ಸಂಸಾರದ ಆರಂಭವಾಗುವುದು ಎಲ್ಲಿಂದ; ವ್ಯಕ್ತಿಗಳಿಬ್ಬರ ಹೊಂದಾಣಿಕೆಯಿಂದಲೋ ಅಥವಾ ಅಡುಗೆ ಮನೆಯಿಂದಲೊ? ಮೊನ್ನೆ ಸಾಮಾಜಿಕ ಜಾಲತಾಣ ಮುಖಪುಸ್ತಕ (Facebook) ನಲ್ಲಿ ಹೊಸತಾಗಿ ಮದುವೆಯಾದ ಸ್ನೇಹಿತರೊಬ್ಬರು, ಹೆಂಡತಿಯ ತರಹೇವಾರಿ ಅಡುಗೆಯ ಚಿತ್ರಗಳನ್ನು ಹಾಕಿ ಹೆಂಡತಿಯನ್ನು ಹೊಗಳಿದ್ದರು. ಇದೇನು, ಇವಳು ಮೊಸರಲ್ಲಿ ಕಲ್ಲು ಹುಡುಕುತ್ತಾಳೆ ಅಂತ ನನ್ನನ್ನು ಬೈಯಲಾರಂಭಿಸಬೇಡಿ? ಆ ವಿಷಯ ಗಂಡ ಮತ್ತು ಹೆಂಡತಿ ನಡುವೆ ಮುಗಿದುಹೋಗಿದ್ದರೆ ನಾನೂ ಒಂದು ಲೈಕ್ ಹಾಕಿ ಖುಷಿ ಪಡುತ್ತಿದ್ದೆ. ಆದರೆ, ಅದಕ್ಕೊಬ್ಬ ಹಿರಿಯರು ಕಮೆಂಟ್ ಹಾಕಿದ್ದರು. ಅದೇ ಇವತ್ತಿನ ಬರಹಕ್ಕೆ ಪ್ರೇರಣೆ!ಆ ಕಮೆಂಟ್ ಏನೆಂದು ಕೇಳುತ್ತೀರಾ?
“”ಬೇಗ ಮದುವೆಯಾಗಿದ್ದರೆ ಇಷ್ಟೂ ದಿನ ಚೆನ್ನಾದ ಊಟ ಮಾಡಬಹುದಿತ್ತಾ? ನೀನು ಕೈ ಸುಟ್ಟುಕೊಳ್ಳುವುದು ತಪ್ಪುತ್ತಿತ್ತಾ?”
ಅಯ್ಯೋ, ಇದರಲ್ಲೇನು ತಪ್ಪು? ಹೆಂಡತಿ, ಗಂಡನಿಗೆ ಒಳ್ಳೆಯ ಅಡುಗೆ ಮಾಡಿ ಬಡಿಸುವುದು, ಗಂಡ, ಹೆಂಡತಿಗೆ ಉಡುಗೊರೆ ತರುವುದು… ಇವೆಲ್ಲವು ಮಾಮೂಲಿ ಸಂಗತಿಗಳೇ. ಏನಿಲ್ಲಿ ವಿಶೇಷ, ಇವು ಪ್ರೀತಿಯೆಂಬ ಭಾವವನ್ನು ವಿಸ್ತರಿಸುವ ಅಭಿವ್ಯಕ್ತಿಗಳಲ್ಲವೆ? ಹೌದು, ಆದರೆ, ಅಡುಗೆಗೆ ಅಂತಲೇ ಮದುವೆ ಆಗುವುದು, ಅಂದರೆ ಹೆಂಡತಿ ಅಡುಗೆ ಮಾಡಲೋಸುಗ ಇರುವ ಉಪಕರಣ ಎಂಬ ಭಾವನೆಯ ಬಗೆಗಷ್ಟೇ ನನ್ನ ಆಕ್ಷೇಪವಿರುವುದು.
