿತ್ತು. ಆದರೆ 32 ಓವರ್‌ಗಳನ್ನಾಡಿ 3 ವಿಕೆಟಿಗೆ 94 ರನ್‌ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ರೊಸೇಯೂನಲ್ಲಿ ಈವರೆಗೆ 5 ಟೆಸ್ಟ್‌ ಗಳನ್ನು ಆಡಲಾಗಿದೆ. ಮೂರರಲ್ಲಿ ವೆಸ್ಟ್‌ ಇಂಡೀಸ್‌ ಸೋತಿದೆ. ಒಂದನ್ನು ಗೆದ್ದಿದೆ. ಉಳಿದೊಂದು ಪಂದ್ಯ ಡ್ರಾಗೊಂಡಿದೆ.
ಕೊನೆಯ ಟೆಸ್ಟ್‌ ನಡೆದದ್ದು 2017ರಲ್ಲಿ. ಪ್ರವಾಸಿ ಪಾಕಿಸ್ಥಾನ ವಿರುದ್ಧದ ಈ ಪಂದ್ಯವನ್ನು ವಿಂಡೀಸ್‌ 101 ರನ್ನುಗಳಿಂದ ಕಳೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next