ಮದುವೆಯೆಂಬುದಕ್ಕೆ ಎಷ್ಟೊಂದು ವ್ಯಾಖ್ಯಾನಗಳಿವೆ! ಮನಸುಗಳ ಮಿಲನ ಎಂದು ಕೆಲವರು ಕರೆದರೆ, ಇನ್ನು ಕೆಲವರಿಗೆ, ಅದು ಪ್ರೀತಿಯೆಂಬ ದೈವಿಕ ಸಂಕಲ್ಪಕ್ಕೆ ಲೋಕ ತೊಡಿಸುವ ಕಂಕಣ. ಮಾನವ ಜೀವನದ ಮುಂದುವರಿಕೆಗಾಗಿ ಇರುವ “ಸಂಸ್ಥೆ’ ಎಂದು ಮದುವೆಯನ್ನು ಬಣ್ಣಿಸುವವರಿದ್ದಾರೆ. ಇಂಥ ಮಹಣ್ತೀದ ಸಂಗತಿಯನ್ನು ಕೇವಲ ಅಡುಗೆ, ಊಟ, ಮನೆವಾರ್ತೆಗಳಂಥ ಸಂಗತಿಗಳಿಗೆ ಸೀಮಿತವಾಗಿಸಬಹುದೆ?ಅಡುಗೆ ಎಂದರೆ ಕಲೆ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಅದು, ಹೆಣ್ಣಿಗೆ ಮಾತ್ರವಲ್ಲ , ಯಾರಿಗೂ ಒಲಿಯಬಹುದಾದ ಕಲೆಯೇ. ಅಡುಗೆಯನ್ನು ಗಂಡು- ಹೆಣ್ಣು ಇಬ್ಬರೂ ತಿಳಿದಿರಲೇಬೇಕಾದದ್ದು ಆವಶ್ಯಕತೆ ಕೂಡ. ಹಾಗಿರುವಾಗ ಮದುವೆಯ ಅನುಬಂಧವನ್ನು ಕೇವಲ “ಹೆಣ್ಣಿನ ಪಾಕ ಕೌಶಲ’ ಕ್ಕೆ ಸೀಮಿತವಾಗಿಸುವುದು ಸರಿಯೆ?
ಆದಿಮಾನವನ ಚರಿತ್ರೆಯನ್ನು ಅವಲೋಕಿಸಿದರೆ, ಗಂಡಸು ಬೇಟೆ, ಆಹಾರ ಸಂಗ್ರಹಣೆಗೆಂದು ಹೊರಗೆ ಹೊರಟ ಕಾಲದಲ್ಲಿ ಮನೆಯ ಹೊಣೆಗಾರಿಕೆ ಹೆಣ್ಣಿಗೆ ಸಹಜವಾಗಿಯೇ ಬಂದಿತ್ತು. ಆಹಾರ ಸಂಗ್ರಹ ಗಂಡು ಮಾಡಬೇಕಾದರೆ, ಪಾಕ ಕ್ರಿಯೆ ಮಾಡಬೇಕಾದವಳು ಹೆಣ್ಣು ಎಂಬುದು ಒಂದು ರೀತಿಯ ಒಪ್ಪಂದದಲ್ಲಿ ಮಾಡಿಕೊಂಡ ಕರ್ತವ್ಯದ ವಿಭಜನೆಯಾಗಿತ್ತು. ಕಾಲಚಕ್ರ ತಿರುಗಿದಂತೆ ಜನರ ನಡೆ, ನಡಾವಳಿಗಳು ಬದಲಾದವು. ಎಲ್ಲದರಲ್ಲೂ ಆದ ಪರಿವತìನೆ ಅಡುಗೆ ಮನೆಯಲ್ಲೂ ಕಾಣಬೇಕಲ್ಲವೆ? ಗಂಡುಮಗ ಹೊರಗೆ ಆಹಾರ ಸಂಗ್ರಹಣೆಗೆ ಹೋಗುವುದನ್ನು ನಿಲ್ಲಿಸಿ, ನೌಕರಿಗೆ ಹೋಗಲಾರಂಭಿಸಿದರು. ಹೆಣ್ಣುಮಗಳು ಮಾತ್ರ ಅಡುಗೆ ಮನೆಯಲ್ಲಿಯೇ ಉಳಿದರು. ವಿದ್ಯೆ ಪಡೆದು ನೌಕರಿ ಪಡೆದರೂ ಅವಳನ್ನು ಅಡುಗೆ ಮನೆಯ ನಂಟು ಬಿಡಲಿಲ್ಲ. ಅಡುಗೆ ಗೊತ್ತಿಲ್ಲದ ಹೆಣ್ಣುಮಕ್ಕಳನ್ನು “ಅಜ್ಞಾನಿ’ಗಳಂತೆ ನೋಡುವವರಿದ್ದಾರೆ. ಗಂಡು ಮಕ್ಕಳಂತೆ ಹೆಣ್ಣುಗಳೂ ಡಿಗ್ರಿಯ ಮೇಲೆ ಡಿಗ್ರಿ ಪಡೆಯಲು ಪರಿಶ್ರಮ ಪಡುತ್ತಿರುವಾಗ ಹೆಣ್ಣು ಮದುವೆ ಆಗುವವರೆಗೂ ಅಡುಗೆ ಮನೆಗೆ ಕಾಲಿಡದೇ ಇದ್ದರೆ ಅದು ಆಕೆಯ ತಪ್ಪು ಹೇಗಾದೀತು? ಮದುವೆ ಆದ ತಕ್ಷಣ ಒಳ್ಳೆಯ ಅಡುಗೆ ಮಾಡಿ ಬಡಿಸಿದರೆ ಆಕೆಯ ಹೆಣ್ತನವನ್ನು ಸಾರ್ಥಕವೆಂದು ಭಾವಿಸಲಾಗುತ್ತದೆ. ಇದು ಸರಿಯೆ? ಒಂದು ವೇಳೆ ತನ್ನ ಬಿಡುವಿಲ್ಲದ ಕೆಲಸಗಳ ಮಧ್ಯೆ ಸರಿಯಾಗಿ ಅಡುಗೆ ಮಾಡಲಾಗದ ಹೆಣ್ಣನ್ನು ತಪ್ಪಿತಸ್ಥಳಂತೆ ಯಾಕೆ ನೋಡಬೇಕು, ಅವಳಾದರೂ ತಾನು ತಪ್ಪಿತಸ್ಥಳಂತೆ ಯಾಕೆ ತನ್ನಲ್ಲಿ ತಾನು ಅಂದುಕೊಳ್ಳಬೇಕು?
ಆಂಗ್ಲ ಭಾಷೆಯಲ್ಲೊಂದು ನಾಣ್ನುಡಿಯಿದೆ: “ಗಂಡಸಿನ ಹೃದಯಕ್ಕೆ ಲಗ್ಗೆ ಆತನ ಹೊಟ್ಟೆಯ ಮೂಲಕ !’ ಇದು ಪಿತೃಪ್ರಧಾನ ಸಮಾಜವು ಗಂಡು-ಹೆಣ್ಣಿನ ಸಂಬಂಧದಲ್ಲಿ ಹೆಣ್ಣಿಗೆ ನೀಡಿದ ಸ್ಥಾನ. ಅರ್ಜುನನಂತಹ ವೀರನನ್ನು ಪಡೆದ ವೀರಾಂಗನೆ ದ್ರೌಪದಿ ಮಹಾಭಾರತದಲ್ಲಿ ಪಾಂಡವರಿಗೆ ಸಹಾಯ ಮಾಡುವುದು ತನ್ನ ಅಕ್ಷಯ ಪಾತ್ರೆಯಿಂದ ಋಷಿಗಳ ಹೊಟ್ಟೆ ತುಂಬಿಸುವಲ್ಲಿ ! ಜ್ಞಾನಕ್ಕೆ ಹೆಸರಾದ ಜನಕನ ಮಗಳು ಜಾನಕಿ ರಾಮನಿಗೆ ಸರಿಸಮಾನವಾದ ಯೋಚನಾಲಹರಿ ಹೊಂದಿದ್ದರೂ, ಆಕೆ ರಾಮಾಯಣದಲ್ಲಿ ಪ್ರಿಯವಾಗುವುದು ರಾಮ-ಲಕ್ಷ್ಮಣರು ತಂದ ಆಹಾರವನ್ನು ಅಚ್ಚುಕಟ್ಟಾಗಿ ಬೇಯಿಸಿ ನಿಭಾಯಿಸುವುದರಲ್ಲಿ!
ಬದುಕಿನಲ್ಲಿ ಊಟಕ್ಕೇ ಅತಿ ಹೆಚ್ಚು ಮಹತ್ವ. ಮನುಷ್ಯನ ಮೂಲ ಆವಶ್ಯಕತೆ ಅದು, ಖಂಡಿತ. ಆದರೆ “ಸಮಬಾಳು, ಸಮಪಾಲು’ ಎಂಬ ಮಾತು ರೂಢಿಯಲ್ಲಿರುವ ಈ ಕಾಲದಲ್ಲಿ ಜೊತೆಗೂಡಿ ಜೀವಿಸಲೆಂದು ಒಟ್ಟಾಗುವ ಹೆಣ್ಣು- ಗಂಡಿನಲ್ಲಿ ಅಡುಗೆಯ ಕೆಲಸ ಕೇವಲ ಹೆಣ್ಣಿನ ಪಾಲಿನದ್ದು ಎಂದಾಗಬಾರದಲ್ಲವೆ?
ಸುಖ ಸಂಸಾರದ ಸೂತ್ರ ಇಬ್ಬರ ಸಂತೋಷದ ಮೇಲೆಯೇ ನಿಂತಿದೆ. ಎಲ್ಲದರಲ್ಲೂ ಜೊತೆಯಾಗಿ ನಡೆಯುವ ಗಂಡು-ಹೆಣ್ಣು, ಅಡುಗೆಮನೆಯಲ್ಲೂ ಹೊಂದಾಣಿಕೆ ಮಾಡಿಕೊಂಡರೆ ಇಬ್ಬರ ನಡುವಿನ ಪ್ರೀತಿ ಹೆಚ್ಚಾದೀತು. ಹೊರಗೆ ದುಡಿದು ಬರುವ ಹೆಣ್ಣುಮಕ್ಕಳಿಗೆ ಸದಾ ಕಾಡುವ ತಪ್ಪಿತಸ್ಥ ಭಾವನೆ, ಕೀಳರಿಮೆಯಿಂದ ಮುಕ್ತಿ ಸಿಕ್ಕೀತು.
– ರಶ್ಮಿ ಕುಂದಾಪುರ